• Home
  • »
  • News
  • »
  • state
  • »
  • 3 ಸಾವಿರ ರೂ.ಗೆ ಕಾಫಿನಾಡಿನಲ್ಲಿ ಎರಡು ಜೀವ ಬಲಿ; ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಆರೋಪಿ

3 ಸಾವಿರ ರೂ.ಗೆ ಕಾಫಿನಾಡಿನಲ್ಲಿ ಎರಡು ಜೀವ ಬಲಿ; ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಮೃತಪಟ್ಟ ಕೃಷ್ಣಪ್ಪ- ಬಸಪ್ಪ

ಮೃತಪಟ್ಟ ಕೃಷ್ಣಪ್ಪ- ಬಸಪ್ಪ

Chikmagalur Murder: ಚಿಕ್ಕಮಗಳೂರಿನ ಕೃಷ್ಣಪ್ಪ-ಬಸಪ್ಪ ಕುಟುಂಬಗಳು ಇತ್ತೀಚಿನವರೆಗೂ ಅನ್ಯೋನ್ಯವಾಗಿದ್ದರು. ಯಾರ ಮಧ್ಯೆಯೂ ದ್ವೇಷದ ಕಿಡಿಯಾಗಲಿ, ಗಲಾಟೆ-ಘರ್ಷಣೆಯಾಗಲಿ ಇರಲಿಲ್ಲ. ಆದರೆ, ಆರು ತಿಂಗಳ ಹಿಂದಿನಿಂದ ಶುರುವಾದ ಚಿಕ್ಕ ವೈಮನಸ್ಸು ಎರಡು ಕುಟುಂಬದ ಯಜಮಾನರನ್ನು ಬಲಿ ಪಡೆದಿದೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು : ಮೂರೇ ಮೂರು ಸಾವಿರ ದುಡ್ಡು, 10 ಬುಟ್ಟಿ ಮರಳು, 10 ಬುಟ್ಟಿ ಜಲ್ಲಿ, 100 ಹೆಂಚು, ಜೊತೆಗೆ ಬಾವಿ ನೀರು. ಇಷ್ಟಕ್ಕೆ ಹೋಗಿದ್ದು ಎರಡು ಜೀವ. ಒಬ್ಬನ ಜೀವ ಇನ್ನೊಬ್ಬನ ದ್ವೇಷಕ್ಕೆ ಹೋದರೆ, ದ್ವೇಷ ಕಾರಿದವನ ಜೀವ ತನ್ನ ಕೈಯಾರೆ ಹೋಗಿದೆ. ಇಂತದ್ದೊಂದು ಭಯಾನಕ ಘಟನೆ ನಡೆದಿರೋದು ಚಿಕ್ಕಮಗಳೂರಿನ ಗಂಧರ್ವಗಿರಿ ಗ್ರಾಮದಲ್ಲಿ. ಒಬ್ಬನ ಹೆಸರು ಕೃಷ್ಣಪ್ಪ. ಬಸಪ್ಪನ ನೀಚ ಕೃತ್ಯಕ್ಕೆ ತನ್ನ ಜೀವ ತೆತ್ತಿದ್ದಾನೆ. ಇನ್ನೊಬ್ಬನ ಹೆಸರು ಬಸಪ್ಪ. ಕೃಷ್ಣಪ್ಪನ ಉಸಿರು ನಿಲ್ಲಿಸಿದ್ದ ಈತ ಆತನ ಉಸಿರು ನಿಲ್ಲುವಷ್ಟರಲ್ಲಿ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಈ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ ಕೃಷ್ಣಪ್ಪ ಹಾಗೂ ಬಸಪ್ಪ ಎಂಬುವವರ ಕುಟುಂಬಗಳು ಇದ್ದವು. ಊರಲ್ಲಿ ಪ್ರೀತಿ-ವಿಶ್ವಾಸದಿಂದ ಇದ್ದರೆ ಮಾತ್ರ ಸಹಬಾಳ್ವೆಯ ಬದುಕು ಸಾಧ್ಯ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕೃಷ್ಣಪ್ಪ-ಬಸಪ್ಪ ಕುಟುಂಬಗಳು ಇತ್ತೀಚಿನವರೆಗೂ ಅನ್ಯೋನ್ಯವಾಗಿದ್ದರು. 2 ಕುಟುಂಬಗಳು ಮೂರ್ನಾಲ್ಕು ಎಕರೆ ಕಾಫಿ ತೋಟವಿರೋ ಮಧ್ಯಮ ವರ್ಗದ ಕುಟುಂಬಗಳು. ಯಾರ ಮಧ್ಯೆಯೂ ದ್ವೇಷದ ಕಿಡಿಯಾಗಲಿ, ಗಲಾಟೆ-ಘರ್ಷಣೆಯಾಗಲಿ ಇರಲಿಲ್ಲ. ಆದರೆ, ಆರು ತಿಂಗಳ ಹಿಂದಿನಿಂದ ಶುರುವಾದ ಚಿಕ್ಕ ವೈಮನಸ್ಸು ಇವತ್ತು ಎರಡು ಕುಟುಂಬದ  ಯಜಮಾನರನ್ನು ಬಲಿ ಪಡೆದಿದೆ.


ಇದನ್ನೂ ಓದಿ: Gujarat Fire Blast: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ


ಆರು ತಿಂಗಳ ಹಿಂದೆ ಬಸಪ್ಪ, ಕೃಷ್ಣಪ್ಪನಿಗೆ 3 ಸಾವಿರ ಸಾಲ ಕೊಟ್ಟಿದ್ದ. ಕೊಟ್ಟ ಸಾಲವನ್ನು ವಸೂಲಿ ಮಾಡದೆ ಬಿಡೋ ಜಾಯಮಾನ ಬಸಪ್ಪನದು ಆಗಿರಲಿಲ್ಲ. ಹಾಗಾಗಿ, ಕೃಷ್ಣಪ್ಪ ಸಾಲ ಕೊಡೋದು ತಡವಾಗಿದ್ದಕ್ಕೆ ಹತ್ತು ಬುಟ್ಟಿ ಮರಳು, ಹತ್ತು ಬುಟ್ಟಿ ಜಲ್ಲಿ 100 ಹೆಂಚುಗಳನ್ನ ಬಸಪ್ಪ ತೆಗೆದುಕೊಂಡು ಬಿಟ್ಟಿದ್ದ. ಆದರೂ ಈ ಬಸಪ್ಪನಿಗೆ ತೃಪ್ತಿ ಅನ್ನೋದೇ ಆಗಿರಲಿಲ್ಲ. ಸಾಲ ತೀರಿಲ್ಲ ಕೊಡು ಅಂತ ಖ್ಯಾತೆ ಮಾಡುತ್ತಲೇ ಇದ್ದ. ಜೊತೆಗೆ ಬಸಪ್ಪನ ಕಾಫಿ ತೋಟದಲ್ಲಿದ್ದ ಬಾವಿಗೆ ಕೃಷ್ಣಪ್ಪ ನೀರಿಗಾಗಿ ಬರುತ್ತಿದ್ದ. ನನ್ನ ಕಾಫಿ ತೋಟದೊಳಗೆ ಯಾಕೋ ಬರ್ತೀಯ? ಅಂತ ಬಸಪ್ಪ ಆಗಾಗ ಕೃಷ್ಣಪ್ಪನ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ. ಅಷ್ಟೇ ಅಲ್ಲದೆ, ಹಲವು ಬಾರಿ ಕತ್ತಿ ತೆಗೆದುಕೊಂಡು ಕಡೀತಿನಿ, ಕಡೀತಿನಿ ಅಂತ ಅಂತ ಕೃಷ್ಣಪ್ಪನ ಮನೆಗೆ ಹೋಗಿ ಹೆದರಿಸುತ್ತಿದ್ದ.


ಮದ್ಯ ವ್ಯಸನಿಯೂ ಆಗಿದ್ದ ಬಸಪ್ಪ ಮಂಗಳವಾರ ಕೃಷ್ಣಪ್ಪ ಪೂಜೆಗೆಂದು ಬಾವಿ ಬಳಿ ನೀರು ತೆಗೆದುಕೊಳ್ಳಲು ಬಂದಾಗ ಹಿಂದಿನಿಂದ ಬಂದು ಕುತ್ತಿಗೆಗೆ ಮಚ್ಚು ಬೀಸಿದ್ದಾನೆ. ಆ ಬಳಿಕ ಜನರೆಲ್ಲಾ ಸೇರಿದ ಮೇಲೆ ತಾನು ಮನೆಗೆ ಹೋಗಿ ವಿಷ ಸೇವಿಸಿ ಒದ್ದಾಡಿ-ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಟ್ಟಾರೆ, ಚಿಕ್ಕಮಗಳೂರಿಂದ ಮುತ್ತೋಡಿಯ ಕಾಡಂಚಿನ ಈ ಗ್ರಾಮಕ್ಕೆ ಮಲ್ಲಂದೂರು ಪೊಲೀಸರು ಹೋಗುವಷ್ಟರಲ್ಲಿ ಎಲ್ಲಾ ಮುಗಿದು ಹೋಗಿತ್ತು. ಪೊಲೀಸರು ಒಂದೇ ಗಾಡಿಯಲ್ಲಿ ಇಬ್ಬರ ಮೃತದೇಹವನ್ನು ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಸಪ್ಪ ತನ್ನ ಪ್ರಾಣವನ್ನು ಕಳೆದುಕೊಂಡ, ಇಂದಲ್ಲ ನಾಳೆ ಸರಿ ಹೋಗುತ್ತಾನೆಂದು ಸೈಲೆಂಟಾಗಿದ್ದ ಕೃಷ್ಣಪ್ಪನ ಪ್ರಾಣವನ್ನೂ ತೆಗೆದ. ಈಗ ಎರಡು ಕುಟುಂಬಗಳು ಯಜಮಾನನಿಲ್ಲದೆ ಕಂಗಾಲಾಗಿವೆ. ಕೃಷ್ಣಪ್ಪನ ಮಡದಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿರೋದು ಮಾತ್ರ ದುರಂತ.

Published by:Sushma Chakre
First published: