ಪ್ರತಿ ದಿನ ಲಕ್ಷಾಂತರ ಮಂದಿ ಓಡಾಡುವ ರಸ್ತೆಯದು. ಅಷ್ಟೇ ಯಾಕೆ ಕರುನಾಡ ಹೆಮ್ಮೆ ವಿಧಾನಸೌಧ ನೆಲೆಸಿರುವ ಬೀದಿಯದು. ಹಸಿರ ಹೊತ್ತು ಮಲಗಿರುವ ಕಬ್ಬನ್ ಪಾರ್ಕ್ ಇರುವ ಜಾಗವದು. ಅಲ್ಲೊಬ್ಬಾಕೆ ಯಾರ ಗೋಜಿಗೂ ಇಲ್ಲದೆ ತನ್ನಿಷ್ಟಕ್ಕೆ ತಾನು ದುಡಿದು ಬದುಕು ಸಾಗಿಸುತ್ತಿದ್ದಾರೆ. ಕೆಂಡದಲ್ಲಿಟ್ಟ ಜೋಳದಂತೆ ಉರಿದುರಿದು ಜೀವನಕ್ಕಾಗಿ ಜೀವವನ್ನು ಸುಟ್ಟುಕೊಳ್ಳುತ್ತಿದ್ದಾರೆ. ವಯಸ್ಸು 75. ಆದರೆ ಜೀವನೋತ್ಸಾಹ 25ರದ್ದು. ಮುದುಡಿದ ಚರ್ಮ ಹೊತ್ತು ಬದುಕುತ್ತಿರುವ ಈ ವೃದ್ಧೆಯ ಹೆಸರು ಸೆಲ್ವಮ್ಮ. ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಲೋಕಾಯುಕ್ತ ಕಚೇರಿಯ ಮುಂಭಾಗದಲ್ಲಿ ಜೋಳ ಮಾರುವ ಸೆಲ್ವಮ್ಮನ ಬದುಕು ಸಾಗುತ್ತಿರುವುದು ಕೆಂಡದ ಮೇಲೆ ತನ್ನನ್ನು ತಾನು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜೋಳದಿಂದ. ಬೆಳಗ್ಗೆ 10ರ ಸುಮಾರಿಗೆ ತಳ್ಳುಗಾಡಿ ಹಿಡಿದು ಬಂದರೆ ಸಂಜೆಗತ್ತಲವರೆಗೆ ವ್ಯಾಪಾರ ಮಾಡುತ್ತಾರೆ. ಈಗ ಈ ಸೆಲ್ವಮ್ಮನ ಈ ಭಾನಾತ್ಮಕ ಬದುಕು ಎಲ್ಲರಿಗೂ ಪರಿಚಯವಾಗುವಂತೆ ಮಾಡಿದ್ದು ದಿಗ್ಗಜ ಕ್ರಿಕೆಟಿಗರೊಬ್ಬರಿಂದ. ಟೀಂ ಇಂಡಿಯಾದ ಮಾಜಿ ಆಟಗಾರ, ವಿಶ್ವ ಕ್ರಿಕೆಟ್ ನಲ್ಲಿ ಪಳಪಳನೆ ಹೊಳೆದ ದಿಗ್ಗಜರಲ್ಲೊಬ್ಬರಾದ ವಿವಿಎಸ್ ಲಕ್ಷ್ಮಣ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಸೆಲ್ವಮ್ಮನ ಜೀವನೋತ್ಸಾಹಕ್ಕೆ ಬಹುಪರಾಕ್ ಎಂದಿದ್ದಾರೆ. ಸೆಲ್ವಮ್ಮ ಜೋಳ ಮಾರಾಟ ಮಾಡುತ್ತಿರುವ ಪೋಟೋ ಲಗತ್ತಿಸಿ ಟ್ವೀಟ್ ಮಾಡಿದ ಲಕ್ಷ್ಮಣ್ ಈ ರೀತಿ ಹೇಳಿದ್ದಾರೆ,
Wonderful to see 75 year old Selvamma using high tech solar power fan to grill Bhutta on the rode side in Bangalore. The LED can run light and a regulated fan . Technology and innovation being embraced for a larger good is so pleasing to see. pic.twitter.com/KUktAm5lB8
— VVS Laxman (@VVSLaxman281) April 10, 2021
ಬೆಂಗಳೂರಿನ ಸ್ಲಂವೊಂದರ ನಿವಾಸಿಯಾಗಿರುವ ಸೆಲ್ವಮ್ಮನಿಗೆ ಹಿಂದಿಲ್ಲ.. ಮುಂದಿಲ್ಲ. ಬದುಕು ಕೊಟ್ಟ ಬವಣೆ, ಸಂಕಟಕ್ಕೆ ಹೀಗೆ ಯಾವುದಕ್ಕೂ ಬಗ್ಗದ ಈ ಮುದಿ ಜೀವ ಒಂಟಿಯಾಗಿ ಆಗಲೇ 30 ವರ್ಷಗಳಾದವು. ಹೆತ್ತ ಮಕ್ಕಳು ಜೊತೆಗಿಲ್ಲ, ಕಟ್ಟಿಕೊಂಡ ಸಂಗಾತಿಯಿಲ್ಲ. ಸೆಲ್ವಮ್ಮ ಒಂಟಿ ಜೀವ. ಪರಮಾತ್ಮನೇ ಸೆಲ್ವಮ್ಮನ ಜೊತೆಗಾರ. ವಿವಿಎಸ್ ಲಕ್ಷ್ಮಣ್ ಟ್ವೀಟ್ ಕಾರಣಕ್ಕೆ ಸೆಲ್ವಮ್ಮ ಈಗ ವೈರಲ್ ಆಗಿ ಹೋಗಿದ್ದಾರೆ. ಗ್ರಾಹಕರು ಕೊಡುವ 30-50 ರೂಪಾಯಿ ಮುಷ್ಠಿ ಹಿಡಿದು ಉಟ್ಟ ಸೀರೆಯ ತುದಿಗೆ ಕಟ್ಟುವ ಸೆಲ್ವಮ್ಮ ಸದಾ ಹಸನ್ಮುಖಿ.
ವರದಿ- ಆಶಿಕ್ ಮುಲ್ಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ