ಬೆಳ್ತಂಗಡಿ (ಆ. 24): ಉಂಡಾಡಿ ಗುಂಡನಂತೆ ತಿರುಗಾಡಿ, ಕುಡಿದು ಮನೆಗೆ ಬರುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ಅಪ್ಪನನ್ನು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ವಾಸು ಸಫಲ್ಯ (75) ಎಂದಿನಂತೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನಕ್ಕೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಮಗ ದಯಾನಂದ್ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದ. ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡ ವಾಸು ಸಫಲ್ಯ ಅವರನ್ನು ಪೋಲೀಸರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
75 ವರ್ಷದ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದ ವಾಸು ಸಫಲ್ಯ ಅವರ ಎರಡನೇ ಮಗನಾಗಿರುವ ದಯಾನಂದ್ ಯಾವುದೇ ಉದ್ಯೋಗ ಮಾಡದೆ ತಿರುಗಾಡಿಕೊಂಡು ಜೀವನ ನಡೆಸುತ್ತಿದ್ದ. ಅಲ್ಲದೆ, ಪ್ರತಿದಿನ ಕುಡಿದು ಮನೆಯಲ್ಲಿ ರಂಪಾಟವನ್ನೂ ಮಾಡುತ್ತಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ವಾಸು ಸಫಲ್ಯ ಆತನಿಗೆ ಪ್ರತಿನಿತ್ಯ ಬುದ್ಧಿವಾದವನ್ನು ಹೇಳುತ್ತಿದ್ದರು. ಯಾವುದಾದರೂ ಉದ್ಯೋಗಕ್ಕೆ ಸೇರಿ ಸುಧಾರಿಸಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ತಂದೆಯ ಬುದ್ಧಿವಾದ ಮಗ ದಯಾನಂದನಿಗೆ ಹಿಡಿಸುತ್ತಿರಲಿಲ್ಲ. ಇದೇ ವಿಚಾರವಾಗಿ ತಂದೆ- ಮಗನ ನಡುವೆ ಜಗಳವೂ ಆಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಂದು ಮುಂಜಾನೆ ವಾಸು ಸಫಲ್ಯ ವಾಕಿಂಗ್ಗೆ ತೆರಳುವ ಸಂದರ್ಭಕ್ಕೆ ಕಾದು ಕುಳಿತಿದ್ದ ಮಗ ದಯಾನಂದ್ ಮಾರಕಾಸ್ತ್ರದಿಂದ ತಂದೆಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಅಪ್ಪ ಚಡಪಡಿಸುವುದನ್ನು ನೋಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಆತ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ ಹಿನ್ನೆಲೆಯಲ್ಲಿ ಪೋಲೀಸರು ಇದೀಗ ಆರೋಪಿ ದಯಾನಂದನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೃತ್ಯಕ್ಕೆ ಬಳಸಿದ ತಲ್ವಾರನ್ನು ಆರೋಪಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಬೆಳ್ತಂಗಡಿ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದರಿಂದ ವಾಸು ಸಫಲ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ