ಕಲಬುರ್ಗಿ (ಆ. 8): ಹಾಡಹಗಲೇ ಮೂರು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಯುವಕನೋರ್ವ ಮಗುವನ್ನು ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಅಪ್ಪನೇ ಮಗಳನ್ನು ರಕ್ಷಿಸಿದ್ದಾನೆ. ಕಲಬುರ್ಗಿ ನಗರದ ಜುಬೇರ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗುವನ್ನು ಆರೋಪಿ ಪುಸಲಾಯಿಸಿ ಹೊತ್ತೊಯ್ದಿದ್ದಾನೆ. ಒಂದು ಕಿಲೋಮೀಟರ್ ದೂರದವರೆಗೊ ಮಗುವನ್ನು ಹೊತ್ತೊಯ್ದಾಗ, ಈ ವಿಷಯ ಪೋಷಕರ ಗಮನಕ್ಕೆ ಬಂದಿದೆ. ಮಗುವನ್ನು ಯಾರೋ ಹೊತ್ತೊಯ್ಯುತ್ತಿದ್ದಾರೆ ಎಂಬುದನ್ನು ತಿಳಿದು ಬಾಲಕಿಯ ತಂದೆ ಅಪಹರಣಕಾರನ ಬೆನ್ನು ಹತ್ತಿದ್ದಾನೆ. ಆಟೋದಲ್ಲಿ ಬೆನ್ನು ಹತ್ತಿ ಆರೋಪಿಯನ್ನು ಹಿಡಿದು, ಮಗುವನ್ನು ರಕ್ಷಿಸಿದ್ದಾನೆ.
ಮೂರು ವರ್ಷದ ನೆಹೆರಾ ಬೇಗಂ ಅಪಹರಣಕಾರನಿಂದ ಬಚಾವಾದ ಬಾಲಕಿ. ಬಾಲಕಿಯ ತಂದೆ ಮಹ್ಮದ್ ಜಮೀರ್ ಎಂಬಾತ ಮಗಳ ರಕ್ಷಣೆ ಮಾಡಿದ್ದಾನೆ. ಮಹ್ಮದ್ ಜಮೀನ್ ಆಟೋ ಚಾಲಕನಾಗಿದ್ದಾನೆ. ಶಹಾಬಾದ್ ನ ಮಹ್ಮದ್ ಇಮ್ತಿಯಾಜ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರು ಗುಂಪು ಗುಂಪಾಗಿ ಜಮಾಯಿಸಿ, ಅಪಹರಣಕಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
![Kalburgi Man Saved his 3 Year old Daughter from Kidnapper]()
ಬಾಲಕಿಯನ್ನು ಕಿಡ್ನಾಪ್ ಮಾಡಿದ ಆರೋಪಿ
ಇದನ್ನೂ ಓದಿ: ಮಗಳ ಕೊಲೆ ಆರೋಪದಲ್ಲಿ ಜೈಲು ಸೇರಿದ ಅಪ್ಪ; ಪ್ರಿಯಕರನ ಜೊತೆ ಯುವತಿ ಪತ್ತೆ!
ಈ ವೇಳೆ ಸರಿಯಾದ ಮಾಹಿತಿ ನೀಡದ ಆರೋಪಿ, ಏನಾದರೂ ಕೇಳಿದರೆ ಟ್ಯಾಬ್ಲೆಟ್ ಗಳನ್ನು ತೋರಿಸಿದ್ದಾನೆ. ಕೆಲವೊಬ್ಬರ ಹೆಸರೋ ಹೇಳಿ ಯಾಮಾರಿಸಲು ಯತ್ನಿಸಿದ್ದಾನೆ. ಜೇಬಿನಲ್ಲಿರೋ ಟ್ಯಾಬ್ಲೆಟ್ ಗಮನಿಸಿದಾಗ, ಯುವಕ ಡ್ರಗ್ ವ್ಯಸನಿ ಇರಬಹುದೆಂದು ಶಂಕಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೋಲೀಸರು, ವಿಚಾರಣೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಆರ್.ಟಿ.ಐ. ಕಾರ್ಯಕರ್ತ ಸೇರಿ ಇಬ್ಬರ ವಿರುದ್ಧ ಪ್ರಕರಣ:
ಆರ್.ಟಿ.ಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಸೇರಿ ಇಬ್ಬರ ವಿರುದ್ದ ಕಲಬುರ್ಗಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ್ ಸಂಗಾ ದೂರಿನನ್ವಯ ಕೇಸ್ ದಾಖಲು ಮಾಡಲಾಗಿದೆ. ಕಲಬುರ್ಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋವಿಡ್ ಕರ್ತವ್ಯಕ್ಕೆ ಅಡ್ಡಿ, ಹಣಕ್ಕಾಗಿ ಬೇಡಿಕೆ, ಜೀವ ಬೇದರಿಕೆ ಆರೋಪ ಮಾಡಲಾಗಿದೆ. ಜುಲೈ 17 ರಂದು ಬಿಸಿಎಂ ಕಛೇರಿಗೆ ಬಂದು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಗಲಾಟೆ ಮಾಡಿ, ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಲು ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಐಪಿಸಿ ಸೇಕ್ಷನ್ 353, 384, 504, 506 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚಿಂಚೋಳಿ ವನ್ಯಜೀವಿ ಧಾಮಕ್ಕೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೂ ಈ ಹಿಂದೆ ಹಿರೇಮಠ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ