ಬಿಕ್ಕಟ್ಟು ಬಗೆಹರಿಸುವುದು ಸದನದಲ್ಲಿ ರೋಮಾಂಚನಕಾರಿ ಚಿತ್ರ ನೋಡಿದ ಹಾಗಲ್ಲ; ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಲೇವಡಿ

Laxman Savadi: 2012ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ನೀಲಿಚಿತ್ರ ವೀಕ್ಷಿಸಿ ಲಕ್ಷ್ಮಣ ಸವದಿ ವಿವಾದಕ್ಕೊಳಗಾಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್, ಬಿಕ್ಕಟ್ಟುಗಳನ್ನು ಪರಿಹರಿಸುವುದು ಸದನದಲ್ಲಿ ರೋಮಾಂಚನಕಾರಿ ಚಿತ್ರ ವೀಕ್ಷಿಸಿದಷ್ಟು ಸುಲಭವಲ್ಲ ಎಂದು ಲೇವಡಿ ಮಾಡಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 13): ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಲು ಸಾಧ್ಯವೇ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಡಾಖಂಡಿತವಾಗಿ ಹೇಳಿದ್ದಾರೆ. ಸರ್ಕಾರದ ನಡೆಯನ್ನು ವಿರೋಧಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಬಿಕ್ಕಟ್ಟುಗಳನ್ನು ಪರಿಹರಿಸುವುದು ಎಂದರೆ ಸದನದಲ್ಲಿ ಕುಳಿತು ರೋಮಾಂಚನಕಾರಿ ವಿಡಿಯೋ ವೀಕ್ಷಿಸಿದಂತಲ್ಲ ಎಂದು ಲೇವಡಿ ಮಾಡಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ ಪಕ್ಷದಿಂದ ಸಾರಿಗೆ ನೌಕರರ ಮುಷ್ಕರದ ಕುರಿತು ಇಂದು ಮಹತ್ವದ ಟ್ವೀಟ್ ಮಾಡಲಾಗಿದ್ದು, ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತು ಹೋಗಿದೆ. ಪ್ರಯಾಣಿಕರ ಪರದಾಟ, ಅನಾನುಭವಿ ಖಾಸಗಿ ಚಾಲಕರ ಪೀಕಲಾಟ, ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆಯ ನಡುವೆ ಜನರು ಸಿಲುಕಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ, ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್​ನಲ್ಲಿ "ರೋಮಾಂಚನದ" ಚಿತ್ರ ವೀಕ್ಷಿಸಿದಂತಲ್ಲ ಎಂದು ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟ್ವಿಟ್ ಮೂಲಕ ಟಾಂಗ್ ಕೊಡಲಾಗಿದೆ.2012ರಲ್ಲಿ ಸದನದಲ್ಲಿ ನೀಲಿಚಿತ್ರದ ವಿಡಿಯೋ ವೀಕ್ಷಿಸಿ ಲಕ್ಷ್ಮಣ ಸವದಿ ವಿವಾದಕ್ಕೊಳಗಾಗಿದ್ದರು. ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಸಿಸಿ ಪಾಟೀಲ್ ಅಧಿವೇಶನದಲ್ಲಿ ಕುಳಿತು ಅಶ್ಲೀಲ ಚಿತ್ರವನ್ನು ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿತ್ತು. 2012ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಹಕಾರ ಸಚಿವರಾಗಿದ್ದ ಲಕ್ಷ್ಮಣ ಸವದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ವಿಧಾನಸಭೆಯಲ್ಲಿ ಕಲಾಪ ನಡೆಯುವಾಗಲೇ ಮೊಬೈಲ್​ನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿದ್ದರು. ಇದು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿ ದೊಡ್ಡ ಸುದ್ದಿಯಾಗಿತ್ತು. ಆ ಘಟನೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್ ಪಕ್ಷ, ಬಿಕ್ಕಟ್ಟುಗಳನ್ನು ಪರಿಹರಿಸುವುದು ಸದನದಲ್ಲಿ ರೋಮಾಂಚನಕಾರಿ ಚಿತ್ರ ವೀಕ್ಷಿಸಿದಷ್ಟು ಸುಲಭವಲ್ಲ ಎಂದು ಲೇವಡಿ ಮಾಡಿದೆ.

ನಿನ್ನೆ ಸಾರಿಗೆ ನೌಕರರ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೀವು 2 ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಯಾವ ಸಚಿವ, ಶಾಸಕನೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದುವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲಾ ಇಲಾಖೆಯಲ್ಲೂ ಆಡಳಿತಾತ್ಮಕ ವಿಭಾಗದಲ್ಲಿ ನೌಕರರಿಂದ ಇಬ್ಬಿಬ್ಬರನ್ನು ನೇಮಕ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಸರ್ಕಾರಿ ನೌಕರರಾಗಿ ಪರಿಗಣಿಸಲು ನೀವು ಆಗ್ರಹ ಮಾಡಿದ್ದೀರಿ. ಕೋವಿಡ್ ವಿಮೆ ಕೇಳಿದ್ದೀರಿ. ಆದರೆ, ಸರ್ಕಾರದಿಂದ ಒಬ್ಬ ಸಚಿವ, ಶಾಸಕರೂ ಈ ಬಗ್ಗೆ ಗಮನ ಹರಿಸಿಲ್ಲ. ಸಚಿವರು, ಶಾಸಕರು ಎಲ್ಲಿ ಅಂತ ಹುಡುಕಬೇಕಾಗಿದೆ ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದ್ದರು.
Published by:Sushma Chakre
First published: