HOME » NEWS » State » CRIME NEWS MYSTERIOUS DEATH OF UDUPI YOUNG GIRL RAKSHITHA LOVER DETAINED SCT PSUDP

ಉಡುಪಿಯ ರಕ್ಷಿತಾ ನಾಯಕ್‌ ನಿಗೂಢ‌ ಸಾವು; ನಾಪತ್ತೆಯಾಗಿದ್ದ ಪ್ರಿಯಕರ ಪೊಲೀಸ್ ವಶಕ್ಕೆ

ಆಕೆಯ ಹೆಸರು ರಕ್ಷಿತಾ ನಾಯಕ್. ಉಡುಪಿಯಿಂದ ದೂರ ಇರುವ ಹಿರಿಯಡ್ಕದ ಸಮೀಪದ ಕುಕ್ಕೇಹಳ್ಳಿ ಈಕೆಯ ಊರು. ಓದಲು ಮಣಿಪಾಲಕ್ಕೆ ಬಂದ ಈಕೆ ಬೈಂದೂರಿನ ಪ್ರಶಾಂತ್ ಕುಂದರ್ ಎಂಬಾತನನ್ನು ಪ್ರೀತಿಸಿದ್ದಳು. ಆತನೊಂದಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಈಕೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.

news18-kannada
Updated:October 27, 2020, 4:33 PM IST
ಉಡುಪಿಯ ರಕ್ಷಿತಾ ನಾಯಕ್‌ ನಿಗೂಢ‌ ಸಾವು; ನಾಪತ್ತೆಯಾಗಿದ್ದ ಪ್ರಿಯಕರ ಪೊಲೀಸ್ ವಶಕ್ಕೆ
ರಕ್ಷಿತಾ
  • Share this:
ಉಡುಪಿ (ಅ. 27): ಹುಚ್ಚುಕೋಡಿ ಮನಸು ಅದು‌‌ 16ರ ವಯಸು ಎಂಬ‌‌ ಮಾತಿದೆ. ಆ ಮಾತಿನಂತೆ ಈಗಿನ ಯುವ ಸಮೂಹ ನಡೆದುಕೊಳ್ಳುತ್ತಿದೆ.‌‌ ಬಣ್ಣ‌ ಬಣ್ಣದ ಲೋಕ ಅದರಲ್ಲೂ ಸಿನಿಮಾಗಳಲ್ಲಿ ನಟನೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಸ್ಟಾರ್ ಆಗಬೇಕು. ‌ಹೈಫೈ ಲೈಫ್ ಸ್ಟೈಲ್ ನಮ್ಮದಾಗಬೇಕು‌ ಎಂಬ‌ ಕ‌ನಸನ್ನು ಕಾಣುವವರೇ ಹೆಚ್ಚು. ಇಂತಹ ಕನಸನ್ನು ನನಸಾಗಿಸಲು ಅದೆಷ್ಟೋ ಯುವಕ‌- ಯುವತಿಯರು ದಾರಿ ತಪ್ಪಿದ್ದಾರೆ. ಇನ್ನು ಕೆಲವರು ಜೀವನವನ್ನೇ ಅಂತ್ಯಗೊಳಿಸಿದ್ದಾರೆ.‌ ಹೀಗೆ ಹುಚ್ಚು ಕನಸನ್ನು ನನಸಾಗಿಸೋಕೆ ಹೋಗಿ‌ ಉಡುಪಿಯ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಹಾಗಾದರೆ, ಆ ಯುವತಿಯ ಬಾಳಲ್ಲಿ ನಡೆದದ್ದಾದರೂ ಏನು? ಅಂತ ಹೇಳ್ತೀವಿ ಕೇಳಿ. ಮಾಡೆಲಿಂಗ್ ಅವಳಿಗೆ ಗೀಳು. ಇನ್​ಸ್ಟಾಗ್ರಾಂಗೆ ಹೋದರೆ ಅಲ್ಲಿ ಆಕೆಯದ್ದೇ ಕಲರ್​ಫುಲ್ ದುನಿಯಾ. ಕಾಲೇಜು ಕನ್ಯೆ, ಆದರೂ ಲಿವ್​ಇನ್ ರಿಲೇಷನ್​ಶಿಪ್​ನಲ್ಲಿ ಸಂಸಾರ ಮಾಡುತ್ತಿದ್ದವಳು. ಹದಿಹರೆಯದ ಹುಡುಗಿ ಇದೀಗ ಹೆಣವಾಗಿ ಆಸ್ಪತ್ರೆ ತಲುಪಿದ್ದಾಳೆ. ಜೊತೆಗಾರನೇ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪರಾರಿಯಾಗಿದ್ದ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಈ ನಿಗೂಢ ಸಾವು ಅನೇಕ ಸಂಶಯಗಳಿಗೆ ಎಡೆಮಾಡಿದೆ.

ಆಕೆಯ ಹೆಸರು ರಕ್ಷಿತಾ ನಾಯಕ್. ಉಡುಪಿ ನಗರದಿಂದ ದೂರ ಇರುವ ಕುಕ್ಕೇಹಳ್ಳಿ ಈಕೆಯ ಊರು. ಹೆಸರಲ್ಲೇ ಹಳ್ಳಿ ಅಂತ ಇದೆ. ನಗರದಿಂದ ದೂರವೇ ಇರುವ ಪುಟ್ಟ ಹಳ್ಳಿ ಅದು. ಹಿರಿಯಡ್ಕವೇ ಆ ಹಳ್ಳಿಗೆ ಸಮೀಪದ ಪೇಟೆ. ಹಿರಿಯಡ್ಕದ ಸರ್ಕಾರಿ ಪಿಯು ಕಾಲೇಜಲ್ಲಿ ಶಿಕ್ಷಣ ಮುಗಿಸಿ ಬಂದ ಚಿನ್ನಾರಿ ಮುತ್ತ ಈಕೆ. ಹೌದು, ನಗರದ ಗಂಧಗಾಳಿಯೇ ಇಲ್ಲದೆ, ಅಪ್ಪಟ ಹಳ್ಳಿ ಹುಡುಗಿ ಈ ಮುಗ್ಧತೆಯ ಪರದೆಯಿಂದ ಕಳಚಿಕೊಳ್ಳಲು ಈಕೆಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಪಿಯು ಮುಗಿಸಿ ಯಾವಾಗ ಈ ಮುಗ್ಧ ಹುಡುಗಿ ಮಣಿಪಾಲಕ್ಕೆ ಎಂಟ್ರಿ ಕೊಟ್ಟಳೋ ಅವಳ ಸ್ಟೈಲೇ ಚೇಂಜ್ ಆಯ್ತು.

ಮಣಿಪಾಲದ ಗ್ರೂಪ್ ಆಫ್ ಮ್ಯಾನೇಜ್​ಮೆಂಟ್ ಕಾಲೇಜೊಂದರಲ್ಲಿ ಬಿಕಾಂ ಶಿಕ್ಷಣ ಪಡೆಯಲು ಬಂದವಳು, ಜೊತೆ ಜೊತೆಗೆ ಜಾಬ್ ಓರಿಯೆಂಟೆಡ್ ಏವಿಯೇಷನ್ ಕೋರ್ಸ್ ಕೂಡ ಮಾಡಲಾರಂಭಿಸಿದಳು. ನಿಜ ಹೇಳಬೇಕು ಎಂದರೆ ಈ ಹುಡುಗಿ ತುಂಬ ಮಹತ್ವಾಕಾಂಕ್ಷಿ. ವಿದ್ಯಾಭ್ಯಾಸದ ಜೊತೆಗೆ ಸಂಪಾದನೆಯನ್ನೂ ಮಾಡುವ ಉಮೇದು, ಹಾಗಾಗಿ, ತುಂಬಾನೇ ಸೋಷಿಯಲ್ ಲೈಫ್ ಆರಂಭ ಮಾಡುತ್ತಾಳೆ ರಕ್ಷಿತಾ. ಈಕೆಯ ಜಗತ್ತು ವಿಸ್ತಾರವಾಗುತ್ತದೆ. ಕೃಷಿ ಮಾಡುವ ತಂದೆ, ಬಡತನವೇ ಮೈ ಹೊದ್ದು ಮಲಗಿದ ಮನೆ ಬೇಡವಾಗುತ್ತದೆ. ಮಾಡೆಲಿಂಗ್ ಕೈ ಬೀಸಿ ಕರೆಯುತ್ತದೆ. ಅವಕಾಶಗಳನ್ನು ಅರಸಿ ಊರೂರು ಅಲೆದಾಟವೂ ಶುರುವಾಗುತ್ತದೆ.

ಇದನ್ನೂ ಓದಿ: ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಮಣಿಪಾಲವೆಂಬ ಮಾದಕ ಜಗತ್ತೇ ಹಾಗೆ. ಹದಿಹರೆಯದಲ್ಲಿ ನೀವು ಮಣಿಪಾಲದ ಮೋಹಕ್ಕೆ ಸಿಕ್ಕರೆ ಮುಗಿಯಿತು. ಅಲ್ಲಿ ಬರೋರೆಲ್ಲಾ ಶ್ರೀಮಂತರ ಮಕ್ಕಳೇ. ಅವರ ಲೈಫ್ ಸ್ಟೈಲ್ ನೋಡಿ, ಈ ಹಳ್ಳಿ ಮಕ್ಕಳೂ ಇಂಪ್ರೆಸ್ ಆಗೋದು ಮಾಮೂಲು. ರಕ್ಷಿತಾಗೂ ಅದೇ ಆಯ್ತು. ಈ ಹುಡುಗಿ ಮನೆ ಬಿಟ್ಟಳು. ತಾನೇ ಒಂದು ರೂಂ ಮಾಡಿ ಉಡುಪಿಯ ಬಳಿ ವಾಸ ಮಾಡಿದಳು. ಈ ನಡುವೆ ಮಾಡೆಲಿಂಗ್ ಸಲುವಾಗಿ ದುಬೈ ಪ್ರವಾಸವನ್ನೂ ಮಾಡಿ ಬಂದಿದ್ದಳು. ಈಕೆಯ ಇಡೀ ಇತಿಹಾಸ ಹೇಳೋದೇ ಅವಳ ಇನ್​ಸ್ಟಾಗ್ರಾಂ ಅಕೌಂಟ್.
ಕುಕ್ಕೆಹಳ್ಳಿಯ ಹುಡುಗಿಗೆ ಸಾವಿರಾರು ಫಾಲೋವರ್ಸ್.

ಈಕೆಗೆ ಇನ್ನೂ 19ರ ಹರೆಯ. ಹುಚ್ಚುಕೋಡಿ ಮನಸು. ದಿನ ಬೆಳಗಾದರೆ ಸಾಕು, ಬಗೆಬಗೆಯ ಭಾವ-ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳೋದು ರಕ್ಷಿತಾಗೆ ತುಂಬಾ ಇಷ್ಟ. ಹೀಗೆ ತೆಗೆಸಿಕೊಂಡ ಫೋಟೋಗಳನ್ನು ಇನ್​ಸ್ಟ್ರಾಗ್ರಾಂ ಅಕೌಂಟ್​ಗೆ ಅಪ್​ಲೋಡ್ ಮಾಡಿದರೆ ಸೈ, ಸಾವಿರಾರು ಲೈಕುಗಳು, ದಿನವೂ ನೂರಾರು ಕಮೆಂಟ್​ಗಳು. ಈ ಹುಡುಗಿಗೆ ಇನ್ ಸ್ಟ್ರಾಗ್ರಾಂನಲ್ಲೇ 45 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಅದು ಸೆಪ್ಟೆಂಬರ್ 24ರ ಮುಸ್ಸಂಜೆ 6. 30ರ ಸಮಯ. ನಗರದ ಹೃದಯ ಭಾಗದಲ್ಲಿರುವ ಗಾಂಧಿ ಆಸ್ಪತ್ರೆಗೆ ಒಂದು ಆಟೋ ಬರುತ್ತದೆ. ಆಟೋದಿಂದ ಇಳಿದ ಯುವಕನ ಜೊತೆ, ಇನ್ನೂ ಹದಿಹರೆಯದ ಹುಡುಗಿಯೊಬ್ಬಳು ಚಿಂತಾಜನ ಸ್ಥಿತಿಯಲ್ಲಿ ಕಂಡು ಬರ್ತಾಳೆ. ಆಕೆಯನ್ನು ಎತ್ತಿ ತಂದು ಸ್ಟ್ರಚ್ಚರ್ ಗೆ ಹಾಕಿ, ಹುಡುಗಿ ತಲೆ ತಿರುಗಿ ಬಿದ್ಲು, ಮೂರ್ಛೆ ತಪ್ಪಿದ್ದಾಳೆ, ಚಿಕಿತ್ಸೆ ನೀಡಿ ಎಂದವನೇ, ಮನೆಯವರಿಗೆ ಮಾಹಿತಿ ನೀಡುತ್ತೇನೆ ಒಂದು ನಿಮಿಷ ಅಂತ ಅಲ್ಲಿಂದ ಕಾಲು ಕೀಳುತ್ತಾನೆ.
Crime News Mysterious Death of Udupi Young Girl Rakshitha Lover arrested.
ಪ್ರಶಾಂತ್ ಕುಂದರ್


ಎಮರ್ಜೆನ್ಸಿ ವಾರ್ಡ್​ಗೆ ಕೊಂಡೊಯ್ದ ವೈದ್ಯರಿಗೆ ಆಕೆ ಈಗಾಗಲೇ ಸಾವನ್ನಪ್ಪಿದ್ದಾಳೆ ಎಂಬುದು ಅರಿವಿಗೆ ಬರುತ್ತದೆ. ಹೊರಗೆ ಬಂದು ನೋಡಿದಾಗ ಆಟೋವೂ ಇಲ್ಲ, ಹೆಣ ತಂದು ಹಾಕಿದ ಯುವಕನೂ ಇಲ್ಲ. ವೈದ್ಯರಿಗೆ ಗಾಬರಿಯಾಗುತ್ತದೆ. ಏನಪ್ಪಾ ಮಾಡೋದು ಅಂತಿರುವಾಗಲೇ ಈ ಹುಡುಗಿಯ ಮನೆಯವರು ಆಸ್ಪತ್ರೆ ಕಡೆಗೆ ಧಾವಿಸಿ ಬರ್ತಾರೆ. ಯುವತಿಯ ಆರೋಗ್ಯ ಸ್ಥಿತಿ ವಿಚಾರಿಸ್ತಾರೆ. ನಡೆದ ವಿಷಯ ತಿಳಿಸಿದಾಗ ಮನೆಯವರು ಕುಳಿತಲ್ಲೇ ಕುಸಿದು ಬೀಳುತ್ತಾರೆ. ನೋವೂ ಇಲ್ಲದ, ನೆಮ್ಮದಿಯೂ ಕಾಣದ ಮುಖಭಾವದಲ್ಲಿ ನಿರ್ಭಾವುಕರಾಗಿ ಬಿಡುತ್ತಾರೆ.

ಅಷ್ಟಕ್ಕೂ ಆಗಿದ್ದೇನು?:

ಇತ್ತೀಚೆಗೆ ರಕ್ಷಿತಾ ಕಾಲೇಜಿಗೆ ಬರೋದೂ ಅಪರೂಪ ಆಗಿತ್ತು. ಈಗಂತೂ ಲಾಕ್ ಡೌನ್ ಆದ ನಂತರ ಸ್ವಚ್ಛಂದ ಹಕ್ಕಿಯೇ ಆಗಿಬಿಟ್ಟಳು. ಮನೆಗೂ ಹೋಗೋದು ಅಪರೂಪ.  ಮಂಗಳೂರಲ್ಲಿ ಕೆಲಸ ಮಾಡ್ತೇನೆ ಅಂತ ಮನೆಯಲ್ಲಿ ಹೇಳಿದ್ದವಳು. ಉಡುಪಿಯ ಅಂಬಾಗಿಲಿನಲ್ಲಿ ರೂಂ ಮಾಡಿ ವಾಸ ಮಾಡುತ್ತಿದ್ದಳು. ಸೋಷಿಯಲ್ ಲೈಫ್ ನಡುವೆ ಪರಿಚಯವಾದ ಹುಡುಗನೇ ಪ್ರಶಾಂತ್ ಕುಂದರ್.  ಮಂಗಳೂರಿನಲ್ಲಿ ಹೋಟೆಲ್ ಉದ್ಯೋಗ ಸಿಕ್ಕಿದೆ ಎಂದು ಮನೆಯಲ್ಲಿ‌ ಸುಳ್ಳು ಹೇಳಿದ‌ ರಕ್ಷಿತಾ, ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆ ಮಾಡ್ತಾಳೆ. ಈಕೆಯ ಮನೆಗೆ‌ ಪ್ರತೀ‌ ದಿನ‌ ಪ್ರಿಯಕರ‌ ಪ್ರಶಾಂತ್ ಬಂದು ಹೋಗುತ್ತಿರುತ್ತಾನೆ.‌ ನೆರೆಮನೆಯವರು ಕೇಳಿದರೆ ನಾವು ಅಣ್ಣ ‌-ತಂಗಿ‌ ಅಂತ ಹೇಳಿದ್ದಳು.‌ ಹೀಗೆ ಪ್ರಶಾಂತ್ ಜೊತೆ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ವಾಸವಾಗಿದ್ದ ರಕ್ಷಿತಾ ಎರಡು ವಾರಕ್ಕೊಮ್ಮೆ ಹೆತ್ತವರನ್ನ ನೋಡಿ ಬರುತ್ತಿದ್ದಳು.

ಎರಡು ವಾರಕ್ಕೊಮ್ಮೆ ಮನೆಗೆ ಬಂದು‌ ಹೋಗುತ್ತಿದ್ದ ರಕ್ಷಿತಾ ಕೊನೆಯ ಬಾರಿ ಹೆತ್ತವರೊಂದಿಗೆ ಸಮಯ ಕಳೆದದ್ದು ಸಾಯೋಕೆ ಎರಡು‌ ದಿ‌‌ನ ಮೊದಲು.  ಅಕ್ಟೋಬರ್ 22ರಂದು ತನ್ನ ಮೊಬೈಲ್‌ ಸಿಮ್‌ ಸರಿ ಮಾಡಲು ಉಡುಪಿಗೆ ಬಂದಿದ್ದೇನೆ‌ ಅಂತ ತಂದೆಗೆ ಕರೆ‌ಮಾಡಿ‌ ಮನೆಗೂ ಬಂದಿದ್ದಳು. ‌ಮನೆಯಲ್ಲಿ ಸಮಯ ಕಳೆದು ಸಂಜೆ ಹೊರಡುತ್ತಾಳೆ.  ರಕ್ಷಿತಾಳನ್ನು‌ ತಂದೆ ಕುಕ್ಕೆಹಳ್ಳಿ‌ ಬಸ್‌ ನಿಲ್ದಾಣಕ್ಕೂ ಬಿಟ್ಟು ‌ಬಂದಿದ್ದರು. ಅದಾದ ಎರಡು ದಿನದ ಬಳಿಕ‌ ಪ್ರಶಾಂತ್​ನಿಂದ ಆಕೆಯ ಮನೆಯವರಿಗೆ ಕರೆ ಬರುತ್ತದೆ ನಿಮ್ಮ‌ ಮಗಳು ತಲೆತಿರುಗಿ‌ ಬಿದ್ದಿದ್ದಾಳೆ, ಬೇಗ ಗಾಂಧಿ ‌ಆಸ್ಪತ್ರೆಗೆ ಬನ್ನಿ‌ ಎಂದು.‌ ಅದಾದ ಕೆಲವೇ‌ ಕ್ಷಣದಲ್ಲೇ ಮೊಬೈಲ್‌ ಸ್ವಿಚ್ ಆಫ್.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಿಕ್ಷುಕನ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಜನ

ರಕ್ಷಿತಾ ಉಡುಪಿಯಲ್ಲೇ ಇದ್ದು ಮನೆಯವರಿಗೆ ತಾನು ಪ್ರಿಯಕರನ‌ ಜೊತೆ ಇರೋದು ಗೊತ್ತಾಗಬಾರದು ಅಂತ ಆಗಾಗ್ಗೆ ಮನೆಗೆ ಹೋಗಿ‌ ಬರುತ್ತಿದ್ದಳು. ಮನೆಯಲ್ಲಿ ಸುಳ್ಳು ಹೇಳಿ ಉಡುಪಿಯಲ್ಲೇ ಪ್ರಿಯಕರನ‌ ಜೊತೆ ಲಿವ್ ಇನ್ ‌ರಿಲೇಶನ್​ಶಿಪ್​ನಲ್ಲಿದ್ದಳು. ಪ್ರತಿ‌ದಿನ ಶಾರ್ಟ್ ಡ್ರೆಸ್​ನಲ್ಲಿ ಸೋಷಿಯಲ್‌ಮೀಡಿಯಾದಲ್ಲಿ ಮಿಂಚುತಿದ್ದಳು. ‌ಜೊತೆಗೆ ಪ್ರಶಾಂತ್ ‌ಗೆ ಉದ್ಯಮದಲ್ಲಿ ‌ಕೈ ಜೋಡಿಸಿ‌ದಳು ರಕ್ಷಿತಾ. ‌ಆದರೆ ಅದೆನಾಯ್ತೋ‌ ಒಂದು ವರ್ಷ‌ ಖುಷಿಯಾಗೇ ಇದ್ದ ರಕ್ಷಿತಾ ದಿಢೀರ್ ಎಂದು‌ ಸಾವನಪ್ಪಿರೋದು‌ ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಕ್ಷಿತಾಳ ಸೋಷಿಯಲ್‌ ಮೀಡಿಯಾ ಅಕೌಂಟ್, ಟಿಕ್‌ಟಾಕ್ ವೀಡಿಯೋ ನೋಡುತ್ತಿದ್ದರೆ‌ ಸಣ್ಣಪುಟ್ಟ ಕಾರಣಕ್ಕೆ ಸಾಯೋ ಯುವತಿ ಅಲ್ಲ.‌ ಆಕೆ ಮಾಡೆಲಿಂಗ್ ಕ್ಷೇತ್ರದಲ್ಲಿ‌ ಸ್ಟಾರ್ ಆಗೋ‌ ಕನಸು‌ ಕಂಡವಳು.‌‌ ಹಳ್ಳಿಯಿಂದ ಸಿಟಿಗೆ ಬಂದು ಕಾಲೇಜು‌ ಸಮಯದಲ್ಲೇ ಹಾವ ಭಾವ ತುಂಬ ಬದಲಾಗಿತ್ತು. ಇಂತಹ‌ ಸ್ಟೈಲಿಶ್ ಹುಡುಗಿಗೆ ಈ ಪ್ರಶಾಂತ್ ‌ಹೇಗೆ ಇಷ್ಟು ಕ್ಲೋಸ್ ಆಗಿ‌ ಕನೆಕ್ಟ್ ಆದ. ‌ಅದೇಗೆ ಈಕೆಯನ್ನು ‌ಬಲೆಗೆ ಬೀಳಿಸಿದ‌ ಅನ್ನೋದೆ ಎಲ್ಲರ ಮನಸಲ್ಲಿ ಬಂದಿರೋ‌ ಯಕ್ಷಪ್ರಶ್ನೆ.

ಆರೋಪಿ ಪ್ರಶಾಂತ್ ನಿಗೆ ಯುವತಿಯರ ಗೀಳು ಬಲು ಜೋರಾಗಿಯೇ ಇತ್ತು.‌ ರಕ್ಷಿತಾ ಈತನ ಚಾಳಿಗೆ ಬಲಿಯಾಗಿರೋ‌‌ ಯುವತಿ ಮೊದಲಲ್ಲ. 2016ರಲ್ಲಿ  ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ‌ ಅತ್ಯಾಚಾರ ಯತ್ನ ಮಾಡಿದ್ದ. ಈತನ ವಿರುದ್ದ ಫೋಕ್ಸೋ ಪ್ರಕರಣವೂ ದಾಖಲಾಗಿತ್ತು.‌ಅದಾದ ಬಳಿಕ ಹಲವು ಯುವತಿಯರೊಂದಿಗೆ ಚೆಲ್ಲಾಟವಾಡಿದ್ದ. ಸೋಶಿಯಲ್‌ ಮೀಡಿಯಾದ ಮೂಲಕ ಸಣ್ಣ ವಯಸ್ಸಿನ ಯುವತಿಯರನ್ನ ಬುಟ್ಟಿಗೆ ಬೀಳಿಸೋದೇ ಈತನ ಖಯಾಲಿಯಾಗಿತ್ತು.‌ ಪ್ರಶಾಂತ್ ಕುಂದರ್ ಉಡುಪಿಯ ಫರ್ನೀಚರ್ ಅಂಗಡಿಯೊಂದರಲ್ಲಿ ಸೇಲ್ಸ್ ಮತ್ತು ಡಿಸೈನ್ ಕೆಲಸ ಮಾಡ್ತಾ ಇದ್ದ. ಈತನಿಗೆ ಆನ್ ಲೈನ್ ನಲ್ಲೇ ಪರಿಚಯವಾದ ರಕ್ಷಿತಾ, ಈತನ ಬ್ಯುಸಿ ನೆಸ್ ಗೆ ಸಹಾಯ ಮಾಡುತ್ತಿದ್ದಳು. ಕೆಲವೊಂದು ಕಸ್ಟಮರ್ಸ್ ನ್ನು ಪರಿಚಯಿಸಿ ಆತನ ಸೇಲ್ಸ್ ಗೆ ನೆರವಾದಳು. ಆತ ಮೊದಲೇ ವಿವಾಹಿತ. ಈ ನಡುವೆ ಯಾವಾಗ ರಕ್ಷಿತಾನ ಬುಟ್ಟಿಗೆ ಹಾಕಿಕೊಂಡನೋ ಗೊತ್ತಿಲ್ಲ. ವಿವಾಹಿತ ಪ್ರಶಾಂತನ ಜೊತೆ 19 ರ ಹರೆಯದ ರಕ್ಷಿತಾ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಳು. ಉಪ್ಪೂರಿನಲ್ಲಿರುವ ಮಡದಿಯ ಜೊತೆಗೆ, ರಕ್ಷಿತಾ ಜೊತೆಗೂ ಈತನ ಕಣ್ಣಾಮುಚ್ಚಾಲೆ ಆಟ ನಡೀತಾ ಇತ್ತು. ಬಿಂದಾಸ್ ಹುಡುಗಿ ರಕ್ಷಿತಾಗೆ ಈತನ ವೈವಾಹಿಕ ಜೀವನ ಅಡ್ಡಿಯಾಗಲಿಲ್ಲ. ಆದರೆ ಮೊದಲೇ ಲವ್ ಮಾಡಿ ಮದುವೆಯಾಗಿದ್ದ ಪ್ರಶಾಂತನ ಮಡದಿಗೆ ಈ ಸಂಬಂಧ ಸಹಿಸಲಿಲ್ಲ. ವಿಷಯ ತಿಳಿದ ಆಕೆ ಪತಿ ಪ್ರಶಾಂತ್ ನಹುಚ್ಚು ಬಿಡಿಸಲು ಮುಂದಾದಳು. ಈ ಘಟನೆ ನಡೆದ ದಿನ ಪ್ರಶಾಂತ್ ಗೆ ರಕ್ಷಿತಾ ಕರೆ ಮಾಡುತ್ತಾಳೆ.

ನಾನು ಸಿಕ್ಕಾಪಟ್ಟೆ ಕುಡಿದಿದ್ದೇನೆ, ಬದುಕೋ ಆಸೆ ಇಲ್ಲ. ಸಾಯುತ್ತೇನೆ ಅಂತ ಕರೆ ಮಾಡಿದ್ದಳು. ಎಲ್ಲೋ ಇದ್ದ ಪ್ರಶಾಂತ್ ಧಾವಿಸಿ ಬಂದು ಆಕೆಯ ಮನೆ ಹೊಕ್ಕಾಗ, ಪಂಚೆಯಲ್ಲಿ ನೇಣು ಬಿಗಿದು ಕೊಂಡಿದ್ದಳು. ಆಕೆಯನ್ನು ಇಳಿಸಿದವನೇ ಪ್ರಶಾಂತ್ ನೇರ, ಗಾಂಧಿ ಆಸ್ಪತ್ರೆಗೆ ಬಂದಿದ್ದ. ಆಕೆ ಬದುಕುವ ಸಾಧ್ಯತೆ ಕಡಿಮೆ ಅಂತ ಗೊತ್ತಾದ ಮೇಲೆ ಅಲ್ಲಿಂದ ಕಾಲ್ಕಿತ್ತು ತಲೆಮರೆಸಿಕೊಂಡ. ತಪ್ಪಿಸಿಕೊಂಡು ಎಲ್ಲಿಗೆ ಹೋಗೋಕಾಗುತ್ತೆ?  ಸದ್ಯ ಪ್ರಶಾಂತ್ ಪೊಲೀಸರ ಅತಿಥಿಯಾಗಿದ್ದಾನೆ. ರಕ್ಷಿತಾ ಸಾವಿನ ಕಾರಣವನ್ನು ಪೊಲೀಸರು ಆತನ ತನಿಖೆಯಿಂದ ಹೊರಹಾಕಬೇಕು. ಅಜ್ಜರಕಾಡು ಆಸ್ಪತ್ರೆಯಲ್ಲಿಟ್ಟ ದೇಹವನ್ನು ಮಣಿಪಾಲದ ಕೆಎಂಸಿ ಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದೆ.

ಇನ್ನು ರಕ್ಷಿತಾಳ  ಕತ್ತಿನಲ್ಲಿ ಗಾಯದ ಗುರುತುಗಳಿವೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ, ಆದರೆ ರಕ್ಷಿತಾಳ ಲೈಫ್ ಸ್ಟೈಲ್ ನೋಡಿದ್ರೆ, ಸಣ್ಣಪುಟ್ಟ ಕಾರಣಕ್ಕೆಲ್ಲಾ ಆಕೆ ಸಾಯೋಳಲ್ಲ. ಹಾಗಾದ್ರೆ ಸಾವಿಗೆ ಕಾರಣ ಏನು? ತನಿಖೆಯಿಂದ ಗೊತ್ತಾಗುತ್ತೆ. ಇಷ್ಟಕ್ಕೂ ಪ್ರಶಾಂತ ಏನೂ ಅಮಾಯಕ ಆಸಾಮಿಯಲ್ಲ. ಬೈಂದೂರು ಸಮೀಪದ ಜಡ್ಕಲ್ ಮೂಲದ ಈತ, ತನ್ನ ಊರಲ್ಲೂ ಅಪ್ರಾಪ್ತ ಹುಡುಗಿಯ ಜೊತೆ ಚೆಲ್ಲಾಟವಾಡಿ ಸಿಕ್ಕಿಬಿದ್ದವ. ಲವ್ ಮಾಡಿ ಮದುವೆಯಾದವ. ಇವನ ಕಳ್ಳಾಟಕ್ಕೆ ಇನ್ನಾದ್ರೂ ಬ್ರೇಕ್ ಬೀಳಬೇಕಿದೆ.
Youtube Video

ಇದು ಕೇವಲ‌ ರಕ್ಷಿತಾಳ ಜೀವನದಲ್ಲಿ‌ ನಡೆದ ಘಟನೆಯಾಗಿ‌ ಉಳಿದಿಲ್ಲ. ಅದೆಷ್ಟೋ ಯುವತಿಯರು ಹೀಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ.‌ ಮದುವೆಯಾಗಿದ್ರೂ ಇನ್ನಷ್ಟು ಯುವತಿರನ್ನ‌ ಬಲೆಗೆ ಬೀಳಿಸಿ ಪ್ರೀತಿ‌ ಹೆಸರಲ್ಲಿ‌ ಆಟವಾಡೋ‌ ಯುವಕರಿಂದ ಇನ್ನಾದ್ರೂ ಯುವತಿಯರು ಎಚ್ಚೆತ್ತುಕೊಳ್ಳಬೇಕಿದೆ.‌ ಹೈಫೈ ಲೈಫ್ ಸ್ಟೈಲ್ ‌ಜೊತೆಗೆ ಮನಸ್ಸಿನ ಹಾಗೂ‌ ಬುದ್ದಿಯ‌ ಸ್ಥಿಮಿತತೆ‌  ಕಳೆದುಕೊಳ್ಳದೆ‌ ಯುವತಿಯರು ಅಲರ್ಟ್ ಆಗಿರಿ‌ ಅನ್ನೋದೇ ಎಲ್ಲರ‌ ಆಶಯ.
Published by: Sushma Chakre
First published: October 27, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories