ಆನೇಕಲ್(ಆ.08): ಅದು ಹೇಳಿ ಕೇಳಿ ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದ ಗಡಿ ನಾಡು. ಅಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ರಾಗಿ ಉತ್ಪಾದನೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ರಾಗಿ ಕಣಜ ಸೊರಗಿದೆ. ಮಳೆ ಇಲ್ಲದೇ ಬರದ ಛಾಯೆ ಆವರಿಸಿದ್ದು, ಮಳೆಗಾಗಿ ಅಲ್ಲಿನ ರೈತ ದೇವರಿಗೆ ಮೊರೆಯಿಟ್ಟಿದ್ದಾನೆ. ಹೌದು, ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕು ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ಮಳೆ ಆಧಾರಿತ ಕೃಷಿ ನೆಚ್ಚಿಕೊಂಡಿರುವ ಇಲ್ಲಿನ ರೈತರು ರಾಗಿಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಆದ್ರೆ ಈ ಬಾರಿ ರೈತನಿಗೆ ಮಳೆರಾಯ ಕೈ ಕೊಡುವ ಲಕ್ಷಣ ತೋರುತ್ತಿದೆ. ಕಳೆದ ಒಂದು ತಿಂಗಳಿಂದ ಮಳೆಯಿಲ್ಲದೆ ರಾಗಿ ಬೆಳೆ ಸೊರಗಿದೆ.
ಕಳೆದ ಒಂದು ತಿಂಗಳಿಂದ ಮಳೆಯಾಗದೆ ಬರದ ಛಾಯೆ ಆವರಿಸಿದೆ. ಬೆಳೆದು ನಿಂತ ರಾಗಿ, ಅವರೆ, ಜೋಳ ಹೊಲ ಗದ್ದೆಗಳಲ್ಲಿ ಒಣಗುತ್ತಿದೆ. ಅಂದಹಾಗೆ ಮಳೆಗಾಲದ ಆರಂಭದಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗಿತ್ತು. ರೈತರು ಸಹ ಭೂಮಿಯನ್ನು ಹದ ಮಾಡಿ ರಾಗಿ, ಅವರೆ, ಜೋಳವನ್ನು ಬಿತ್ತನೆ ಮಾಡಿದ್ದರು. ಬೆಳೆ ಸಹ ಕಳೆ ತೆಗೆಯುವ ಹಂತಕ್ಕೆ ಬಂದಿದೆ. ಆದರೆ ಇದೀಗ ಮಳೆ ಮಾಯವಾಗಿರುವ ಪರಿಣಾಮ ಬೆಳೆ ಸೊರಗುತ್ತಿದೆ.
Karnataka Rain: ಇಂದಿನಿಂದ ರಾಜ್ಯದಲ್ಲಿ ಮತ್ತೆ ಮಳೆಯಬ್ಬರ; ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
ಆನೇಕಲ್ ತಾಲ್ಲೂಕಿನಲ್ಲಿ ಬಹುತೇಕ ರೈತರು ಮಳೆಯಾಧಾರಿತ ಕೃಷಿ ಮಾಡುತ್ತಿದ್ದು, ಕೃಷಿಯನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದಾರೆ. ಬಿತ್ತನೆ ಮುಗಿದು ಬೆಳೆ ಬೆಳೆದು ನಿಂತಿದೆ. ಆದರೆ ಸಕಾಲಕ್ಕೆ ಮಳೆಯಿಲ್ಲದೆ ಬೆಳೆ ಹಾಳಾಗುತ್ತಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಇದರಿಂದ ಜಾನುವಾರುಗಳು ಮೇವಿಲ್ಲದೆ ಪರದಾಡಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ