ಕಾರವಾರ (ಜೂ. 29): ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲ ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 7 ಯುವಕರ ತಂಡವನ್ನು ಹಾಗೂ ಕಳುವಾದ ಮಾಲನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನೂ ಸೇರಿದಂತೆ 8 ಮಂದಿಯನ್ನು ಗೋಕರ್ಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ಅವರ ನೇತೃತ್ವದಲ್ಲಿ ಗೋಕರ್ಣ ಪೊಲೀಸರು ಗೋಕರ್ಣ ಠಾಣೆಯ 5, ಅಂಕೋಲಾ ಠಾಣೆ ವ್ಯಾಪ್ತಿಯ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಕೊನೆಗೂ ಬಂಧಿಸಿದ್ದಾರೆ. ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣಗಳು, 1 ಕೆ.ಜಿ ಬೆಳ್ಳಿಯ ಆಭರಣ, 5 ಗ್ಯಾಸ್ ಸಿಲಿಂಡರ್ ಗಳು, 1 ಏರ್ ಗನ್, 3 ಮೋಟಾರ್ ಸೈಕಲ್ ಹಾಗೂ 8 ಮೊಬೈಲ್ ಪೋನ್ ಗಳೂ ಸೇರಿದಂತೆ ಒಟ್ಟೂ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಬೊಬ್ರುವಾಡದ ಪ್ರಶಾಂತ್ ನಾಯ್ಕ, ತೆಂಕಣಕೇರಿಯ ಹರ್ಷ ನಾಯ್ಕ, ಶಿರಕುಳಿಯ ಗಣೇಶ ನಾಯ್ಕ, ಕೇಣಿಯ ರಾಹುಲ್ ಬಂಟ್, ಶಿರಸಿ ಕಸ್ತೂರಬಾ ನಗರದ ಶ್ರೀಕಾಂತ್ ದೇವಾಡಿಗ, ನಿಹಾಲ್ ದೇವಳಿ, ದೊಡ್ನಳ್ಳಿ ರಸ್ತೆಯ ಸಂದೀಪ ಮರಾಠೆ ಹಾಗೂ ಬನವಾಸಿಯ ಅಶೋಕ ರಾಯ್ಕರ್ ಬಂಧಿತರು.
ಇದನ್ನೂ ಓದಿ: Petrol Price Today: ಜೈಪುರ, ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ಗೆ 105 ರೂ!; ಗಗನಕ್ಕೇರುತ್ತಿದೆ ಡೀಸೆಲ್ ಬೆಲೆ
ಬಂಧಿತರ ಪೈಕಿ ನಾಲ್ವರು ಐಟಿಐ ಪೂರ್ಣಗೊಳಿಸಿದವರು. ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೋನಾದಿಂದಾಗಿ ಹಾಗೂ ಲಾಕ್ ಡೌನ್ ವಿಧಿಸಿದ್ದ ಕಾರಣ ಆರ್ಥಿಕವಾಗಿ ಸಮಸ್ಯೆ ಉಂಟಾಗಿದೆ. ವೈಯಕ್ತಿಕ ಮೋಜು ಮಸ್ತಿಗೆ ಹಣದ ಕೊರತೆಯಾದಾಗ ಎಲ್ಲರೂ ಸೇರಿಕೊಂಡು ಮೊದ ಮೊದಲು ಶಾಲೆ, ಅಂಗನವಾಡಿಗಳ ಸಿಲಿಂಡರ್ ಗಳನ್ನ ಕದ್ದು ಮಾರಲು ಶುರು ಮಾಡುತ್ತಾರೆ. ಹೀಗೆ ಕೆಲವು ತಿಂಗಳು ಕಳ್ಳತನ ಮುಂದುವರಿಸಿದ ಈ ತಂಡ, ಒಂದು ದಿನ ಮನೆಯೊಂದರಲ್ಲಿ ಸಿಲಿಂಡರ್ ಕಳವಿಗೆ ತೆರಳಿದಾಗ ಚಿನ್ನಾಭರಣಗಳು ಸಿಗುತ್ತವೆ. ಸಿಲಿಂಡರ್ ಕದ್ದು ಸಣ್ಣಪುಟ್ಟ ಕಳವು ಪ್ರಕರಣಗಳಲ್ಲಿ ಅದಾಗಲೆ ಪೊಲೀಸರ ಲಿಸ್ಟ್ ನಲ್ಲಿ ಹೆಸರು ನಮೂದಿಸಿಕೊಂಡಿದ್ದ ಈ ತಂಡ ಅಂದಿನಿಂದ ಚಿನ್ನಾಭರಣ, ನಗದು, ಬೈಕ್ ಗಳ ಕಳವಿಗೂ ಮುಂದಾಗುತ್ತದೆ. ಕದ್ದ ಮಾಲುಗಳನ್ನು ಓರ್ವ ವ್ಯಕ್ತಿಗೆ ಮಾರಿ, ಬಂದ ಹಣದಿಂದ ಲಾಕ್ ಡೌನ್ ಸಂದರ್ಭದಲ್ಲೂ ಪಾರ್ಟಿ ಸೇರಿದಂತೆ ಮೋಜು-ಮಸ್ತಿಯ ಜೀವನ ಕಳೆಯುತ್ತಿದ್ದರು. ಆದರೆ ಅದೃಷ್ಟ ಕೆಟ್ಟು ಇದೀಗ ಎಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಶಿವಪ್ರಕಾಶ ಆರ್. ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ಎಸ್. ನಾಯ್ಕ, ಅಂಕೋಲಾ ಪಿ.ಎಸ್.ಐ ಪ್ರವೀಣಕುಮಾರ್, ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ ಪಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ