Crime News: ತುಮಕೂರಿನಲ್ಲಿ ಗಾಂಜಾ ನಶೆಯಲ್ಲಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಬಿತ್ತು ಮಚ್ಚಿನೇಟು

ನಿನ್ನೆ ರಾತ್ರಿ ಕೂಡ ತುಮಕೂರಿನಲ್ಲಿ  ಗಾಂಜಾ ಅಡಿಕ್ಟರ್ಸ್ ಒಬ್ಬ ಮಾಜಿ ಉಪಮೇಯರ್‌ ಮೇಲೇ ಮಚ್ಚು ಬೀಸಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತುಮಕೂರು : ಹಲವು ದಿನಗಳಿಂದ ತಣ್ಣಗಿದ್ದ ತುಮಕೂರು ಕ್ರೈಂ ಲೋಕ ಮತ್ತೆ ಮೇಲೇಳುತ್ತಿದೆ. ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಗಳು , ಡ್ರಗ್ ಕಿಂಗ್ ಪಿನ್​ಗಳು ಹೀಗೆ ಡ್ರಗ್ ಹಾಗೂ ಗಾಂಜಾ ಜಾಲದಲ್ಲಿ ಸಿಲುಕಿದ್ದ ಹಲವು ಜನರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ತುಮಕೂರಲ್ಲಿ ಗಾಂಜಾ ಮತ್ತಿನಲ್ಲಿ ಬೆಚ್ಚಿಬೀಳುವ ಕ್ರೈಂಗಳು ನಡೆಯುತ್ತಿವೆ. ಗಾಂಜಾ ನಶೆಯಲ್ಲಿರುವವರಿಗೆ ಮನೆಗೆ ಹೋಗಿ ಎಂದಿದ್ದಕ್ಕೆ ಕೊಲೆ ಮಾಡೋ ಯತ್ನಕ್ಕೆ ಗಾಂಜಾ ಗಿರಾಕಿಗಳು ಪ್ರಯತ್ನಿಸಿದ್ದಾರೆ. ನಿನ್ನೆ ರಾತ್ರಿ ಕೂಡ ತುಮಕೂರಿನಲ್ಲಿ  ಗಾಂಜಾ ಅಡಿಕ್ಟರ್ಸ್ ಒಬ್ಬ ಮಾಜಿ ಉಪಮೇಯರ್‌ ಮೇಲೇ ಮಚ್ಚು ಬೀಸಿದ್ದಾನೆ.

ವೆಂಕಟೇಶ್ ಎಂಬ ತುಮಕೂರು ನಗರದ ಮೆಳೇಕೋಟೆ ನಿವಾಸಿ. ಬೆಂಗಳೂರು ಪಾಲಿಕೆಯಲ್ಲಿ ಈ ಹಿಂದೆ ಉಪಮೇಯರ್‌ ಕೂಡ ಆಗಿದ್ದವರು. ನಿನ್ನೆ ರಾತ್ರಿ ಅದ್ಯಾವ ಗ್ರಹಚಾರ ಕೆಟ್ಟಿತ್ತೋ ಗೊತ್ತಿಲ್ಲ , ಆಗಂತುಕನೊಬ್ಬ ಕೊಲೆ ಮಾಡೋ ಉದ್ದೇಶದಿಂದ ಮಚ್ಚಿನಲ್ಲೇ ನೇರ ಅವರ ಕುತ್ತಿಗೆಗೇ ಬೀಸಿದ್ದಾನೆ. ಅದೃಷ್ಟವಶಾತ್ ಅವರು ಕೆಳಗೆ ಬಗ್ಗಿದ್ದರಿಂದ ಕುತ್ತಿಗೆಗೆ ಬೀಳುವ ಮಚ್ಚು ತಲೆಗೆ ಬಿದ್ದಿದ್ದು, ಐದು ಹೊಲಿಗೆಗಳನ್ನು ಹಾಕಲಾಗಿದೆ. ನಿನ್ನೆ ರಾತ್ರಿ ವೆಂಕಟೇಶ್ ಎಂದಿನಂತೆ ಊಟ ಮಾಡಿ ವಾಕ್ ಹೋಗಿದ್ದರು. ಅವರು ವಾಪಾಸ್ ಬರೋ ವೇಳೆಗೆ ಅವರ ಮನೆ ಎದುರಲ್ಲೇ ನಿಂತಿದ್ದ ಆಟೋ ಒಂದರಲ್ಲಿ ಸೈಯದ್ ಕಾಜಿ ಎಂಬ ಯುವಕನೊಬ್ಬ ಗಾಂಜಾ ನಶೆಯಲ್ಲಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನ ನೋಡುತ್ತಾ ಯಾರ ಬಳಿಯೋ ಮತ್ತೊಂದು ಫೋನ್​ನಲ್ಲಿ ಕೆಟ್ಟದಾಗಿ ಮಾತಾಡುತ್ತಿದ್ದ.

ಇದನ್ನೂ ಓದಿ: ಕೋಲಾರದಲ್ಲಿ ನವಜಾತ ಶಿಶುವನ್ನು ರಸ್ತೆ ಬದಿ ಬಿಸಾಡಿ ಹೋದ ಪಾಪಿ ಪೋಷಕರು

ಇದರಿಂದ ಬೇಸರಗೊಂಡ ವೆಂಕಟೇಶ್ 'ಏನಪ್ಪಾ ಇಲ್ಲಿರೋದೆಲ್ಲಾ ಮರ್ಯಾದಸ್ಥರು. ಹೀಗೆಲ್ಲಾ ಇಲ್ಲಿ ಮಾಡಬೇಡ, ಮೊದಲು ಮನೆಗೆ ಹೋಗು' ಎಂದು ಬೈದು ಕಳುಹಿಸಿದ್ದರು. ಇದಕ್ಕೆ ಕುಪಿತಗೊಂಡ ಸೈಯದ್ ಕಾಜಿ ನೇರ ಮನೆಗೆ ಹೋದವನೇ ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಬಂದು, ಮಾಂಸ ಕತ್ತರಿಸೋ ಕತ್ತಿಯಲ್ಲಿ ಏಕಾಏಕಿ ವೆಂಕಟೇಶ್ ಮೇಲೆ ದಾಳಿ ಮಾಡಿಯೇ ಬಿಟ್ಟಿದ್ದರು. ಅಂದಹಾಗೆ ಇದೇ ಮೆಳೇಕೋಟೆಯಲ್ಲಿ ಪ್ರತಿದಿನ ಪುಂಡುಪೋಕರಿಗಳ ಹಾವಳಿ ಜಾಸ್ತಿಯಾಗಿದೆ. ಮರ್ಯಾದಸ್ಥ ಹೆಣ್ಣುಮಕ್ಕಳು ಹಾಗೂ ಸುಸಂಸ್ಕೃತರು ಇಲ್ಲಿ ಓಡಾಡೋಕೆ ಭಯ ಪಡೋ ಸ್ಥಿತಿ ನಿರ್ಮಾಣವಾಗಿದೆ . ಎಲ್ಲಿಂದಲೋ ಗಾಂಜಾ ತಂದು ಇಲ್ಲಿ ಸೇವನೆ ಮಾಡಿ ಮೆಳೇಕೋಟೆಯ ಜನರಿಗೆ ಟಾರ್ಚರ್ ಕೊಡುತ್ತುದ್ದಾರೆ . ಕೇಳಲು ಹೋದವರ ಮೇಲೆಯೇ ಹೀಗೆ ಕೊಲೆ , ಕೊಲೆ ಯತ್ನ ನಡೆಯುತ್ತಿವೆ.

ಇನ್ನು ಮಾಜಿ ಉಪಮೇಯರ್ ಮೇಲೆ ಹೀಗೆ ಮಾರಣಾಂತಿಕ ಹಲ್ಲೆಯಾಗಿರೋದು ನಿಜಕ್ಕೂ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ತಮ್ಮ ಪಾಡಿಗೆ ತಾವಿದ್ರೂ ಹೀಗೆಲ್ಲಾ ಆಗ್ತಿದ್ಯಲ್ಲ ಅಂತ ಸಾರ್ವಜನಿಕರು ಆತಂಕದ ನಡುವೆಯೇ ಬದುಕೋ ಪರಿಸ್ಥಿತಿ ನಿರ್ಮಾಣವಾಗಿದೆ. ದೂರನ್ನು ದಾಖಲಿಸಿಕೊಂಡಿರೋ ತಿಲಕ್ ಪಾರ್ಕ್ ಪೋಲಿಸ್ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Published by:Sushma Chakre
First published: