• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಬೆಳೆ ನೀರು ಪಾಲು; ಗಾಯದ ಮೇಲೆ ಬರೆ ಎಳೆದ ಮಳೆರಾಯ...! 

ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಬೆಳೆ ನೀರು ಪಾಲು; ಗಾಯದ ಮೇಲೆ ಬರೆ ಎಳೆದ ಮಳೆರಾಯ...! 

ಮಳೆಯಿಂದಾಗಿ ನಾಶವಾಗಿರುವ ಬೆಳೆ

ಮಳೆಯಿಂದಾಗಿ ನಾಶವಾಗಿರುವ ಬೆಳೆ

ಯಾದಗಿರಿ ಜಿಲ್ಲೆಯ ಗುರುಸಣಗಿ, ನಾಯ್ಕಲ್,ಹತ್ತಿಕುಣಿ,ಬಂದಳ್ಳಿ ಮೊದಲಾದ ಕಡೆ ರೈತರು ಇನ್ನೇನು  ಹೆಸರು ಕಟಾವು ಮಾಡಿ ರಾಶಿ ಮಾಡಬೇಕೆನ್ನುವಷ್ಟರಲ್ಲಿಯೇ ಮಳೆ ಸುರಿದ ಹಿನ್ನೆಲೆ  ಕೈಗೆ ಬಂದ ತುತ್ತು ಬಾಯಿಗೆ ಬರಲಾರದಂತಾಗಿದೆ.

  • Share this:

ಯಾದಗಿರಿ(ಆ.20): ಕಳೆದ ವರ್ಷದ ಮಳೆ ಹಾಗೂ ಪ್ರವಾಹದ ಘಟನೆ ಮಾಸುವ ಮುನ್ನವೇ ಮತ್ತೆ ವರುಣನ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದ್ದು,  ಇದು ಜಿಲ್ಲೆಯ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಸುರಿದ ಮಳೆ ಅವಾಂತರಕ್ಕೆ ಹೆಸರು, ತೊಗರಿ, ಹತ್ತಿ, ಭತ್ತ, ಜೋಳ ಹಾನಿಯಾಗಿದ್ದು ರೈತರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಳೆದ ಜೂನ್ ನಿಂದ ಅಗಸ್ಟ್ 19 ರ ವರಗೆ 360 ಮಿ.ಮೀ ಗರಿಷ್ಠ ಮಳೆಯಾಗಬೇಕಿತ್ತು. ಆದರೆ 476 ಮಿ.ಮೀ. ಮಳೆಯಾಗಿದ್ದು, ಪ್ರತಿಶತ 55 ರಷ್ಟು ಮಳೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 99554 ಹೆಕ್ಟೇರ್ ತೊಗರಿ, 21283 ಹೆಕ್ಟೇರ್ ಹೆಸರು, 136792 ಹೆಕ್ಟೇರ್​ ಪ್ರದೇಶ ಹತ್ತಿ ಬೆಳೆಯಲಾಗಿದೆ. 69128 ಹೆಕ್ಟೇರ್ ಭತ್ತ, ಸಜ್ಜೆ 2609 ಹೆಕ್ಟೇರ್ ಹಾಗೂ ಜೋಳ 45 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈಗಾಗಲೇ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಪರಿಣಾಮ ಹೆಸರು, ಹತ್ತಿ, ಭತ್ತ, ತೊಗರಿ ಬೆಳೆ ಕೂಡ ನೀರು ಪಾಲಾಗಿ ಹಾನಿಯಾಗಿದೆ‌. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಈಗ ಬೆಳೆ ಹಾನಿ ಸಮೀಕ್ಷೆ ಮಾಡುತ್ತಿದ್ದಾರೆ. ಸದ್ಯಕ್ಕೆ ಹೆಸರು, ತೊಗರಿ, ಹತ್ತಿ ಸೇರಿ 6000 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಇನ್ನೂ ಸಮೀಕ್ಷೆ ಕಾರ್ಯ ನಡೆಯುತ್ತಿದೆ.


ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಗುರುಸಣಗಿ ಗ್ರಾಮದ ರೈತ ಇಬ್ರಾಹಿಂ ಮಾತನಾಡಿ, ಪ್ರತಿವರ್ಷ ನಾವು ಬೆಳೆ ಬೆಳೆದು ಲಾಸ್ ಆಗಲತಿವಿ, ಹೊಲಕ್ಕೆ ಮಳೆ ನೀರು ನುಗ್ಗಿ ಹೆಸರು, ತೊಗರಿ ಹಾನಿಯಾಗದ, ನಮ್ಮ ಹೊಲಕ್ಕ ಮಳೆ ನೀರು ನುಗ್ಗದಂತೆ ಸರಕಾರ ಎನಾರ್ ಮಾಡಬೇಕು ಮತ್ತು ಪರಿಹಾರ ಕೊಡಬೇಕೆಂದು ಹೇಳಿದರು.


Video: ಹಸುವಿಗೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್​ನಲ್ಲಿ ಕರೆದುಕೊಂಡ ಹೋದ ರೈತ!


ನಿರಂತರ ಮಳೆಗೆ ಯಾದಗಿರಿ, ಶಹಾಪುರ,ಸುರಪುರ,ವಡಗೇರಾ,ಗುರುಮಠಕಲ್,ಹುಣಸಗಿ ತಾಲೂಕಿನ ವಿವಿಧೆಡೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಜಿಲ್ಲೆಯ ಗುರುಸಣಗಿ, ನಾಯ್ಕಲ್,ಹತ್ತಿಕುಣಿ,ಬಂದಳ್ಳಿ ಮೊದಲಾದ ಕಡೆ ರೈತರು ಇನ್ನೇನು  ಹೆಸರು ಕಟಾವು ಮಾಡಿ ರಾಶಿ ಮಾಡಬೇಕೆನ್ನುವಷ್ಟರಲ್ಲಿಯೇ ಮಳೆ ಸುರಿದ ಹಿನ್ನೆಲೆ  ಕೈಗೆ ಬಂದ ತುತ್ತು ಬಾಯಿಗೆ ಬರಲಾರದಂತಾಗಿದೆ. ಹೆಸರು ರಾಶಿ ಮಾಡಿ ಸಾಲ ಕಟ್ಟಬೇಕೆಂದರೆ ಹೆಸರು ಬೆಳೆ ಹಾನಿಯಿಂದ ರೈತರು ಕಣ್ಣೀರು ಹಾಕುವಂತಾಗಿದೆ.


ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸರಕಾರ ಬೆಳೆಹಾನಿಯಾದ ರೈತರಿಗೆ ಹೆಚ್ಚಿನ ಪರಿಹಾರ ಕಲ್ಪಿಸಬೇಕೆಂದು ಒತ್ತಾಯ ಮಾಡಿದ್ದಾರೆ.


ಬೆಳೆ ಹಾನಿಯಿಂದ ಜಿಲ್ಲೆಯ ಅನ್ನದಾತರು ಈಗ ಜೀವನ ನಡೆಸುವದು ಹೇಗೆ ಎಂದು ಚಿಂತೆ ಮಾಡುವಂತಾಗಿದೆ. ಸರಕಾರ ಕೂಡಲೇ ಸಮೀಕ್ಷೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ.

top videos
    First published: