ದೊಡ್ಡಬಳ್ಳಾಪುರ; ಅಕ್ಕನನ್ನು ಪ್ರೀತಿಸಿ, ಪರಾರಿಯಾಗಿದ್ದ ಗೆಳೆಯನ ಬರ್ಬರ ಹತ್ಯೆ ಮಾಡಿದ ತಮ್ಮ

Crime News: ಪ್ರಜ್ವಲ್​ನ ಗೆಳೆಯನೊಂದಿಗೆ ಆತನ ಅಕ್ಕನ ಪ್ರೀತಿ ಶುರುವಾಗಿತ್ತು. ಇವರಿಬ್ಬರ ಪ್ರೀತಿಗೆ ತಮ್ಮನ  ವಿರೋಧವಿತ್ತು. ಇದರಿಂದ ಪ್ರೇಮಿಗಳು ಮನೆಬಿಟ್ಟು ಪರಾರಿಯಾಗಿದ್ದರು. ಉಪಾಯವಾಗಿ ಗೆಳೆಯನನ್ನು ವಾಪಾಸ್ ಕರೆಸಿಕೊಂಡ ಪ್ರಜ್ವಲ್ ಆತನನ್ನು ಕೊಲೆ ಮಾಡಿದ್ದಾನೆ.

news18-kannada
Updated:October 16, 2020, 9:32 AM IST
ದೊಡ್ಡಬಳ್ಳಾಪುರ; ಅಕ್ಕನನ್ನು ಪ್ರೀತಿಸಿ, ಪರಾರಿಯಾಗಿದ್ದ ಗೆಳೆಯನ ಬರ್ಬರ ಹತ್ಯೆ ಮಾಡಿದ ತಮ್ಮ
ಸಾಂದರ್ಭಿಕ ಚಿತ್ರ
  • Share this:
ದೊಡ್ಡಬಳ್ಳಾಪುರ (ಅ. 16):  ಗೆಳೆಯ ಎಂದು ಮನೆಗೆ ಕರೆದುಕೊಂಡು ಬಂದರೆ ಆತ ಅಕ್ಕನ ಜೊತೆಯೇ ಪ್ರೇಮದಾಟ ನಡೆಸಿದ್ದ. ತನ್ನ ತಮ್ಮನ ಗೆಳೆಯನೊಂದಿಗೆ ಅಕ್ಕನ ಪ್ರೀತಿ  ಶುರುವಾಗಿತ್ತು. ಇವರಿಬ್ಬರ ಪ್ರೀತಿಗೆ ತಮ್ಮನ  ವಿರೋಧವಿತ್ತು. ಇದರಿಂದ  ಪ್ರೇಮಿಗಳು ಮನೆಬಿಟ್ಟು  ಪರಾರಿಯಾಗಿದ್ದರು. ಹುಟ್ಟುಹಬ್ಬಕ್ಕೆ ಕ್ಯಾಮೆರಾ  ಕೊಡಿಸುವಂತೆ  ಅಕ್ಕನ ಪ್ರಿಯಕರನನ್ನು ಕರೆಸಿಕೊಂಡ ತಮ್ಮ ಆತನನ್ನು ಅಪಹರಿಸಿ, ದೊಡ್ಡಬಳ್ಳಾಪುರದ ಹೊನ್ನಾಘಟ್ಟದ ಕೆರೆಯಲ್ಲಿ ಕೊಲೆಗೈದಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು  ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್  5ರಂದು ದೊಡ್ಡಬಳ್ಳಾಪುರ ತಾಲೂಕಿನ  ಹೊನ್ನಘಟ್ಟ  ಕೆರೆಯ ಅಂಗಳದಲ್ಲಿನ ಪೊದೆಯೊಳಗೆ  ಕೊಳೆತ  ಸ್ಥಿತಿಯಲ್ಲಿ ಯುವಕನ ಶವ ಸಿಕ್ಕಿದ್ದು,  ಯಾರೋ ದುಷ್ಕರ್ಮಿಗಳು ನಾಲ್ಕು  ದಿನಗಳ ಹಿಂದೆ ಕೊಲೆಗೈದು ಶವವನ್ನು ಎಸೆದು ಹೋಗಿದ್ದರು.

ಅಪರಿಚಿತ  ಶವದ ಪತ್ತೆಗಾಗಿ  ಪ್ರಕರಣ ದಾಖಲಿಕೊಂಡ ದೊಡ್ಡಬೆಳವಂಗಲ ಪೊಲೀಸರು ಶವದ ಪತ್ತೆಗಾಗಿ ತನಿಖೆ  ಆರಂಭಿಸಿದಾಗ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 2ರಂದು ಯುವಕನ ನಾಪತ್ತೆ  ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿತು. ಆ ಕುಟುಂಬದವರನ್ನು ವಿಚಾರಿಸಿದಾಗ ಶವವನ್ನು ಗುರುತಿಸಿದ್ದು, ಕೊಲೆಯಾದ ಯುವಕ 20 ವರ್ಷದ ಪಿ. ಚೇತನ್ ಎಂದು ಪತ್ತೆಯಾಗಿದೆ. ಸ್ನೇಹಿತನ  ಅಕ್ಕನ ಪ್ರೀತಿಯ ನಂತರ ಪರಾರಿಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದ.

ಇದನ್ನೂ ಓದಿ: ಬನ್ನಂಜೆ ರಾಜನ ಆಪ್ತ ಮನೀಶ್​ ಶೆಟ್ಟಿ ಶೂಟೌಟ್; ಹಂತಕರ ಪತ್ತೆಗೆ 9 ವಿಶೇಷ ತಂಡ ರಚನೆ

ಕೊಲೆಯಾದ  ಚೇತನ್ ಮತ್ತು ಆರೋಪಿಗಳಾದ ಪ್ರಜ್ವಲ್ ಅಲಿಯಾಸ್  ಗುಂಡ, ಮಿಥುನ್ ಮತ್ತು ನಿಖಿಲ್  ಸ್ನೇಹಿತರು.  ಪ್ರಜ್ವಲ್​ನ ಅಕ್ಕ ಕೊಲೆಯಾದ ಚೇತನ್ ನನ್ನು ಪ್ರೀತಿ ಮಾಡುತ್ತಿದ್ದಳು. ಅಕ್ಕನ ಪ್ರೀತಿಗೆ ವಿರೋಧಿಸಿದ್ದ ತಮ್ಮ ಪ್ರಜ್ವಲ್ ಗೆಳೆಯ ಚೇತನ್ ಗೆ ಹೊಡೆಯಬೇಕೆಂದು ಹೇಳಿಕೊಂಡಿದ್ದ. ಆದರೆ, ನಂತರ ಚೇತನ್  ಮತ್ತು ಪ್ರಜ್ವಲ್​ನ ಅಕ್ಕ ಮನೆ ಬಿಟ್ಟು  ಪರಾರಿಯಾಗಿದ್ದರು. ನಿಖಿಲ್  ಮತ್ತು ಚೇತನ್  ಅಪ್ತ ಸ್ನೇಹಿತರಾಗಿದ್ದು, ಚೇತನ್ ವಾಪಾಸ್ ಬರುವಂತೆ ಮಾಡಿದರೆ ಹಣ ಕೊಡುವುದಾಗಿ  ನಿಖಿಲ್​ಗೆ ಪ್ರಜ್ವಲ್ ಹೇಳಿದ್ದ. ಅದರಂತೆ ಚೇತನ್​ಗೆ ಫೋನ್ ಮಾಡಿದ ನಿಖಿಲ್ ಬರ್ತ್ ಡೇ  ಪಾರ್ಟಿ ಗೆ ಫೋಟೋ ಶೂಟ್ ಮಾಡಲು ಕ್ಯಾಮೆರಾ  ಕೊಡಿಸೆಂದು ಬೆಂಗಳೂರಿನ ನಾಗರಬಾವಿಯ ಬಿಬಿಎ ಕಾಂಪ್ಲೆಕ್ಸ್  ಬಳಿ ಕರೆಸಿಕೊಂಡಿದ್ದ.

ಅಲ್ಲಿಂದ  ಮಿಥುನ್ ಕಾರಿನಲ್ಲಿ ಚೇತನ್​ನನ್ನು ಕಿಡ್ನಾಪ್ ಮಾಡಿ, ದೊಡ್ಡಬಳ್ಳಾಪುರ  ತಾಲೂಕಿನ  ಹೊನ್ನಘಟ್ಟದ ಕೆರೆಯ ಬಳಿಗೆ ಕರೆದುಕೊಂಡು ಹೋಗಿದ್ದರು.  ನಂತರ ದೊಣ್ಣೆಗಳಿಂದ ಹೊಡೆದು ಬಟ್ಟೆಯಿಂದ  ಚೇತನ್  ಕುತ್ತಿಗೆ  ಬಿಗಿದು ಕೊಲೆ ಮಾಡಿದ್ದರು. ಶವವನ್ನು ಪೊದೆಯೊಳಗೆ ಎಸೆದು ಪರಾರಿಯಾಗಿದ್ದರು. ಕೊಲೆ ಮಾಡಿದ ಬಳಿಕ ಪರಾರಿಯಾಗಿರುವ ಪ್ರಜ್ವಲ್,  ಮಿಥುನ್,  ಗಣೇಶ,  ನಂದನ್, ಪವನ್, ಜೀಷಾನ್  ಪತ್ತೆಗಾಗಿ ಪೊಲೀಸ್ ತಂಡ ರಚಿಸಲಾಗಿದೆ.
Published by: Sushma Chakre
First published: October 16, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading