ಹುಬ್ಬಳ್ಳಿ: ನಾವು ಎಷ್ಟೆ ಎಚ್ಚರ ವಹಿಸಿದ್ರೂ ವಂಚಕರು ಮಾತ್ರ ಜಾಲ ಬೀಸುತ್ತಲೇ ಇರ್ತಾರೆ. ಅದರಲ್ಲಿಯೂ ಹುಬ್ಬಳ್ಳಿಯಲ್ಲಿ (Hubballi) ಇಂತಹ ವಂಚಕರ ಜಾಲ ದೊಡ್ಡ ಪ್ರಮಾಣದಲ್ಲಿದ್ದು, ನೋಡನೋಡತ್ತಿದ್ದಂತೆಯೇ ವಂಚನೆ (Fraud Alert) ನಡೆದು ಹೋಗ್ತಿದೆ. ವ್ಯಕ್ತಿಯೋರ್ವನಿಗೆ ಎಟಿಎಂ ಕಾರ್ಡ್ ಅದಲು ಬದಲು ಮಾಡಿ ಸಾವಿರಾರು ರೂಪಾಯಿ ಡ್ರಾ ಮಾಡಿಕೊಳ್ಳೋ ಜೊತೆಗೆ, ಅದೇ ಕಾರ್ಡ್ನಲ್ಲಿ ಬಂಗಾರವನ್ನೂ (ATM Money Fraud) ಖರೀದಿಸಿ ಪಂಗನಾಮ ಹಾಕಲಾಗಿದೆ. ಇನ್ನು ಮನೆ ಮಾಲೀಕರೇ ಬಾಡಿಗೆ ಜಾಹೀರಾತು ನೀಡಿ ಸಾವಿರಾರು ರೂಪಾಯಿ ವಂಚನೆಗೆ ಒಳಲಾಗಿದ್ದಾರೆ. ವ್ಯಕ್ತಿಯೋರ್ವರನ್ನು ಏಮಾರಿಸಿ ಎಂಟಿಎಂ ಅದಲು ಬದಲು (ATM Fraud) ಮಾಡಿ ಹಣ ವಂಚನೆ (Money Fraud) ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬೇರೊಬ್ಬರ ಎಟಿಎಂ ಪಡೆದು ಹಣ ಡ್ರಾ ಮಾಡಿಕೊಂಡು ವಂಚನೆ ಮಾಡಲಾಗಿದೆ. ಗ್ರಾಹಕನಿಗೆ ಏಮಾರಿಸಿ ಬರೋಬ್ಬರಿ 88,700 ಡ್ರಾ ಮಾಡಿಕೊಂಡು ವಂಚನೆ ಮಾಡಲಾಗಿದೆ. ವಂಚನೆಗೆ ಒಳಗಾದ ವ್ಯಕ್ತಿಯನ್ನು ಮಧುರಾ ಕಾಲೋನಿಯ ಪುರಂದರ ಹೆಗಡೆ ಎಂದು ಗುರುತಿಸಲಾಗಿದೆ. ಪುರಂದರ ಅವರು ಎಟಿಎಂನಲ್ಲಿ ಹಣ ಪಡೆಯುವಾಗ ಅಪರಿಚಿತ ಏಮಾರಿಸಿದ್ದಾನೆ.
ಸಹಾಯ ಮಾಡುವ ನೆಪದಲ್ಲಿ ವಂಚನೆ!
ಕಾರ್ಡ್ ಇಟ್ಟಾಗ ಎಟಿಎಂ ಯಂತ್ರದ ಕ್ಲೋಸ್ ಬಟನ್ ಒತ್ತಿದ್ದ ವಂಚಕ, ನಂತರ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಅದಲು ಬದಲು ಮಾಡಿದ್ದಾನೆ. ಎಟಿಎಂ ಬಳಕೆ ವೇಳೆ ನಮೂದಿಸಿದ್ದ ಪಾಸ್ವರ್ಡ್ ನೆನಪಿಲ್ಲಿಟ್ಟುಕೊಂಡು ಕೃತ್ಯ ಎಸಗಿದ್ದಾನೆ. ನಂತರ ಬೇರೆ ಬೇರೆ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಅದೇ ಕಾರ್ಡ್ ಬಳಸಿ ಬಂಗಾರದ ಅಂಗಡಿಯಲ್ಲಿ ಖರೀದಿಯನ್ನೂ ಮಾಡಿದ್ದಾನೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನೆ ಬಾಡಿಗೆ ಹೆಸರಲ್ಲಿಯೂ ವಂಚನೆ!
ಯಾರಾದ್ರೂ ಮನೆ ಬಾಡಿಗೆ ಕೊಡುವವರು ಬಾಡಿಗೆ ಬರುವವರಿಂದ ಹಣ ಪಡೆಯೋದು ಸಹಜ. ಆದ್ರೆ ಈ ವಿಚಿತ್ರ ಪ್ರಕರಣದಲ್ಲಿ ಮನೆ ಮಾಲೀಕರೇ ಬಾಡಿಗೆ ಬರುವವನಿಗೆ ಹಣ ಹಾಕಿ ವಂಚನೆಗೆ ಒಳಗಾಗಿದ್ದಾರೆ. ಮನೆಯನ್ನು ಬಾಡಿಗೆ ಕೊಡುವುದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿ ಮಹಿಳೆಯೊಬ್ಬರು ಸಾವಿರಾರು ರೂಪಾಯಿ ವಂಚನೆಗೆ ಒಳಗಾದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮನೆ ಬಾಡಿಗೆ ಪಡೆಯುವ ನೆಪದಲ್ಲಿ ವ್ಯಕ್ತಿಯೋರ್ವ ಮಹಿಳೆಗೆ ವಂಚನೆ ಮಾಡಿದ್ದಾನೆ. ಹುಬ್ಬಳ್ಳಿಯ ನವನಗರ ನಿವಾಸಿಗೆ ಪಂಗನಾಮ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಮನೆ ಬಾಡಿಗೆ ಜಾಹೀರಾತು ನೋಡಿ ಮಹಿಳೆಯೊಬ್ಬರಿಗೆ 49 ಸಾವಿರ ರೂಪಾಯಿ ವಂಚನೆ ಮಾಡಲಾಗಿದೆ. ಹುಬ್ಬಳ್ಳಿ ನವನಗರದ ಪ್ರೀತಿ ವಾಂಡಕರ್ ವಂಚನೆಗೆ ಒಳಗಾದ ಮಹಿಳೆಯಾಗಿದ್ದಾಳೆ.
ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಕ್ವಿಕರ್ ಡಾಟ್ ಕಾಮ್ ಹೆಸರಲ್ಲಿ ಪ್ರೀತಿ ಅವರನ್ನು ಸಂಪರ್ಕಿಸಿದ ವಂಚಕರು, ಆನ್ ಲೈನ್ ಮೂಲಕ ಹಣ ಹಾಕಿಸಿಕೊಂಡಿದ್ದಾರೆ. ತಾನು ಬೆಂಗಳೂರು ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ, ಹುಬ್ಬಳ್ಳಿ ವಿಮಾ ನಿಲ್ದಾಣಕ್ಕೆ ವರ್ಗಾವಣೆಯಾಗಿರುವುದಾಗಿ ತಿಳಿಸಿದ್ದ. ಬಾಡಿಗೆ ಮನೆ ಬೇಕಾಗಿದ್ದು, ಮುಂಗಡವಾಗಿ 50 ಸಾವಿರ ರೂಪಾಯಿ ಪಾವತಿಸ್ತೇನೆ ಎಂದು ಆತ ದೂರವಾಣಿ ಮೂಲಕ ಹೇಳಿಕೊಂಡಿದ್ದಾನೆ.
ಮೊದಲು ನನಗೆ 5 ಸಾವಿರ ಪಾವತಿಸಿ ಎಂದ ಆರೋಪಿ ಸೇನಾ ನಿಯಮದ ಪ್ರಕಾರ 5 ಸಾವಿರ ಪಾವತಿಸಿದರೆ ನಿಮಗೆ 10 ಸಾವಿರ ಪಾವತಿಯಾಗುತ್ತೆ ಎಂದು ವ್ಯಕ್ತಿ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ಆನ್ ಲೈನ್ ಮೂಲಕ ಹಂತ ಹಂತವಾಗಿ 49 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾಳೆ. ಅದೆಲ್ಲವೂ ಮುಗಿದ ನಂತರ ಆಕೆಗೆ ಯಾವುದೇ ಮುಂಗಡ ಹಣ ಬಂದಿಲ್ಲ.
ಹಣ ಪಡೆದುಕೊಂಡ ವ್ಯಕ್ತಿಯೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮೋಸ ಹೋಗಿರೋದು ಖಾತ್ರಿಯಾಗುತ್ತಿದ್ದಂತೆಯೇ ವಂಚನೆಗೆ ಒಳಗಾದ ಮಹಿಳೆ ದೂರು ದಾಖಲು ಮಾಡಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವರದಿ - ಶಿವರಾಮ ಅಸುಂಡಿ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ