HOME » NEWS » State » CRIME NEWS 6 ACCUSED GOT LIFE TIME PRISON PUNISHMENT IN MURDER CASE AT KOLAR RRK LG

Crime News:16 ವರ್ಷದ ಹಿಂದಿನ ಜೋಡಿ ಕೊಲೆ ಪ್ರಕರಣ; 6 ಮಂದಿಗೆ ಜೀವಾವಧಿ ಶಿಕ್ಷೆ 

16 ವರ್ಷಗಳ ಸುದೀರ್ಘ ವಿಚಾರಣೆ ಅಂತ್ಯವಾಗಿದ್ದು, ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.  ಶಿಕ್ಷೆಗೆ ಗುರಿಯಾದರೂ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಿ ನ್ಯಾಯಾಂಗ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.

news18-kannada
Updated:April 17, 2021, 9:41 AM IST
Crime News:16 ವರ್ಷದ ಹಿಂದಿನ ಜೋಡಿ ಕೊಲೆ ಪ್ರಕರಣ; 6 ಮಂದಿಗೆ ಜೀವಾವಧಿ ಶಿಕ್ಷೆ 
ಸಾಂದರ್ಭಿಕ ಚಿತ್ರ
  • Share this:
ಕೋಲಾರ(ಏ.17): 16 ವರ್ಷಗಳ ಹಿಂದೆ ಒಂದೇ ಗ್ರಾಮದಲ್ಲಿ ನಡೆದಿದ್ದ  ಎರಡು ಕೊಲೆ ಕೇಸ್​​​ನಲ್ಲಿ ರಾಜ್ಯ ಬೀಜ ನಿಗಮ ನಿರ್ದೇಶಕ ಸೇರಿ,  ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋಲಾರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ತೀರ್ಪು ಪ್ರಕಟಿಸಿದೆ.  22 ಜುಲೈ 2006 ನೇ ವರ್ಷದಲ್ಲಿ,  ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಕೋಲಾರ ತಾಲೂಕಿನ ವಡಗೂರು ಗ್ರಾಮದಲ್ಲಿ  ಇಬ್ಬರ  ಕೊಲೆಯಾಗಿತ್ತು. ವಡಗೂರು ಗ್ರಾಮದ ಜಯರಾಂ ಎನ್ನುವರ ಮೇಲೆ ಸೋಮಶೇಖರ್ ಹಾಗೂ ಮತ್ತಿಬ್ಬರು ಲೈಸೆನ್ಸ್ ಇದ್ದ ಗನ್ ನಿಂದ ಶೂಟೌಟ್ ಮಾಡಿ ಕೊಲೆ  ಮಾಡಿದ್ದರು. ಬಳಿಕ ಜಯರಾಂ ಕಡೆಯವರು  ದೊಡ್ಡಪ್ಪಯ್ಯ ಎನ್ನುವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ  ಕೊಲೆ ಮಾಡಿದ್ದರು.

ದೊಡ್ಡಪ್ಪಯ್ಯ ಕೊಲೆ ಕೇಸ್ ನಲ್ಲಿ ಡಿಎಲ್.ನಾಗರಾಜು, ಗೋವಿಂದಪ್ಪ, ಮುನಿಬೈರಪ್ಪ, ರೆಡ್ಡಿ, ಸೋಮಶೇಖರ್ ಎನ್ನುವವರಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಜಯರಾಂ ರನ್ನ ಗುಂಡಿಕ್ಕಿ ಕೊಲೆ ಮಾಡಿದ ಕೇಸ್ ನಲ್ಲಿ ಸೋಮಶೇಖರ್ ಎನ್ನುವವರಿಗೆ ಶಿಕ್ಷೆಯಾಗಿದೆ. ಒಟ್ಟು 28 ಮಂದಿ ಆರೋಪಿಗಳ ವಿರುದ್ದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 28 ಮಂದಿಯಲ್ಲಿ 6 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಉಳಿದವರನ್ನ ಪ್ರಕರಣದಿಂದ ಖುಲಾಸೆಗೊಳಿಸಿದೆ. ರಾಜಕೀಯ ದ್ವೇಷದಿಂದಲೇ ಎರಡು ಗುಂಪಿನ ಮಧ್ಯೆ ಗಲಾಟೆ ಸಂಭವಿಸಿ ಕೊಲೆ ನಡೆದಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಇನ್ನು ಎರಡು ಕೊಲೆ ಪ್ರಕರಣದಲ್ಲಿ ಎರಡು ಗುಂಪಿನವರು ಸಂಧಾನಕ್ಕೆ ಯತ್ನಿಸಿದ್ದರು. ನ್ಯಾಯಾಲಯ ಅವರ ಮನವಿಯನ್ನ ತಿರಸ್ಕರಿಸಿದೆ. 16 ವರ್ಷಗಳಿಂದ ಸುದೀರ್ಘವಾದ ವಾದ  ಪ್ರತಿವಾದ ಆಲಿಸಿ ಇದೀಗ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.  ಡಿಎಲ್ ನಾಗರಾಜ್ ರಾಜಕೀಯವಾಗಿ ಪ್ರಭಾವಿ ಆದ್ದರಿಂದ ನ್ಯಾಯಾಲಯದ ಬಳಿ ರಾಜಕೀಯ ಪಕ್ಷಗಳ ಮುಖಂಡರು ಜಮಾಯಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರಡ್ಡಿ, ಮಾಜಿ ಶಾಸಕ ವರ್ತೂರು ಪ್ರಕಾಶ್, ವಡಗೂರು ಹರೀಶ್, ಕೆಲ ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ನೂರಾರು ಜನರು ನ್ಯಾಯಾಲಯ ಎದುರು ಜಮಾಯಿಸಿದ್ದರು.

ಕಿಮ್ಸ್ ಹಾಗೂ ಬಿಎಂಸಿಆರ್ ಐ ಸೇರಿ ಒಟ್ಟು 1,800 ಹಾಸಿಗೆಗಳು ಕೋವಿಡ್​​​ಗೆ ಲಭ್ಯ; ಸಚಿವ ಡಾ.ಕೆ.ಸುಧಾಕರ್

ಪ್ರಕರಣದಲ್ಲಿ ಮೃತ ಜಯರಾಂ ಪರವಾಗಿ ಸರ್ಕಾರಿ ಅಭಿಯೋಜಕ ಲಕ್ಷ್ಮೀ ನಾರಾಯಣ ಅವರು ಸಮರ್ಥ ವಾದ ಮಂಡನೆ ಮಾಡಿದ್ದಾರೆ. ಇನ್ನು  ಮೃತ ದೊಡ್ಡಪ್ಪಯ್ಯ ಅವರ ಪರವಾಗಿ ಸರ್ಕಾರಿ ಅಭಿಯೋಜಕ ಚಂದ್ರಪ್ಪ ಅವರು ಸಮರ್ಥವಾದ ವಾದವನ್ನು ಮಂಡನೆ ಮಾಡಿದ್ದಾರೆ.  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ನ್ಯಾಯಾಧೀಶರಾದ ಡಿ. ಪವನೇಶ್ ರವರು ಮಹತ್ವದ ತೀರ್ಪು ಪ್ರಕಟಸಿದ್ದು, ಆರೋಪಿಗಳಿಗೆ ಮುಂದಿನ ನ್ಯಾಯಾಂಗ ಹೋರಾಟಕ್ಕೂ ನ್ಯಾಯಾಧೀಶರು ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ ಎಂದು ಸರ್ಕಾರದ ಪರವಾದ ವಕೀಲರು ತಿಳಿಸಿದ್ದಾರೆ.

ಘಟನೆ ಹಿನ್ನಲೆ ಏನು ?

2006 ರ ಜುಲೈ 21 ರಂದು  ವಡಗೂರು ನಾಗರಾಜ್ ಹಾಗು  ದೊಡ್ಡಪ್ಪಯ್ಯ ಇಬ್ಬರ ಮಧ್ಯೆ ಗ್ರಾಮ ಪಂಚಾಯಿತಿ‌ ಅಧ್ಯಕ್ಷ್ಯ ಹಾಗು ಉಪಾಧ್ಯಕ್ಷ ಸ್ಥಾನದ ವಿಚಾರಚಾಗಿ ಮಾತಿನ ಚಕಮಕಿ ನಡೆದಿದೆ. ಮರುದಿನ ಇದೇ ಕೋಪದಲ್ಲಿ ವಡಗೂರು ನಾಗರಾಜ್ ಹಾಗೂ ಜಯರಾಂ ಎನ್ನುವರು ದೊಡ್ಡಪ್ಪಯ್ಯ ಮನೆ ಬಳಿಗೆ ಹೋದಾಗ, ಮತ್ತೊಮ್ಮೆ ಮಾತಿಗೆ ಮಾತು ಬೆಳೆದು, ಕೆರಳಿದ ದೊಡ್ಡ ಕಡೆಯ ಸೋಮಶೇಖರ್ ಎನ್ನುವರು ತಮ್ಮ ಮನೆಯಲ್ಲಿದ್ದ ಲೈಸೆನ್ಸ್ ಸಹಿತ ಗನ್ ನಿಂದ ಜಯರಾಂ ಅವರ ಮೇಲೆ ಮನೆ ಮೇಲಿಂದಲೇ ಗುಂಡು ಹಾರಿಸಿದ್ದಾರೆ.ತೀವ್ರವಾಗಿ ಗಾಯಗೊಂಡ ಜಯರಾಂರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಇದರಿಂದ ಕೆರಳಿದ ಜಯರಾಂ ಕಡೆಯವರು, ದೊಡ್ಡಪ್ಪಯ್ಯ ಅವರ ಮನೆಗೆ ಏಕಾಏಕಿ ನುಗ್ಗಿ ಮಾರಕಾಸ್ತ್ರಗಳಿಂದ‌ ಕೊಚ್ಚಿ ಕೊಲೆ ಮಾಡಿದ್ದರು. ಇದೇ ವಿಚಾರವಾಗಿ 28 ಜನರ ವಿರುದ್ದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಘಟನೆ ನಂತರ ಪೊಲೀಸರು ವಡಗೂರು ನಾಗರಾಜ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದರು.

ಘಟನೆ ನಂತರ ವಡಗೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆ, ಗ್ರಾಮದ ಹಿರಿಯರು ಸರಣಿ ನ್ಯಾಯ ಸಂಧಾನ ನಡೆಸಿ, ಪ್ರಕರಣವನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದರು. ಆದರೆ ಪ್ರಕರಣ ಗಂಭೀರತೆಯಿಂದ ನ್ಯಾಯಾಲಯ ಇದಕ್ಕೆ ಸಮ್ಮತಿಸಿಲ್ಲ ಎಂದು ತಿಳಿದುಬಂದಿದೆ.
Youtube Video

ಒಟ್ಟಿನಲ್ಲಿ 16 ವರ್ಷಗಳ ಸುದೀರ್ಘ ವಿಚಾರಣೆ ಅಂತ್ಯವಾಗಿದ್ದು, ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.  ಶಿಕ್ಷೆಗೆ ಗುರಿಯಾದರೂ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಿ ನ್ಯಾಯಾಂಗ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
Published by: Latha CG
First published: April 17, 2021, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories