ಚಿಕ್ಕಮಗಳೂರು (ಏ. 24): ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬಕ್ಕೂ ಕೊರೋನಾ ಕರ್ಮೋಡ ಆವರಿಸಿದೆ. ಕೊರೋನಾ ಸೋಂಕಿಗೆ ವೇದಾ ಕೃಷ್ಣಮೂರ್ತಿ ತಾಯಿ ಬಲಿಯಾಗಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ ವೇದಾ ತಾಯಿ ಚೆಲುವಾಂಬ (63) ಕಡೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಸೋಂಕು ತಗುಲಿದ ಚೆಲುವಾಂಬರಿಗೆ ಉಸಿರಾಟದ ಸಮಸ್ಯೆ ಹೆಚ್ಚಾದ ಹಿನ್ನಲೆ ಕಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಡುವೆಯೂ ಸೋಂಕು ಉಲ್ಬಣಗೊಂಡಿದ್ದು, ಅವರು ಕಣ್ಮುಚ್ಚಿದ್ದಾರೆ. ಇದರ ನಡುವೆ ವೇದಾರ ತಂದೆ ಕೃಷ್ಣಮೂರ್ತಿ, ಅಣ್ಣ-ಅತ್ತಿಗೆ, ಅಕ್ಕನಿಗೂ ಕೊರೋನಾ ಸೋಂಕು ತಗುಲಿದೆ. ಸದ್ಯ ವೇದಾ ಹೊರತು ಪಡಿಸಿ ಮನೆಯ ಎಲ್ಲಾ ಸದಸ್ಯರನ್ನು ಕಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ವೇದಾ ಅವರ ಇಡೀ ಕುಟುಂಬಕ್ಕೆ ಬೆಂಗಳೂರಿನಲ್ಲೇ ಸೋಂಕು ತಗುಲಿದೆ. ಸೋಂಕು ತಗುಲಿದ ಮೇಲೆ ಕುಟುಂಬದ ಸದಸ್ಯರು ಸ್ವಂತ ಊರಾದ ಕಡೂರಿಗೆ ಬಂದಿದ್ದರು. ಈ ವೇಳೆ ಅವರು ಹೋಂ ಐಸೋಲೇಶನಲ್ಲಿದ್ದರು. ಹೋಂ ಐಸೋಲೇಷನ್ನಲ್ಲಿದ್ದಾಗ ಉಸಿರಾಟದ ತೊಂದರೆ ಹೆಚ್ಚಾಗಿ ಎಲ್ಲರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ತಾಯಿಗೆ ಗಂಭೀರ ಸ್ಥಿತಿಗೆ ಒಳಗಾಗಿದ್ದು, ಅವರಿಗೆ toclizumab ಎಂಬ ಔಷಧಿ ಬೇಕಾಗಿದೆ ಎಂದು ವೇದಾ ಟ್ವೀಟ್ ಮೂಲಕ ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರಿಗೂ ಮನವಿ ಮಾಡಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವೇದಾರ ತಾಯಿ ಚೆಲುವಾಂಬ ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕಡೂರಿನ ವೇದಾ ಕೃಷ್ಣಮೂರ್ತಿ ತೋಟದಲ್ಲೇ ಚೆಲುವಾಂಬರ ಅಂತ್ಯಕ್ರಿಯೆಯನ್ನ ಆರೋಗ್ಯ ಇಲಾಖೆ ನೆರವೇರಿಸಿದ್ದಾರೆ.
ಇನ್ನು ಕುಟುಂಬದ ಸದಸ್ಯರಿಗೂ ಸೋಂಕು ತಗುಲಿರುವುದರಿಂದ ಚೆಲುವಾಂಬರ ಅಂತ್ಯಕ್ರಿಯೆ ವೇಳೆ ಯಾರೂ ಕೂಡ ಭಾಗವಹಿಸಲು ಸಾಧ್ಯವಾಗಿಲ್ಲ. ಸದ್ಯ ಮಹಿಳಾ ಕ್ರಿಕೆಟರ್ ವೇದಾ ಬೆಂಗಳೂರಿನಲ್ಲಿ ಇರುವುದರಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ತಾಯಿಯನ್ನು ಕಳೆದುಕೊಂಡು ಅಂತ್ಯಕ್ರಿಯೆಯಲ್ಲೂ ಬರಲು ಸಾಧ್ಯವಾಗದ್ದಕ್ಕೆ ವೇದಾ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ. ಇನ್ನೂ ಇಡೀ ಕುಟುಂಬ ಕೂಡ ಕೊರೊನಾ ಸೋಂಕಿಗೆ ತಗುಲಿರುವುದರಿಂದ ವೇದಾರನ್ನ ಮತ್ತಷ್ಟು ಕಂಗಲಾಗುವಂತೆ ಮಾಡಿದೆ.
ಸ್ವಲ್ಪ ಎಚ್ಚರ ತಪ್ಪಿದರೂ ಕೊರೋನಾ ಮಹಾಮಾರಿ ಹೇಗೆ ಜೀವನ ಹಾಳು ಮಾಡುತ್ತಿದೆ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಆರ್ಥಿಕವಾಗಿ ವೇದಾ ಕುಟುಂಬ ಸದೃಡವಾಗಿದ್ದರೂ ತನ್ನ ತಾಯಿಯನ್ನ ಉಳಿಸಿಕೊಳ್ಳಲಾಗದ ದುಸ್ಥಿತಿ ವೇದಾರದ್ದು. ಸೋಂಕಿನಿಂದ ಏನು ಆಗಲ್ಲ ಎಂದು ಬೇಕಾಬಿಟ್ಟಿ ಓಡಾಡುವವರು ಇನ್ನಾದರೂ ಎಚ್ಚೆತ್ತುಕೊಂಡು ಸಾಮಾಜಿಕ ಜಾಗೃತಿ ಮೆರೆಯಬೇಕಾಗಿರುವುದು ಅವಶ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ