ಸಚಿವರ ಮಾತಿಗೂ ಬಗ್ಗದ ಬ್ಯಾಂಕ್​​​ ಅಧಿಕಾರಿಗಳು ; ರೈತರ ಪ್ರೋತ್ಸಾಹಧನ ಸಾಲದ ಖಾತೆಗೆ ಜಮಾ

ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹಾರ ನೀಡಿದೆ. ಫಸಲ್‌ ಭೀಮಾ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಇನ್ನೊಂದೆಡೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣವೂ ಬಂದಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ.

news18-kannada
Updated:January 16, 2020, 7:49 AM IST
ಸಚಿವರ ಮಾತಿಗೂ ಬಗ್ಗದ ಬ್ಯಾಂಕ್​​​ ಅಧಿಕಾರಿಗಳು ; ರೈತರ ಪ್ರೋತ್ಸಾಹಧನ ಸಾಲದ ಖಾತೆಗೆ ಜಮಾ
ಪ್ರಾತಿನಿಧಿಕ ಚಿತ್ರ.
  • Share this:
ಹುಬ್ಬಳ್ಳಿ(ಜ.16) : ಭೀಕರ ಮಳೆಗೆ ಉತ್ತರ ಕರ್ನಾಟಕದ ರೈತ ಸಮುದಾಯ ಅಕ್ಷರಶಃ ತತ್ತರಿಸಿ ಹೋಗಿತ್ತು. ಬೆಳೆದಿದ್ದ ಅಲ್ಪಸ್ವಲ್ಪ ಬೆಳೆಯೂ ಪ್ರವಾಹದಲ್ಲಿ ಕೊಚ್ಚಿಹೋಗಿ ಜೀವನ ನಡೆಸುವುದೇ ದುಸ್ಥರವಾಗಿತ್ತು. ಪ್ರಕೃತಿ ನೀಡಿದ ಆಘಾತದಿಂದ ಚೇತರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಹೊರಟಿದ್ದವರಿಗೆ ಮತ್ತೊಂದು ಆಘಾತ ಎದುರಾಗಿದೆ.

ಪ್ರವಾಹ ಪೀಡಿತರ ಕೈಗೆ ಬಂದಿಲ್ಲ ಪರಿಹಾರ

ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ವರುಣ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಮಳೆಯ ಆರ್ಭಟಕ್ಕೆ ಮನೆಗಳು ಸೇರಿದಂತೆ ರಸ್ತೆ- ಸೇತುವೆಗಳು ಕೊಚ್ಚಿ ಹೋಗಿವೆ. ರೈತರು ಬೆಳೆದ ಬೆಳೆಗಳು ಜಲಾಹುತಿಯಾಗಿವೆ. ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ಹೆಸರು, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳು ಸಂಪೂರ್ಣ ನಾಶಹೊಂದಿವೆ. ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹಾರ ನೀಡಿದೆ. ಫಸಲ್‌ ಭೀಮಾ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಇನ್ನೊಂದೆಡೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣವೂ ಬಂದಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ.

ರೈತರ ಖಾತೆ ಬ್ಲಾಕ್

ಪ್ರತಿ ಹೆಕ್ಟೇರ್‌ಗೆ ಹದಿನೈದ ರಿಂದ ಇಪ್ಪತ್ತು ಸಾವಿರ ರೂಪಾಯಿವರೆಗೆ ಬೆಳೆಹಾನಿ ಪರಿಹಾರ ಬಂದಿದೆ. ಎರಡರಿಂದ ಆರು ಲಕ್ಷ ರೂಪಾಯಿವರೆಗೆ ಫಸಲ್‌ ಭೀಮಾ ಯೋಜನೆಯ ಪರಿಹಾರ ಧನ ಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ ಕಿಸಾನ್‌ ಸಮ್ಮಾನ್‌ ಯೋಜನೆಯ ಆರು ಸಾವಿರ ಮತ್ತು ಯಡಿಯೂರಪ್ಪನವರು ಘೋಷಿಸಿರುವ ನಾಲ್ಕು ಸಾವಿರ ರೂಪಾಯಿ ಸೇರಿ ಒಟ್ಟು ಹತ್ತು ಸಾವಿರ ರೂಪಾಯಿ ರೈತರ ಅಕೌಂಟ್‌ಗೆ ಬಂದಿದೆ.

ಪರಿಹಾರ ಹಣ ಸಾಲದ ಖಾತೆಗೆ ಜಮೆ

ಬ್ಯಾಂಕ್‌ಗೆ ಹೋಗುವ ರೈತರಿಗೆ ಈ ಹಣವನ್ನು ಡ್ರಾ ಮಾಡಲು ಅವಕಾಶ ಕೊಡುತ್ತಿಲ್ಲ. ಬದಲಾಗಿ ಕಟ್ಬಾಕಿ ಸಾಲಕ್ಕೆ ಜಮಾ ಮಾಡಿಕೊಂಡಿರುವುದಾಗಿ ಹೇಳಿ ವಾಪಸ್‌ ಕಳಿಸಲಾಗುತ್ತಿದೆ. ರೈತರ ಖಾತೆಗೆ ಬಂದಿರುವ ಹಣವನ್ನೆಲ್ಲ ಬ್ಲಾಕ್‌ ಮಾಡಲಾಗಿದೆ. ಸಾಲದ ಮೊತ್ತಕ್ಕೆ ಹಣವನ್ನೆಲ್ಲ ಜಮಾವಣೆ ಮಾಡಿಕೊಂಡಿರುವುದಾಗಿ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ.ಸಚಿವರ ಮಾತಿಗಿಲ್ಲ ಕಿಮ್ಮತ್ತು

ಈ ಕುರಿತು ರೈತರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್‌ ಗಮನಕ್ಕೆ ತಂದಿದ್ದಾರೆ. ಲೀಡ್‌ ಬ್ಯಾಂಕ್‌ ಸಭೆಯಲ್ಲಿ ವಿಷಯ ಪ್ರಸ್ತಾವಣೆಗೆ ಬಂದಿದೆ. ರೈತರಿಗೆ ಬಂದಿರುವ ಪರಿಹಾರ ಮೊತ್ತ, ವಿಮೆ ಹಣ ಮತ್ತು ಕಿಸಾನ್‌ ಸಮ್ಮಾನ್‌ ಯೋಜನೆ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆಯಲ್ಲಿ ಒಪ್ಪಿಕೊಂಡ ಅಧಿಕಾರಿಗಳು ನಂತರ ಯಾರ ಮಾತಿಗೂ ಕ್ಯಾರೇ ಅನ್ನುತ್ತಿಲ್ಲ. ಯಥಾ ಪ್ರಕಾರ ತಮ್ಮ ಕಾಯಕ ಮುಂದುವರಿಸಿದ್ದಾರೆ. ರೈತರ ಖಾತೆಗೆ ಬರುವ ಹಣವನ್ನೆಲ್ಲ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಪರಿಹಾರ ಧನಕ್ಕಾಗಿ ಪರಿತಪಿಸುತ್ತಿರುವ ಅನ್ನದಾತರು

ಮೊದಲೇ ಸಂಕಷ್ಟದಲ್ಲಿರುವ ರೈತರು ಬ್ಯಾಂಕ್‌ಗಳ ನಡೆಯಿಂದಾಗಿ ಮತ್ತಷ್ಟು ಕಂಗಾಲಾಗಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಮತ್ತು ಕಿರೆೇಸೂರು ಗ್ರಾಮದ ಸುಮಾರು 3500 ರೈತರ ಬ್ಯಾಂಕ್‌ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ. ಪ್ರವಾಹ ಸಂತ್ರಸ್ತರ ಪರಿಹಾರ ಹಣವನ್ನೂ ಬ್ಯಾಂಕ್‌ಗಳು ಸಾಲಖಾತೆಗೆ ಜಮಾ ತೆಗೆದುಕೊಳ್ಳುತ್ತಿವೆ.

ಇದನ್ನೂ ಓದಿ : ​​​​ಬಗೆಹರಿಯದ ಕೆಪಿಸಿಸಿ ಅಧ್ಯಕ್ಷ ಗಾದಿ ಕಗ್ಗಂಟು - ಬರಿಗೈಲಿ ವಾಪಸ್ಸಾದ ಸಿದ್ಧರಾಮಯ್ಯ - ಡಿಕೆಶಿ ಲಾಬಿ ಆರಂಭ

ನೆರೆಯಿಂದ ಕಂಗಾಲಾಗಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿವೆ. ಸಂಕಷ್ಟದಲ್ಲಿರುವ ರೈತರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಖಾತೆಗೆ ಬಂದಿರುವ ಪರಿಹಾರ ಧನವನ್ನು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಅರಣ್ಯ ರೋಧನವಾಗಿರುವ ರೈತರ ಗೋಳಾಟಕ್ಕೆ ಸ್ಪಂಧನೆ ಸಿಗುತ್ತಾ ಕಾಯ್ದು ನೋಡಬೇಕು.
Published by: G Hareeshkumar
First published: January 16, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading