news18-kannada Updated:February 24, 2021, 7:29 AM IST
ಸಿಕ್ಕಿಬಿದ್ದ ಆಸಾಮಿ ಮಾಲತೇಶ್.
ಬೆಂಗಳೂರು: ಅದು ಪ್ರತಿಷ್ಠಿತ ಸರ್ಕಾರಿ ಅಸ್ಪತ್ರೆ. ಅಲ್ಲಿ ನೂರಾರು ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದು ದಿನನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಹಾರೈಕೆ ಮಾಡ್ತಿರ್ತಾರೆ. ಅದ್ರೆ ಇಂತಹ ಅಸ್ಪತ್ರೆಯಲ್ಲಿ ಅವನೊಬ್ಬ ಪೋಲಿ ಹುಡುಗ ಒಳ ಹೊಕ್ಕಿದ್ದು ಅಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ದುಸ್ವಪ್ನವಾಗಿದ್ದ. ಆಸ್ಪತ್ರೆಯ ಮಹಿಳಾ ಡ್ರೆಸ್ಸಿಂಗ್ ರೂಂನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕಾಮುಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಸಂಜಯ್ ಗಾಂಧಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಾಲತೇಶ್ 29, ಬಂಧಿತ ವ್ಯಕ್ತಿ.
ಆರೋಪಿ ಮಾಲತೇಶ್ ಕಳೆದ ಆರು ವರ್ಷಗಳಿಂದ ಸಂಜಯಗಾಂಧಿ ಅಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿ ಹೆಚ್ಚಾಗಿ ಆಪರೇಷನ್ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಈ ವೇಳೆ ಆರೋಪಿ ಪಕ್ಕದಲ್ಲೆ ಇದ್ದ ಮಹಿಳಾ ಸಿಬ್ಬಂದಿ ಡ್ರೆಸ್ಸಿಂಗ್ ಕೊಠಡಿಗೆ ಮೊಬೈಲ್ ಚಾರ್ಜ್ ಹಾಕುವ ನೆಪದಲ್ಲಿ ಪದೇ ಪದೇ ಹೋಗಿ ಬರುತ್ತಿದ್ದನಂತೆ.
ಮೊಬೈಲ್ ಚಾರ್ಜ್ ಹಾಕುತ್ತಿದ್ದ ಆರೋಪಿ ನಂತರ ಯಾರಿಗೂ ತಿಳಿಯದಂತೆ ಮೊಬೈಲ್ ಕ್ಯಾಮೆರಾ ರೆಕಾರ್ಡಿಂಗ್ ಆನ್ ಮಾಡಿ ಇಟ್ಟು ಹೊರ ಬರ್ತಿದ್ದನಂತೆ. ಇದ್ರಿಂದ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್ ಮಾಡುವ ದೃಶ್ಯಗಳು ಸಹ ಮೊಬೈಲ್ ನಲ್ಲಿ ಸೆರೆಯಾಗುತ್ತಿದ್ದು ಕೆಲ ಸಮಯದ ನಂತರ ಮೊಬೈಲ್ ತೆಗೆದುಕೊಳ್ತಿದ್ದನಂತೆ. ಹಲವಾರು ದಿನ ಇದೇ ರೀತಿ ಮಾಡ್ತಿದ್ದ ಮಾಲತೇಶ್ ಕಳೆದ ವಾರ ಡ್ರೆಸ್ಸಿಂಗ್ ರೂಂಗೆ ತೆರಳಿ ಮೊಬೈಲ್ ರೆಕಾರ್ಡಿಂಗ್ ಇಟ್ಟು ಬಳಿಕ ತನ್ನ ಲ್ಯಾಬ್ ಗೆ ಬಂದಿದ್ದಾನೆ.
ಈ ವೇಳೆ ಮಹಿಳಾ ಸಿಬ್ಬಂದಿ ಡ್ರೆಸ್ಸಿಂಗ್ ರೂಂಗೆ ಬಂದಿದ್ದು ಅಲ್ಲಿದ್ದ ಮೊಬೈಲ್ ಗಮನಿಸಿದ್ದಾರೆ. ಯಾರ ಮೊಬೈಲ್ ಇದು ಎಂದು ನೋಡಿದಾಗ ಅದರಲ್ಲಿ ಕ್ಯಾಮೆರಾ ಮೋಡ್ ಆನ್ ಅಗಿ ಎಲ್ಲವೂ ರೆಕಾರ್ಡ್ ಅಗ್ತಿತ್ತಂತ್ತೆ. ಕೂಡಲೇ ಆರೋಪಿ ಮಾಲತೇಶ್ ಅಲ್ಲಿಗೆ ದೌಡಾಯಿಸಿ ಮೊಬೈಲ್ ನನ್ನದು ಎಂದು ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: ಕೆಂಪುಕೋಟೆ ಗಲಭೆ ಪ್ರಕರಣ; ಪ್ರಮುಖ ಆರೋಪಿ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಈ ವೇಳೆ ಮೊಬೈಲ್ ತೆಗೆದುಕೊಂಡ ಮಹಿಳಾ ಸಿಬ್ಬಂದಿ ಗ್ಯಾಲರಿ ನೋಡಲು ಮುಂದಾಗಿದ್ದು ಆರೋಪಿ ಮಾಲತೇಶ್ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿದ್ದಾನೆ. ಪುನಃ ಮಹಿಳಾ ಸಿಬ್ಬಂದಿ ಮೊಬೈಲ್ ಪಡೆದು ಡಿಲೀಟ್ ಆದ ವಿಡಿಯೋಗಳಿರುವ ತ್ರ್ಯಾಷ್ ಚೆಕ್ ಮಾಡ್ದಾಗ ಅದರಲ್ಲಿ ಕೆಲವು ವಿಡಿಯೋಗಳು ಕಂಡು ಬಂದಿವೆ. ಕೂಡಲೇ ಅಸ್ಪತ್ರೆ ಆಡಳಿತ ಮಂಡಳಿಯವರಿಗೆ ಮೊಬೈಲ್ ಸಮೇತ ದೂರು ನೀಡಿದ್ದಾರೆ. ಆಡಳಿತ ಮಂಡಳಿಯವರು ಮೊಬೈಲ್ ಪರಿಶೀಲನೆ ನಡೆಸಿ ಮಾಲತೇಶ್ ವಿರುದ್ಧ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು ಪೊಲೀಸರು ಶೋಧ ನಡೆಸಿ ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಪೊಲೀಸರು ಆರೋಪಿ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವು ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನ ಬಂಧಿಸಿ ಸದ್ಯ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ. ಆರೋಪಿ ಮಾಲತೇಶ್ ಗುತ್ತಿಗೆ ಆಧಾರದ ಮೇಲೆ ಸಂಜಯಗಾಂಧಿ ಅಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದು ಆರು ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ಎಂದು ಅಸ್ಪತ್ರೆ ಮೂಲಗಳು ತಿಳಿಸಿವೆ.
Published by:
MAshok Kumar
First published:
February 24, 2021, 7:29 AM IST