news18-kannada Updated:August 18, 2020, 8:36 AM IST
ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆ ಮತ್ತು ಆಕೆಯ ಪತಿ
ಕೋಲಾರ (ಆ.18): ಕ್ಷುಲ್ಲಕ ಕಾರಣಕ್ಕೆ ಮನಸ್ಸಿನಲ್ಲಿ ಏರ್ಪಡುವ ದುಡುಕಿನ ನಿರ್ಧಾರದಿಂದ, ಎಷ್ಟು ದೊಡ್ಡ ಅಮಾನವೀಯ ಕೃತ್ಯಕ್ಕಾದರೂ ಮನುಷ್ಯ ಕೈ ಹಾಕಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ಹಣಕಾಸಿನ ವಿಚಾರದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಕುಪ್ಪಂನ ಎ.ಬಿ.ಬ್ಲಾಕ್ ಬಡಾವಣೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಸುಧಾ ಎನ್ನುವವರು ಮನೆಯಲ್ಲಿ ಅಡುಗೆಗೆ ಸಿದ್ದಪಡಿಸಿಕೊಳ್ಳುತ್ತಿದ್ದ ವೇಳೆ ಮುಖ ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಏಕಾಏಕಿ ಆ್ಯಸಿಡ್ ಎರಚಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಆ್ಯಸಿಡ್ ಮಹಿಳೆಯ ಬೆನ್ನಿನ ಭಾಗಕ್ಕೆ ಮಾತ್ರ ಸ್ವಲ್ಪ ತಗುಲಿದೆ. ಇನ್ನು ಸುಧಾ ಅವರು ತಪ್ಪಿಸಿಕೊಳ್ಳುವ ಭರದಲ್ಲಿ ಕೈ ಹಾಗೂ ತಲೆಗೂ ಸ್ವಲ್ಪ ಗಾಯಗಳಾಗಿದೆ. ಅಪಾಯದಿಂದ ಪಾರಾದ ಸುಧಾ ತನ್ನ ಗಂಡ ಆನಂದ್ಗೆ ಫೋನ್ ಮಾಡಿ ಸಹಾಯ ಪಡೆದುಕೊಂಡು, ಕೆಜಿಎಫ್ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಡಹಗಲೇ ನಡೆದಿರುವ ಈ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ನಗರವಾಸಿಯ ವನ ಜೀವನ; ಲಕ್ಷಾಂತರ ಸಂಬಳಕ್ಕೆ ಗುಡ್ ಬೈ-ಕಾಡಿನಲ್ಲಿ ಏಕಾಂಗಿ ಬದುಕು
ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಲು ಆರ್ಥಿಕ ವ್ಯವಹಾರವೇ ಕಾರಣ ಎನ್ನಲಾಗಿದೆ. ಡಿಸಿಸಿ ಬ್ಯಾಂಕ್ ಸಹಕಾರದಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ವಿಚಾರವಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಬಡಾವಣೆಯಲ್ಲಿ ಒಂದು ಸ್ತ್ರೀ ಶಕ್ತಿ ಗುಂಪು ಸ್ಥಾಪಿಸಿಕೊಂಡಿರುವ ಸುಧಾ ಹಾಗೂ ಇತರೆ ಸದಸ್ಯರು ಸಾಲ ವಸೂಲಾತಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ ಇತ್ತೀಚೆಗೆ ಸಂಘದ ಸದಸ್ಯರೆಲ್ಲರೂ ಪಡೆದಿರುವ ಸಾಲವನ್ನು ನೀವೊಬ್ಬರೇ ವಸೂಲಿ ಮಾಡಿ ಎಂದು ಸದಸ್ಯರೊಬ್ಬರು ತಿಳಸಿದ್ದಾರೆ. ಇದಕ್ಕೆ ಒಪ್ಪದ ಸುಧಾ, ನಾನು ಜವಾಬ್ದಾರಿ ಹೊತ್ತಿರುವ ಸದಸ್ಯರ ಬಳಿ ಮಾತ್ರ ನಾನು ವಸೂಲಿ ಮಾಡುತ್ತೇನೆ ಎಂದು ಹೇಳಿದ್ದರು.
ತಮ್ಮ ಪತ್ನಿಗೆ ಆವಾಜ್ ಹಾಕಿದ್ದಕ್ಕೆ ಕೋಪದಿಂದ, ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ವೆಂಕಟೇಶ್ ಎನ್ನುವವರು ಈ ಆ್ಯಸಿಡ್ ದಾಳಿ ಮಾಡಿದ್ದಾರೆಂದು ಸುಧಾ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಮಗೆ ರಕ್ಷಣೆ ನೀಡಿ ಎಂದು ಸುಧಾ ಹಾಗೂ ಪತಿ ಆನಂದ್ ಮನವಿ ಮಾಡಿದ್ದಾರೆ.
Published by:
Sushma Chakre
First published:
August 18, 2020, 7:39 AM IST