ರಾಣೆಬೆನ್ನೂರು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕಗ್ಗೊಲೆ

Murder News: ಲಾಕ್‌ಡೌನ್ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರೈಲ್ವೆ ನಿಲ್ದಾಣದ ಬಳಿ 45 ವಯಸ್ಸಿನ ಚಂದ್ರಪ್ಪ ಲಮಾಣಿ ಎಂಬಾತನ ಶವ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು.

news18-kannada
Updated:October 12, 2020, 7:53 AM IST
ರಾಣೆಬೆನ್ನೂರು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕಗ್ಗೊಲೆ
ಆರೋಪಿಗಳೊಂದಿಗೆ ಹುಬ್ಬಳ್ಳಿ ರೈಲ್ವೆ ಠಾಣೆಯ ಪೊಲೀಸರು
  • Share this:
ಹುಬ್ಬಳ್ಳಿ (ಅ. 12): ಲಾಕ್‌ಡೌನ್ ಸಮಯದಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದೆ.‌ ಪತ್ನಿ ಮತ್ತು ಪ್ರಿಯಕರ ಸೇರಿ ಪತಿಯನ್ನು ದಾರುಣವಾಗಿ ಹತ್ಯೆ ಮಾಡಿರುವ ರಹಸ್ಯ ಬಯಲಿಗೆ ಬಂದಿದೆ. ಹುಬ್ಬಳ್ಳಿ ರೈಲ್ವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರೇಮಿಗಳ ಕುತಂತ್ರ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.‌  ಕಳೆದ ಮೇ ತಿಂಗಳಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರೈಲ್ವೆ ನಿಲ್ದಾಣದ ಬಳಿ ಚಂದ್ರಪ್ಪ ಲಮಾಣಿ ಎಂಬಾತನ ಶವ ಪತ್ತೆಯಾಗಿತ್ತು. ಶ್ರೀನಿವಾಸಪುರ ಗಂಗಾಜಲ ತಾಂಡಾದ 45 ವರ್ಷ ವಯಸ್ಸಿನ ಚಂದ್ರಪ್ಪ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ರೈಲ್ವೆ ಹಳಿಯ ಬಳಿ ತುಂಡರಿಸಿ, ರಕ್ತಸಿಕ್ತವಾಗಿ ಬಿದ್ದಿದ್ದ ಶವವನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರಿಗೆ ಶವದ ಲಕ್ಷಣಗಳು ಸಂಶಯ ಮೂಡಿಸಿದ್ದವು. ಕುತ್ತಿಗೆಯ ಮೇಲೆ ಕಪ್ಪು ಗೆರೆಯಿತ್ತು. ಕೊರಳಿಗೆ ಹಗ್ಗ ಬಿಗಿದು, ಕೊಲೆ ಮಾಡಿ ಮೃತದೇಹವನ್ನು ರೈಲಿನ ಹಳಿಯ ಮೇಲೆ ಎಸೆದಿರುವ ಹಾಗಿತ್ತು. ರೈಲ್ವೆ ಹಳಿಗೆ ಸಿಲುಕಿ ಮೃತದೇಹದ ಒಂದು ಭಾಗ ತುಂಡರಿಸಿತ್ತು. ಹೀಗಾಗಿ, ವ್ಯಕ್ತಿಯ ಪೂರ್ವಾಪರಗಳನ್ನು ಪೊಲೀಸರು ಕಲೆಹಾಕಲು ಆರಂಭಿಸಿದ್ದರು. ಹುಬ್ಬಳ್ಳಿ ರೈಲ್ವೆ ಠಾಣೆ ಇನ್ಸ್‌ಪೆಕ್ಟರ್ ಕಾಲಿಮಿರ್ಜಿ ಮತ್ತು ಪಿಎಸ್‌ಐ ಸತ್ಯಪ್ಪ ನೇತೃತ್ವದ ತಂಡ ಶ್ರೀನಿವಾಸಪುರ ಗಂಗಾಜಲದಲ್ಲಿರುವ ಮೃತ ಚಂದ್ರಪ್ಪನ ಸಂಬಂಧಿಗಳನ್ನು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: ಜಾತಿಯನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ; ಹೆಚ್​.ಡಿ. ದೇವೇಗೌಡ

ನಂತರ, ಸ್ಥಳೀಯರಿಂದ ಹಲವು ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿದ್ದರು. ರೈಲ್ವೆ ಪೊಲೀಸರು ಗ್ರೌಂಡ್‌ಗಿಳಿದು ತನಿಖೆ ಕೈಗೊಂಡಿದ್ದರಿಂದ ಕೊಲೆ ರಹಸ್ಯ ಬಯಲಾಗಿದೆ. ಚಂದ್ರಪ್ಪ ಲಮಾಣಿಯ ಪತ್ನಿ ಶೋಭಾ ಹಾಗೂ ಅವಳ ಪ್ರಿಯಕರ ದಿಳ್ಳೆಪ್ಪ ಅಂತರವಳ್ಳಿ ಸೇರಿ ಕೊಲೆ ಮಾಡಿದ್ದು ಬಹಿರಂಗಗೊಂಡಿದೆ. ರೈಲ್ವೆ ನಿಲ್ದಾಣದ ಪಕ್ಕದ ಹೊಲದಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಚಂದ್ರಪ್ಪ ಲಮಾಣಿಯನ್ನು ಕೊಲೆ ಮಾಡಿರುವುದು, ನಂತರ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಶವ ಎಸೆದಿರುವುದು ಬಯಲಿಗೆ ಬಂದಿದೆ.

ಲಾಕ್‌ಡೌನ್ ಮುನ್ನ ಪರ ಊರಿಗೆ ಕಟ್ಟಡ ಕಾಮಗಾರಿ ಕೆಲಸಕ್ಕೆ ಹೋಗುತ್ತಿದ್ದ ಚಂದ್ರಪ್ಪ ಲಮಾಣಿ, ಕೊರೋನಾ ಹೆಚ್ಚಾದಾಗ ಮನೆಯಲ್ಲಿಯೇ ಸಮಯ ಕಳೆಯತೊಡಗಿದ್ದ. ತಮ್ಮ ಅನೈತಿಕ ಸಂಬಂಧಕ್ಕೆ ಚಂದ್ರಪ್ಪ ಅಡ್ಡಿ ಆಗುತ್ತಾನೆ. ಅನೈತಿಕ ಸಂಬಂಧ ಹೊರಗೆ ಬರುತ್ತದೆ ಎಂದು ಭಾವಿಸಿದ ಶೋಭಾ ಮತ್ತು ದಿಳ್ಳೆಪ್ಪ ಸೇರಿ ಸಂಚು ರೂಪಿಸಿ ಚಂದ್ರಪ್ಪನನ್ನು ಕೊಲೆ ಮಾಡಿದ್ದರು. ನಂತರ, ಏನೂ ಗೊತ್ತಿಲ್ಲದವರಂತೆ ಊರು ಸೇರಿದ್ದರು. ಬಳಿಕ ಎಂದಿನಂತೆ ತಮ್ಮ ಪ್ರೇಮದಾಟ ಮುಂದುವರಿಸಿದ್ದರು. ಆದರೆ, ಗೃಹಚಾರ ಕೆಟ್ಟಿದ್ದು ಪೊಲೀಸರ ಕೈಗೆ ತಗುಲಿಕೊಂಡಿದ್ದಾರೆ. ವಿಚಾರಣೆ ವೇಳೆ ರೈಲ್ವೆ ಪೊಲೀಸರ ಎದುರು ಆರೋಪಿಗಳು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಶೋಭಾ ಮತ್ತು ದಿಳ್ಳೆಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದಾರೆ.
Published by: Sushma Chakre
First published: October 12, 2020, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading