ಹುಬ್ಬಳ್ಳಿ(ಮಾ.07): ಅನೈತಿಕ ಸಂಬಂಧ ಪ್ರಶ್ನಿಸಿದ ಗಂಡನಿಗೆ ಹೆಂಡತಿಯ ಪ್ರಿಯಕರ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೇ, ಸಾಕುನಾಯಿ ಛೂ ಬಿಟ್ಟಿದ್ದಾನೆ. ಗಂಡನ ಸಂಬಂಧಿಕರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ ಕಣ್ಣಾಮುಚ್ಚಾಲೆ ಆಟ ಬಹಿರಂಗವಾಗುತ್ತಿದ್ದಂತೆ ಹೆಂಡತಿ ಪರಾರಿಯಾಗಿದ್ದಾಳೆ.
ಹುಬ್ಬಳ್ಳಿಯ ಕೇಶ್ವಾಪುರ ಮುಕ್ತಿಧಾಮ ಪ್ರದೇಶದ ನಿವಾಸಿ ಸಂತೋಷ್ ಕಾಂಬ್ಳೆ ಪೇಂಟಿಂಗ್ ಕೆಲಸ ಮಾಡುತ್ತಾರೆ. ಪೇಂಟಿಂಗ್ ಕೆಲಸದಿಂದ ಬರುವ ಆದಾಯದಲ್ಲಿಯೇ ಆರು ಜನರಿರುವ ಕುಟುಂಬ ಸಲಹುತ್ತಾರೆ. ಕೆಲಸಕ್ಕೆಂದು ಬೇರೆ ಊರುಗಳಿಗೆ ತೆರಳುವ ಸಂತೋಷ್ ಮನೆಗೆ ಬರುವುದು ಹದಿನೈದು, ಇಪ್ಪತ್ತು ದಿನಕ್ಕೊಮ್ಮೆ. ಮನೆಯಲ್ಲಿ ತಂದೆ ಧಾಕು ಕಾಂಬ್ಳೆ, ಹೆಂಡತಿ ರೂಪಾದೇವಿ ಹಾಗೂ ಮೂವರು ಹೆಣ್ಣುಮಕ್ಕಳು ಇದ್ದಾರೆ.
ತಂದೆ ಧಾಕು ಅವರು ಪಾಶ್ವಾವಾಯುವಿಗೆ ತುತ್ತಾಗಿದ್ದು, ಯಾರ ಆಸರೆ ಇಲ್ಲದಿದ್ದರೆ ಎದ್ದು ಓಡಾಡಲು ಆಗುವುದಿಲ್ಲ. ಮೂವರು ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಾರೆ. ಹೊಟ್ಟೆ ಹೊರೆಯಲು ಸಂತೋಷ್ ಕಾಂಬ್ಳೆ ಊರೂರು ಅಲೆದಾಡಿ ಪೇಂಟಿಂಗ್ ಕೆಲಸ ಮಾಡುತ್ತಾರೆ. ಆದರೆ, ಪತ್ನಿ ಮಾತ್ರ ಕಳ್ಳಾಟದಲ್ಲಿ ತೊಡಗಿದ್ದಳು. ತಮ್ಮ ಮನೆಯ ಪಕ್ಕದ ಮನೆಯ ಡ್ರೈವರ್ ಸನ್ನಿ ಎಂಬಾತನ ಜೊತೆ ಲವ್ವಿ ಡವ್ವಿ ಶುರುಮಾಡಿದ್ದಳು. ಗಂಡ ಕೆಲಸಕ್ಕೆ ಹೋದರೆ ಸಾಕು ಸನ್ನಿ ಜೊತೆ ಪ್ರೇಮ್ಕಹಾನಿ ಪ್ರಾರಂಭಿಸುತ್ತಿದ್ದಳು. ಮಕ್ಕಳು ಶಾಲೆಗೆ ಹೋಗುತ್ತಿದ್ದಂತೆ ಸನ್ನಿ ಜೊತೆಗೆ ಪ್ರೇಮದಾಟ ಶುರು ಹಚ್ಚಿಕೊಳ್ಳುತ್ತಿದ್ದಳು.
ಬುದ್ಧಿ ಹೇಳಿದ ಮಾವನಿಗೆ ಬೆದರಿಕೆ
ಇತ್ತೀಚೆಗೆ ರೂಪಾದೇವಿ ಮತ್ತು ಸನ್ನಿ ಲವ್ಸ್ಟೋರಿ ಸ್ವಲ್ಪ ಜಾಸ್ತಿಯೇ ಕಾವು ಪಡೆದಿತ್ತು. ಮನೆಗೆ ಸನ್ನಿಯನ್ನು ಕರೆಸಿಕೊಂಡು ಗಂಟೆಗಟ್ಟಲೆ ಹರಟುತ್ತಿದ್ದಳು ರೂಪಾದೇವಿ. ಹೀಗೆ ಮಾಡುವುದು ಸರಿಯಲ್ಲ ಅಂದಿದ್ದಕ್ಕೆ ಮಾವ ಧಾಕು ಕಾಂಬ್ಳೆ ಮೇಲೆ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದಾರೆ. ಸಂತೋಷ್ಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರಂತೆ.
ಕಳ್ಳಾಟ ಬಯಲಿಗೆ, ಸೊಸೆ ತವರಿಗೆ
ಸೊಸೆ ರೂಪಾದೇವಿಯ ಕಳ್ಳಾಟಗಳನ್ನು ನೋಡಿ ಬೇಸತ್ತಿದ್ದ ಮಾವ ಧಾಕು ತನ್ನ ಮಗ ಸಂತೋಷನಿಗೆ ವಿಷಯ ತಿಳಿಸಿದ್ದಾನೆ. ಹೀಗಾಗಿ ಮನೆಯಲ್ಲಿ ದೊಡ್ಡ ಜಗಳವಾಗಿದೆ. ತನ್ನ ಕಣ್ಣಾಮುಚ್ಚಾಲೆ ಆಟ ಗೊತ್ತಾಗುತ್ತಿದ್ದಂತೆ ರಂಪಾಟ ನಡೆಸಿದ ರೂಪಾದೇವಿ ಮೂವರು ಹೆಣ್ಣುಮಕ್ಕಳನ್ನು ಬಿಟ್ಟು ತವರು ಸೇರಿದ್ದಾಳೆ.
ಇತ್ತ ಪ್ರಿಯಕರ ಸನ್ನಿಗೆ ಬುದ್ಧಿವಾದ ಹೇಳಲು ಸಂತೋಷ್ ಕಾಂಬ್ಳೆ ಕುಟುಂಬಸ್ಥರು ಹೋದಾಗ ಮಾರಾಮಾರಿ ನಡೆದಿದೆ. ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸನ್ನಿ ಕೆಂಡಾಮಂಡಲನಾಗಿದ್ದಾನೆ. ಸಂತೋಷ್ ಮತ್ತಾತನ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ನಂತರ ಸಾಕು ನಾಯಿಯನ್ನು ಛೂ ಬಿಟ್ಟು ಕಡಿಸಿದ್ದಾನೆ. ನಾಯಿ ದಾಳಿಯಿಂದ ಸಂತೋಷ್ ಹಾಗೂ ಸಂಬಂಧಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :
ಚನ್ನಪಟ್ಟಣ: ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 18 ಹಸುಗಳ ರಕ್ಷಣೆ
ಕೇಶ್ವಾಪುರ ಠಾಣೆ ಪೊಲೀಸರು ಪ್ರಿಯಕರ ಸನ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ರೂಪಾದೇವಿಗೆ ಮಹಿಳಾ ಸಂಘಟನೆಗಳಿಂದ ಕರೆ ಮಾಡಿಸಿದ ಸಂತೋಷ್ ಮನೆಗೆ ಬರುವಂತೆ ಹೇಳಿಸಿದ್ದಾನೆ. ಪತಿ ತನಗೆ ಹೊಡೆಯುತ್ತಾನೆ ಎನ್ನುತ್ತಿರುವ ರೂಪಾದೇವಿ ಮನೆಗೆ ಬರಲು ಒಪ್ಪುತ್ತಿಲ್ಲ. ರೂಪಾದೇವಿಯ ಪ್ರೇಮದಾಟದಿಂದ ಮೂವರು ಹೆಣ್ಣುಮಕ್ಕಳು, ಪತಿ ಮತ್ತು ಮಾವ ಸಂಕಷ್ಟ ಅನುಭವಿಸುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ