HOME » NEWS » State » CRIME NEWS MANGALORE ROWDY GANG ATTACKED ON A BOY WITH TALWAR IN MANGALURU SCT KKM

ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್; ಆಸ್ಪತ್ರೆ ಎದುರಲ್ಲೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

8 ದಿನಗಳ ಹಿಂದೆ ನೌಷಾದ್​ನ ಮಾವ ಅಬ್ದುಲ್ ಅಜೀಜ್ ಮೇಲೆ ಯುವಕರ ಗುಂಪೊಂದು ಚೂರಿ ಇರಿದು ಕೊಲೆಗೆ ಯತ್ನಿಸಿತ್ತು. ಗಾಯಗೊಂಡಿದ್ದ ಮಾವನನ್ನು ನೋಡಲು ನಿನ್ನೆ ನೌಷಾದ್ ಯುನಿಟಿ ಆಸ್ಪತ್ರೆಗೆ ಬಂದಿದ್ದರು. ಇನ್ನೇನು ಆಸ್ಪತ್ರೆಯಿಂದ ಬೈಕ್‌ನಲ್ಲಿ ಹೊರಡಬೇಕು ಅನ್ನುವಷ್ಟರಲ್ಲಿ ಐದು ಜನ ದುಷ್ಕರ್ಮಿಗಳು ನೌಷಾದ್ ಮೇಲೆ ತಲ್ವಾರ್ ಬೀಸಿದ್ದಾರೆ.

news18-kannada
Updated:November 24, 2020, 12:05 PM IST
ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್; ಆಸ್ಪತ್ರೆ ಎದುರಲ್ಲೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು (ನ. 24): ಕರಾವಳಿಯಲ್ಲಿ ಮತ್ತೆ ತಲ್ವಾರ್ ದಾಳಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಒಂದು ವಾರದ ಹಿಂದೆ ಯುವಕನ ಮಾವನ ಮೇಲೆ ಅಟ್ಯಾಕ್ ನಡೆದಿತ್ತು. ಇದೀಗ ನಿನ್ನೆ ಅಳಿಯನ ಮೇಲೆ ದುಷ್ಕರ್ಮಿಗಳು ತಲ್ವಾರ್ ಬೀಸಿದ್ದಾರೆ. ಕಡಲನಗರಿ ಮಂಗಳೂರಿನಲ್ಲಿ ತಲ್ವಾರ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಸಹ ನಗರದ ಪಳ್ನೀರ್ ಬಳಿಯ ಯುನಿಟಿ ಆಸ್ಪತ್ರೆಯ ಮುಂಭಾಗವೇ ದುಷ್ಕರ್ಮಿಗಳು ತಲ್ವಾರ್ ಝಳಪಿಸಿದ್ದಾರೆ. ಕುಟುಂಬದ ಜೊತೆ ಬೈಕ್​​ನಲ್ಲಿ ಹೋಗಲು ಹೊರಗೆ ಬಂದ ಯುವಕನ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಯುವಕನನ್ನು ನೌಷಾದ್ (30) ಎಂದು ಗುರುತಿಸಲಾಗಿದೆ.

ಎಂಟು ದಿನಗಳ ಹಿಂದೆ ನೌಷಾದ್​ನ ಮಾವ ಅಬ್ದುಲ್ ಅಜೀಜ್ ಮೇಲೆ ಗುರುಪುರ ಕೈಕಂಬ ಬಳಿಯ ಕಂದಾವರ ಮಸೀದಿ ಸಮೀಪ ಯುವಕರ ಗುಂಪೊಂದು ಚೂರಿ ಇರಿದು ಕೊಲೆಗೆ ಯತ್ನಿಸಿತ್ತು. ಗಾಯಗೊಂಡಿದ್ದ ಅಬ್ದುಲ್ ಅಜೀಜ್‌ಗೆ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಪತ್ನಿ ಸಹಿತ ಮಾವನನ್ನು ನೋಡಲು ನೌಷಾದ್ ಯುನಿಟಿ ಆಸ್ಪತ್ರೆಗೆ ಬಂದಿದ್ದರು. ಇನ್ನೇನು ಆಸ್ಪತ್ರೆಯಿಂದ ಹೊರಗೆ ಬಂದು ಬೈಕ್‌ನಲ್ಲಿ ಹೊರಡಬೇಕು ಅನ್ನುವಷ್ಟರಲ್ಲಿ ಕಾರಿನಲ್ಲಿ ಬಂದ ಐದು ಜನ ದುಷ್ಕರ್ಮಿಗಳು ನೌಷಾದ್ ಮೇಲೆ ತಲ್ವಾರ್ ಬೀಸಿದ್ದಾರೆ.

ಇದನ್ನೂ ಓದಿ: ಡಿಜೆ ಹಳ್ಳಿ,ಕೆಜಿ ಹಳ್ಳಿ ಗಲಭೆ ಪ್ರಕರಣ; ಇಂದು ಕೂಡ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆ

ಐವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಮೂವರು ದಾಳಿ ನಡೆಸಿ ಎಸ್ಕೇಪ್ ಆದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ತಲ್ವಾರಿನ ಒಂದು ಪೀಸ್ ತುಂಡಾಗಿ ನೌಷಾದ್ ದೇಹದೊಳಗೆ ಹೊಕ್ಕಿ ಗಂಭೀರ ಗಾಯವಾಗಿತ್ತು. ನೌಷಾದ್ ಎದೆ ಭಾಗಕ್ಕೆ ಗಾಯವಾಗಿದ್ದು, ಯುನಿಟಿ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನವೆಂಬರ್ 15ರಂದು ಕಂದಾವರ ಮಸೀದಿ ವಿಚಾರದಲ್ಲಿ ನೌಷಾದ್​ನ ಮಾವ ಅಬ್ದುಲ್ ಅಜೀಜ್‌ಗೆ ಯುವಕರ ಗುಂಪೊಂದು ಚೂರಿ ಇರಿದು ಪರಾರಿಯಾಗಿತ್ತು. ಮಸೀದಿಯಲ್ಲಿ ನಮಾಝ್ ಮುಗಿಸಿ ಹೊರಬಂದು ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಚೂರಿಯಿಂದ ಯದ್ವಾತದ್ವಾ ಇರಿದು ಪರಾರಿಯಾಗಿತ್ತು.

ಈ ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ 15 ಮಂದಿ ಆರೋಪಿಗಳ ವಿರುದ್ದ ದೂರು ಸಹ ನೀಡಲಾಗಿತ್ತು. ಆದರೆ ಘಟನೆ ನಡೆದು ಎಂಟು ದಿನಗಳು ಕಳೆದರೂ ಆರೋಪಿಗಳ ಬಂಧನ ಆಗಿರಲಿಲ್ಲ. ಪೊಲೀಸರ ಈ ಕ್ರಮದ ವಿರುದ್ದ ಊರ ಮಂದಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಹ ನೀಡಿದ್ದರು. ಇದೀಗ ಆರೋಪಿಗಳ ಬಂಧನಕ್ಕೂ ಮೊದಲೇ ಅಬ್ದುಲ್ ಅಜೀಜ್‌ನ ಅಳಿಯನ ಮೇಲೂ ತಲ್ವಾರ್ ದಾಳಿ ಆಗಿದೆ. ಕಂದಾವರದಲ್ಲಿ ಅಟ್ಯಾಕ್ ಮಾಡಿದ ತಂಡವೇ ಈ ದುಷ್ಕೃತ್ಯ ನಡೆಸಿರುವ ಶಂಕೆಯಿದೆ.

ನಿನ್ನೆ ಈ ಘಟನೆ ನಡೆದ ತಕ್ಷಣ ಕದ್ರಿ ಠಾಣೆಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೂ, ಕಂದಾವರದ ಘಟನೆಗೂ ಏನು ಲಿಂಕ್ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿದೆ, ತಲ್ವಾರ್ ಝಳಪಿಸುವ ಪುಡಿ ರೌಡಿಗಳಿಗೆ ಬುದ್ದಿ ಕಲಿಸಬೇಕಾಗಿದೆ.
Published by: Sushma Chakre
First published: November 24, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading