ತುಮಕೂರು : ಮೂವರು ಅನಾಥ ಸಹೋದರಿಯರು ಒಂದೇ ದಿನ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ಒಂಭತ್ತು ದಿನಗಳ ನಂತರ ಬೆಳಕಿಗೆ ಬಂದಿದೆ. ಶವಗಳು ಕೊಳೆತು ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಥಳೀಯರ ಅರಿವಿಗೆ ಬಂದಿದೆ. ಈ ಘಟನೆ ತುಮಕೂರು (Tumkur) ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡ್ಯ ಬಳಿಯ ಒಂಟಿ ಮನೆಯೊಂದರಲ್ಲಿ ನಡೆದಿದೆ. ರಂಜಿತಾ(24) ಬಿಂದು (21), ಚಂದನ (18) ಎಂಬ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂವರು ಪೋಷಕರಿಲ್ಲದೇ ಅನಾಥವಾಗಿ ಬೆಳೆಯುತ್ತಿದ್ದರು. ಈ ಘಟನೆ ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ಮೂವರು ಸಹೋದರಿಯರ ಪೋಷಕರು ಅನೇಕ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಅಂದಿನಿಂದ ಅಜ್ಜಿ ಜೊತೆಯಲ್ಲಿ ಮೂವರು ವಾಸವಾಗಿದ್ದರು. ಇತ್ತೀಚೆಗೆ ಅಜ್ಜಿಯೂ ಕೂಡ ವಯೋಸಹಜ ಸಾವಿನಿಂದ ಮೃತಪಟ್ಟಿದ್ದರು. ಅಂದಿನಿಂದ ಮೂವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಜ್ಜಿ ಸಾವಿನ ಆಘಾತದಿಂದ ಖಿನ್ನತೆ
ಆತ್ಮಹತ್ಯೆಗೆ ಶರಣಾಗಿರುವ ಸಹೋದರಿಯರು ಸಣ್ಣ ವಯಸ್ಸಿನವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು. ನಂತರ ಇವರು ಅಜ್ಜಿ ಆಶ್ರಯದಲ್ಲಿ ಬರಕನಹಾಳ್ ತಾಂಡದಲ್ಲಿರುವ ಒಂಟಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇನ್ನು ಕುಟುಂಬ ನಿರ್ವಹಣೆಗಾಗಿ ಮೂವರಲ್ಲಿ ಇಬ್ಬರು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಅಜ್ಜಿಯೂ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಮನೆಯಲ್ಲಿ ತಮಗೆಂದು ಇದ್ದ ಹಿರಿಯ ಜೀವವನ್ನು ಕಳೆದುಕೊಂಡು ಅಘಾತಕ್ಕೆ ಒಳಗಾಗಿದ್ದ ಮೂವರು ಸಹೋದರಿಯರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Crime News: ಖಾಸಗಿ ಫೋಟೋ ವೈರಲ್ ಮಾಡುವ ಬೆದರಿಕೆ, ಲಾಡ್ಜ್ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ!
ದುರ್ವಾಸನೆ ಬಳಿಕ ಘಟನೆ ಬೆಳಕಿಗೆ
ಸಹೋದರಿಯರು ವಾಸ ಮಾಡುತ್ತಿದ್ದದ್ದು ಒಂಟಿ ಮನೆಯಾಗಿದ್ದರಿಂದ ಅವರು ಒಳಗಿರುವುದು, ಹೊರ ಹೋಗುವುದರ ಬಗ್ಗೆ ಸ್ಥಳೀಯರ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ವಾರದಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ, ಜೊತೆಗೆ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಮನೆಯ ಹಂಚನ್ನು ತೆಗೆದು ನೋಡಿದಾಗ ಮೂವರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಸಿದ್ಧಾರ್ಥ್ ಗೋಯಲ್, ಸಿಪಿಐ ನಿರ್ಮಲಾ, ಪಿಎಸ್ಐ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ
ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ತಾಲೂಕಿನ ಚೊಕ್ಕಂಡಳ್ಳಿ ಕೆರೆಯಲ್ಲಿ ನಡೆದಿದೆ. ಇದೇ ಗ್ರಾಮದ ಬೇಬಿ (30) ಎಂಬ ಮಹಿಳೆ ತನ್ನ ಮಕ್ಕಳಾದ ದರ್ಶಿನಿ (4) ಛಾಯಾ (9 ತಿಂಗಳ ಮಗು ) ರೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆ
ಕೌಟುಂಬಿಕ ಕಲಹದ ಕಾರಣ ಬೇಬಿ ತನ್ನ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರ ಮೃತದೇಹಗಳನ್ನು ಹೊರಕ್ಕೆ ತೆಗೆದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಮೃತ ಬೇಬಿ ಪತಿ ವೇಣುಗೋಪಾಲನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡಾನೆ ದಾಳಿಗೆ ದಿನಗೂಲಿ ಫಾರೆಸ್ಟ್ ವಾಚರ್ ಸಾವು
ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಒಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಎತ್ತುಗಟ್ಟಿ ಬೆಟ್ಟದ ಬಳಿ ನಡೆದಿದೆ. ಪುಣಜನೂರು ಹೊಸಪೋಡು ನಿವಾಸಿ ನಂಜಯ್ಯ(35) ಆನೆ ದಾಳಿಗೆ ಬಲಿಯಾದ ದುರ್ದೈವಿ. ಕಳೆದ ಒಂದು ವಾರದಿಂದ ವಡ್ಗಲ್ಪುರ ಚೆನ್ನಪ್ಪನಪುರ ಸುತ್ತಮುತ್ತ ಕಾಡಾನೆ ಹಿಂಡು ಅಡ್ಡಾಡುತ್ತಿದ್ದು, ಆನೆಗಳ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ದಾಳಿ ಮಾಡಿದೆ. ದುರ್ದೈವವೆಂದರೆ ಎರಡು ದಿನಗಳ ಹಿಂದಷ್ಟೇ ನಂಜಯ್ಯನನ್ನು ದಿನಗೂಲಿ ಆಧಾರದಲ್ಲಿ ಅರಣ್ಯ ಇಲಾಖೆ ಕೆಲಸಕ್ಕೆ ಸೇರಿಸಿಕೊಂಡಿತ್ತು ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ