ತಮಿಳುನಾಡು ದಂಪತಿಯಿಂದ ಕಿಡ್ನಾಪ್ ಆಗಿದ್ದ ಬಾಲಕಿಯನ್ನು ಪತ್ತೆಹಚ್ಚಿದ್ದು ಕನ್ನಡ ಭಾಷೆ!
Bangalore Crime: ಸೆಪ್ಟೆಂಬರ್ 18ರಂದು ಬೆಂಗಳೂರಿನ ಮೆಜೆಸ್ಟಿಕ್ನಿಂದ ಲೋಕಿತಾ ಎಂಬ 2 ವರ್ಷದ ಬಾಲಕಿಯನ್ನು ತಮಿಳುನಾಡಿನ ದಂಪತಿ ಅಪಹರಿಸಿದ್ದರು. ಆಕೆ ಮಾತನಾಡಿದ್ದ ಕನ್ನಡ ಭಾಷೆಯಿಂದಾಗಿ ಆಕೆ ಸುರಕ್ಷಿತವಾಗಿ ಹೆತ್ತವರನ್ನು ಸೇರಿದ್ದಾಳೆ. ಅದು ಹೇಗೆ ಅಂತೀರಾ? ಈ ಸುದ್ದಿ ಓದಿ...
ಬೆಂಗಳೂರು (ಅ. 2): ಆಕೆ ಬೆಂಗಳೂರಿನ ಬಾಲಕಿ. ಸೆ. 18ರಂದು ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಆ ಹುಡುಗಿ ತಮಿಳುನಾಡಿನಲ್ಲಿ ಸಿಕ್ಕಿದ್ದಾಳೆ. ಆಕೆಯನ್ನು ಕಿಡ್ನಾಪ್ ಮಾಡಿದ್ದ ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಆ ಬಾಲಕಿ ಕನ್ನಡ ಮಾತನಾಡಿದ್ದರಿಂದ ಆಕೆಯನ್ನು ತಮಿಳುನಾಡಿನ ಪೊಲೀಸರು ರಕ್ಷಿಸಿ, ಬೆಂಗಳೂರಿನಲ್ಲಿರುವ ಆಕೆಯ ಹೆತ್ತವರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್ನಿಂದ ಕಿಡ್ನಾಪ್ ಆಗಿದ್ದ 2 ವರ್ಷದ ಬಾಲಕಿ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾಳೆ. ಇದೇ ಸೆಪ್ಟೆಂಬರ್ 18ರಂದು ಬೆಂಗಳೂರಿನ ಮೆಜೆಸ್ಟಿಕ್ನಿಂದ ಲೋಕಿತಾ ಎಂಬ ಬಾಲಕಿಯನ್ನು ಅಪಹರಿಸಲಾಗಿತ್ತು. ಆಕೆಯನ್ನು ಕಿಡ್ನಾಪ್ ಮಾಡಿದ್ದ ದಂಪತಿ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ. ಜೊತೆಗೆ ಲೋಕಿತಾ ಸುರಕ್ಷಿತವಾಗಿ ತನ್ನ ಹೆತ್ತವರನ್ನು ಸೇರಿದ್ದಾಳೆ.
ಲೋಕಿತಾಳನ್ನು ತಮಿಳುನಾಡು ಮೂಲದ ಜಾನ್ ಜೋಸೆಫ್ ದಂಪತಿ ಕಿಡ್ನಾಪ್ ಮಾಡಿಕೊಂಡು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಲೋಕಿತಾ ಕಿಡ್ನಾಪ್ ಆದ ಬಗ್ಗೆ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಾಲಕಿ ಲೋಕಿತಾಳನ್ನು ಪತ್ತೆಹಚ್ಚಿ ರಕ್ಷಿಸಿರುವ ತಮಿಳುನಾಡಿನ ಕನ್ಯಾಕುಮಾರಿ ಪೊಲೀಸರು ಆಕೆಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು. ಈಗ ಆಕೆ ತನ್ನ ಹೆತ್ತವರ ಬಳಿ ವಾಪಾಸ್ ಸೇರಿದ್ದಾಳೆ.
ಬೆಂಗಳೂರಿನ ಸತ್ಯಮೂರ್ತಿ ಮತ್ತು ಕಾರ್ತಿಕೇಶ್ವರಿ ದಂಪತಿಯ ಮಗಳಾದ ಲೋಕಿತಾ ಅಪ್ಪ-ಅಮ್ಮ ಕೂಲಿ ಕೆಲಸಕ್ಕೆ ಹೋದ ವೇಳೆ ತನ್ನ ತಾತನ ಜೊತೆ ಇರುತ್ತಿದ್ದಳು. ಸೆ. 18ರಂದು ತಾತನ ಜೊತೆ ಮೆಜೆಸ್ಟಿಕ್ನಲ್ಲಿದ್ದ 2 ವರ್ಷದ ಲೋಕಿತಾಳಿಗೆ ಐಸ್ಕ್ರೀಂ ಕೊಡಿಸುವ ಆಮಿಷವೊಡ್ಡಿ, ತಮಿಳುನಾಡಿನ ದಂಪತಿ ಕಿಡ್ನಾಪ್ ಮಾಡಿದ್ದರು. ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಿತಾ ಕಿಡ್ನಾಪ್ ಬಗ್ಗೆ ಎನ್ಸಿಆರ್ಬಿ ಪೋರ್ಟಲ್ನಲ್ಲಿ ಮಾಹಿತಿ ವಿನಿಮಯ ಮಾಡಲಾಗಿತ್ತು.
ಸೆಪ್ಟೆಂಬರ್ 30ರಂದು ಕನ್ಯಾಕುಮಾರಿಯಲ್ಲಿ ಜಾನ್ ಜೋಸೆಫ್ ದಂಪತಿ ಓಡಾಟ ನಡೆಸಿದ್ದರು. ಆಗ ಅವರ ಜೊತೆಗಿದ್ದ ಒಂದು ಗಂಡು ಮಗು ಹಾಗೂ ಲೋಕಿತಾ ಬಗ್ಗೆ ವಿಚಾರಣೆ ನಡೆಸಲಾಗಿತ್ತು. ಆಗ ಗಂಡು ಮಗು ತಮಿಳಿನಲ್ಲಿ ಮಾತನಾಡಿದರೆ, ಲೋಕಿತಾ ಕನ್ನಡದಲ್ಲಿ ಮಾತನಾಡುತ್ತಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಲೋಕಿತಾಳನ್ನು ಬೆಂಗಳೂರಿನಿಂದ ಕಿಡ್ನಾಪ್ ಮಾಡಿ ಕರೆತಂದಿದ್ದ ವಿಷಯ ಬೆಳಕಿಗೆ ಬಂದಿತ್ತು. ಲೋಕಿತಾಳ ಭಾಷೆಯನ್ನು ಗಮನಿಸಿ ಪೊಲೀಸರು ಆಕೆಯನ್ನು ರಕ್ಷಿಸಿದ್ದರು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ