HOME » NEWS » State » CRIME NEWS VIJAYPUR PHENYL SALES GIRL ESCAPED AFTER HOUSE ROBBERY ON SUNDAY AFTERNOON SCT

ಫಿನಾಯಿಲ್ ಮಾರೋ ನೆಪದಲ್ಲಿ ಹಾಡಹಗಲೇ ಮನೆ ಲೂಟಿ; ಸೇಲ್ಸ್​ಗರ್ಲ್ ಕೈಚಳಕಕ್ಕೆ ಬೆಚ್ಚಿಬಿದ್ದ ವಿಜಯಪುರ

ನಿನ್ನೆ ಮಧ್ಯಾಹ್ನ ವಿಜಯಪುರದಲ್ಲಿ ಫಿನಾಯಿಲ್ ಮಾರುವ ನೆಪದಲ್ಲಿ ಬಂದ ಸೇಲ್ಸ್​ಗರ್ಲ್ ಮನೆಯ ಮಾಲೀಕರಿಗೆ ಆ ಬಾಟಲಿಯ ವಾಸನೆ ತೋರಿಸಿ, ಪ್ರಜ್ಞೆ ತಪ್ಪುವಂತೆ ಮಾಡಿದ್ದಾಳೆ. ನಂತರ ಮನೆಯಲ್ಲಿದ್ದ 2.20 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ.

news18-kannada
Updated:August 3, 2020, 3:52 PM IST
ಫಿನಾಯಿಲ್ ಮಾರೋ ನೆಪದಲ್ಲಿ ಹಾಡಹಗಲೇ ಮನೆ ಲೂಟಿ; ಸೇಲ್ಸ್​ಗರ್ಲ್ ಕೈಚಳಕಕ್ಕೆ ಬೆಚ್ಚಿಬಿದ್ದ ವಿಜಯಪುರ
ದರೋಡೆಯಾದ ಮನೆಯ ಮಾಲೀಕರು
  • Share this:
ವಿಜಯಪುರ, (ಆ. 3): ಲೂಟಿಕೋರರು ಯಾವ ರೂಪದಲ್ಲಿ ಬರುತ್ತಾರೆಂದು ಗೊತ್ತೇ ಆಗುವುದಿಲ್ಲ. ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ ಲೂಟಿಕೋರರು ಈಗ ವೇಷ ಬದಲಿಸಿಕೊಂಡು ಮನೆಗಳಿಗೆ ಕನ್ನ ಹಾಕುತ್ತಿದ್ದಾರೆ.ಸ್ವಲ್ಪ ಯಾಮಾರಿದರೂ ಸಾಕು, ಜೀವನ ಪೂರ್ತಿ ಗಳಿಸಿದ ಚಿನ್ನಾಭರಣ ಕ್ಷಣ ಮಾತ್ರದಲ್ಲಿ ಮಾಯ ಮಾಡುತ್ತಾರೆ. ಹೀಗಾಗಿ, ಜನರೇ ಎಚ್ಚರ!

ಈಗ ಎಲ್ಲೆಡೆ ಎಲ್ಲಿರಿಗೂ ಕೊರೊನಾದ್ದೆ ಚಿಂತೆಯಾದರೆ, ವಿಜಯಪುರದ ಜನರಿಗೆ ಮತ್ತೊಂದು ಚಿಂತೆ ಶುರುವಾಗಿದೆ. ಈ ಕೊರೊನಾ ಸಮಯದಲ್ಲಿ ಜನರಿಗೆ ಕಡಿಮೆ ಬೆಲೆಯಲ್ಲಿ ನಾನಾ ರಾಸಾಯನಿಕ ಮಾರಾಟ ಮಾಡುವ ನೆಪದಲ್ಲಿ ಬಂದ ಯುವತಿಯೊಬ್ಬಳು ಮನೆಯೊಂದರಲ್ಲಿನ ಜನರನ್ನು ಪ್ರಜ್ಞೆ ತಪ್ಪಿಸಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾಳೆ.

ದರೋಡೆ ನಡೆದ ಮನೆ


ವಿಜಯಪುರ ನಗರದ ಶಾಂತಿ ನಗರದ ಸರಕಾರಿ ಶಾಲೆ ಸಂಖ್ಯೆ 29ರ ಬಳಿ ನಡೆದ ಘಟನೆ ಪೊಲೀಸರಿಗೂ ತಲೆನೋವು ತಂದಿದೆ.  ನಿನ್ನೆ ಮಧ್ಯಾಹ್ನ ವಿಜಯಪುರ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಮತ್ತು ಉಜ್ವಲಾ ಸಂಸ್ಥೆಯ ಮುಖ್ಯಸ್ಥ ವಾಸುದೇವ ತೋಳಬಂದಿ ಅವರ ಮನೆಗೆ ಬಂದ ಯುವತಿಯೊಬ್ಬಳು ತನ್ನ ಕೈಚಳಕ ತೋರಿಸಿದ್ದಾಳೆ.  ಮಟಮಟ ಮಧ್ಯಾಹ್ನ ಈ ಮನೆಗೆ ಕಡಿಮೆ ಬೆಲೆಯಲ್ಲಿ ಫಿನಾಯಿಲ್ ಮಾರಾಟ ಮಾಡಲು ಯುವತಿಯೊಬ್ಬಳು ಬಂದಿದ್ದಾಳೆ.  ಆಗ ತೋಳಬಂದಿ ದಂಪತಿಯ ಮಗ ಕೇಶವ ವಾಸುದೇವ ತೋಳಬಂದಿ ಮನೆಯ ಹೊರಗಡೆ ಬಂದು ನಮಗೆ ಫಿನಾಯಿಲ್ ಬೇಡ.  ನಾವು ಬೇರೆ ಕಂಪನಿಯ ರಾಸಾಯನಿಕ ಬಳಸುತ್ತೇವೆ ಎಂದು ಹೇಳಿದ್ದಾನೆ.  ಆದರೆ, ಚಾಲಾಕಿ ಕಳ್ಳಿ ಇದರ ವಾಸನೆ ನೋಡಿ ಎಂದು ಬಾಟಲಿಯೊಂದನ್ನು ಯುವಕನ ಮೂಗಿಗೆ ಹಿಡಿದಿದ್ದೇ ತಡ.  ಆಮೇಲೆ ನಡೆದ ಘಟನೆ ಇಡೀ ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ.

ಇದನ್ನೂ ಓದಿ: Bangalore Crime: ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದ ಕೊರೋನಾ ರೋಗಿಗೆ ಲೈಂಗಿಕ ಕಿರುಕುಳ; ಕೇಸ್ ದಾಖಲು

ಈ ಸಂದರ್ಭದಲ್ಲಿ ಸುನಂದ ತೋಳಬಂದಿ ಮನೆಯ ಹಾಲ್ ನಲ್ಲಿ ಮಲಗಿದ್ದರೆ, ಅವರ ಪತಿ ವಾಸುದೇವ ತೋಳಬಂದಿ ಮನೆಯ ಬೇರೊಂದು ಬೆಡ್ ರೂಂನಲ್ಲಿ ಮಲಗಿದ್ದಾರೆ.  ಮಧ್ಯಾಹ್ನ ಸ್ನೇಹಿತನ ಬರ್ತಡೇಗೆ ಹೋದ ಮಗ ಯಾಕೆ ಬಂದಿಲ್ಲ ಎಂದು ಸುನಂದಾ ತೋಳಬಂದಿ ಗಡ್ದದಾದ ನಿದ್ರೆಯಿಂದ ಎದ್ದು ಹೊರಬಂದು ನೋಡಿ ಬೆಚ್ಚಿ ಬಿದ್ದಿದ್ದಾರೆ.  ಮಗ ಮನೆಯ ಹೊರಗಡೆ ಬಿದ್ದಿದ್ದ.  ಆತನನ್ನು ಒಳಗೆ ಕರೆದುಕೊಂಡು ಹೋದರೂ ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದ.  ನಂತರ ಒಳಗೆ ಬಂದು ನೋಡಿದಾಗ ಮನೆಯ ಜಗಲಿಯ ಮೇಲಿದ್ದ ಬೆಳ್ಳಿಯ ಮೂರ್ತಿಗಳು ನಾಪತ್ತೆಯಾಗಿದ್ದವು.  ಮನೆಯ ಅಲ್ಮೇರಾದಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ಆಗ ಕೂಡಲೇ ವಿಜಯಪುರ ನಗರದ ಗೋಲಗುಂಬ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ರಾತ್ರಿ 10 ಗಂಟೆಯ ಸುಮಾರಿಗೆ ವಾಪಾಸಾದಾಗ ಅವರ ಮನೆಯ ಸಾಕು ನಾಯಿ ಒದ್ದಾಡುವುದನ್ನು ಕಂಡು ಕೇಶವ ಅದಕ್ಕೆ ನೀರು ಹಾಕಿದ ತಕ್ಷಣ ಆ ನಾಯಿ ಕೊನೆಯುಸಿರೆಳೆದಿದೆ.  ಈ ಸಂದರ್ಭದಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೆ ಏಳೆಂಟು ಸಲ ಇದೇ ಕೇಶವ ವಾಂತಿ ಮಾಡಿಕೊಂಡಿದ್ದು, ಸೇಲ್ಸ್​ಗರ್ಲ್​ ಈತನಿಗೆ ಪ್ರಜ್ಞೆ ತಪ್ಪಿಸಲು ತೋರಿಸಿದ ಔಷಧಿಯ ಬಗ್ಗೆ ಆತಂಕ ಮೂಡಿಸಿದೆ.
ಈ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಪೊಲೀಸರು  ಶ್ವಾನದಳ ತಂದು ತಪಾಸಣೆ ನಡೆಸಿದರೂ ಲೂಟಿಕೋರರ ಪತ್ತೆಯಾಗಿಲ್ಲ.

ಇದನ್ನೂ ಓದಿ: BS Yediyurappa: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶ

ಸೇಲ್ಸ್​ಗರ್ಲ್ ರೂಪದಲ್ಲಿ ಬಂದ ಯುವತಿ ಇವರ ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿಯ ಆಭರಣ ಮತ್ತು ಎರಡು ಮೊಬೈಲ್ ಸೇರಿದಂತೆ ಒಟ್ಟು ರೂ. 2.20 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾನಾ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.  ಈ ಯುವತಿಯ ಜೊತೆ ಮತ್ತೆ ಯಾರೆಲ್ಲ ಇದ್ದರು ಎಂಬುದು ಗೊತ್ತಾಗಿಲ್ಲ. ತಾವೂ ಕೂಡ ಎಂದೂ ಇಷ್ಟು ಗಡದ್ದಾಗಿ ನಿದ್ರೆಗೆ ಜಾರುವುದಿಲ್ಲ. ತಮ್ಮ ಪತಿ ವಾಸುದೇವ ತೋಳಬಂದಿ ಅವರಿಗೆ ಒಂದು ಸಣ್ಣ ಸಪ್ಪಳವಾದರೂ ನಿದ್ದೆಯಿಂದ ಎದ್ದೇಳುತ್ತಾರೆ.  ಆದರೆ, ನಿನ್ನೆ ಮಾತ್ರ ಅವರೂ ಗಾಢ ನಿದ್ರೆಗೆ ಜಾರಿದ್ದರು.  ಅವರನ್ನು ಎಚ್ಚರಿಸಿದಾಗ ಅವರು ಇನ್ನೂ ಮಂಪರಾವಸ್ಥೆಯಲ್ಲಿಯೇ ಇದ್ದರು.  ನಂತರ ಮೂರ್ನಾಲ್ಕು ಬಾರಿ ಅವರಿಗೂ ವಾಂತಿಯಾದ ಮೇಲೆ ಈಗ ಆರೋಗ್ಯದಿಂದ ಇದ್ದಾರೆ ಎಂದು ವಿಜಯಪುರ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
Youtube Video

ಈ ಕುರಿತು ವಿಜಯಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ, ಇದೇ ಮೊದಲ ಬಾರಿಗೆ ನಡೆದ ಈ ರೀತಿಯ ಲೂಟಿ ಪ್ರಕರಣ ವಿಜಯಪುರ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
Published by: Sushma Chakre
First published: August 3, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories