ಕಲಬುರ್ಗಿ(ಫೆ. 13): ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಹೆಸರು ತೆಗೆದುಕೊಳ್ಳದಿದ್ದರೆ ಉಂಡ ಅನ್ನ ಕರಗುವುದಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಅಣತಿಯಂತೆ ದೆಹಲಿ ಪೊಲೀಸರು ನಡೆದಿದ್ದಾರೆ. ದಿಲ್ಲಿ ಪೊಲೀಸರನ್ನ ಬಿಜೆಪಿ ಪೊಲೀಸರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕಮ್ಯೂನಿಸ್ಟ್ ನಾಯಕಿ ಬೃಂದಾ ಕಾರಟ್ ಆರೋಪಿಸಿದರು.
ಕಲಬುರ್ಗಿಯಲ್ಲಿ ಆಯೋಜಿಸಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಒಬ್ಬ ಮಂತ್ರಿ ಗೋಲಿ ಮಾರೋ ಸಾಲಂಕೊ ಅಂತಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಾಹಿನ್ ಭಾಗ್ ನಲ್ಲಿ ಕುಳಿತವರನ್ನು ಒಂದು ಗಂಟೆಯಲ್ಲಿ ಖಾಲಿ ಮಾಡ್ತೇವೆ ಅಂತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಪದೇ ಪದೇ ಪಾಕಿಸ್ತಾನದ ಹೆಸರು ತೆಗೆದು ಜನರನ್ನು ಮರಳು ಮಾಡಲು ನೋಡುತ್ತಾರೆ. ಆದರೆ ಜನ ಮರುಳಾಗುವುದಿಲ್ಲ ಎನ್ನುವುದನ್ನು ದೆಹಲಿ ವಿಧಾನಸಭೆ ಚುನಾವಣೆ ಸಾಬೀತು ಮಾಡಿ ತೋರಿಸಿದೆ ಎಂದರು.
ದೆಹಲಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕೆಟ್ಟ ಭಾಷೆ ಬಳಕೆ ಮಾಡಿತು. ದೇಶದ ಬಡವರ ಬಗ್ಗೆ ಒಂದೂ ಮಾತನಾಡಿಲ್ಲ. ಶಾಹೀನ್ ಬಾಗ್, ಪಾಕಿಸ್ತಾನ ಎರಡೇ ಶಬ್ದ ಉಪಯೋಗಿಸಿದ್ದಾರೆ. ಬಿಜೆಪಿ ಪಾರ್ಟಿ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿದೆ. ಚುನಾವಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ಕೆಟ್ಟ ಶಬ್ದ ಬಳಸಿದರೂ ಬಿಜೆಪಿ ನಾಯಕರಿಗೆ ನೋಟಿಸ್ ನೀಡಿಲ್ಲ. ಮಾನವ ಹಕ್ಕುಗಳ ಆಯೋಗವು ಇದರ ಬಗ್ಗೆ ಮಾತನಾಡಿಲ್ಲ. ಯಾವುದೇ ಕಾರಣಕ್ಕೂ ಪೌರತ್ವ ಮಸೂದೆ ಜಾರಿಗೆ ಅವಕಾಶ ಮಾಡಿಕೊಡಬಾರದೆಂದು ಸಿಪಿಐಎಂನ ರಾಜ್ಯಸಭಾ ಸದಸ್ಯೆ ಕರೆ ನೀಡಿದರು.
ಇದನ್ನೂ ಓದಿ : ಎಲ್ಪಿಜಿ ಬೆಲೆ ಹೆಚ್ಚಳ: ಸ್ಮೃತಿ ಇರಾನಿ ಪ್ರತಿಭಟಿಸುತ್ತಿರುವ ಹಳೆಯ ಫೋಟೋ ಹಾಕಿ ರಾಹುಲ್ ವ್ಯಂಗ್ಯ
ಸಂಸತ್ತಿನಲ್ಲಿ ಬಹುಮತ ಇದೆಯೆಂದು ಸಿಎಎ ಜಾರಿಗೆ ತಂದು ಮೋದಿ ಸರ್ಕಾರ ದೇಶದಲ್ಲಿ ಜಗಳ ಹಚ್ಚುತ್ತಿದೆ. ಸಿಎಎ ಹೊರಗಿನವರಿಗಿದೆ ಅಂತಾ ಹೇಳುತ್ತಾರೆ. ದೇಶದ ಒಳಗಡೆ ಎಷ್ಟು ಜನ ಅಕ್ರಮವಾಗಿ ಬಂದಿದ್ದಾರೆ ಅಂತ ಕೇಳಿದ್ರೆ ಗೊತ್ತಿಲ್ಲ ಅಂತಾರೆ. ಎಷ್ಟು ಜನ ಹೊರಗಿನವರು ಬಂದಿದ್ದಾರೆ ಅಂತಲೂ ಗೊತ್ತಿಲ್ಲ. ದೇಶದ 120 ಕೋಟಿ ಜನರಿಗೆ ದಾಖಲಾತಿ ತೋರಿಸಿ ಅಂತಾ ಹೇಳುತ್ತಾರೆ. ಮೊದಲು ಸಿಎಎ, ಎನ್ ಆರ್ ಸಿ ದೇಶದ ಎಲ್ಲೆಡೆ ಜಾರಿಯಾಗುತ್ತೆ ಅಂದ್ರು. ದೇಶದ ಜನ ಕೇಳಲು ಪ್ರಾರಂಭ ಮಾಡಿದಾಗ ಇದು ಕೇವಲ ಅಸ್ಸಾಂಗೆ ಸೀಮಿತ ಎಂದು ಕೈಝಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಾರ ಮೇಲೆ ವಿಶ್ವಾಸ ಮಾಡದೇ ನಾವು ಹೋರಾಟ ಮಾಡಬೇಕಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರೆತಿದೆ. ದೇಶದ ಸಂವಿಧಾನಕ್ಕೆ ದಕ್ಕೆ ಬಂದಾಗ ಎಲ್ಲರೂ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಯಡಿಯೂರಪ್ಪ ನಾಟಕವಾಡುತ್ತಿದಾರೆ :
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೊಡ್ಡ ನಾಟಕ ಮಾಡುತ್ತಿದ್ದಾರೆ ಎಂದು ಬೃಂದಾ ಕಾರಟ್ ಕಿಡಿಕಾರಿದರು. ಪೌರತ್ವ ವಿರೋಧಿ ನಾಟಕ ಮಾಡಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯ ತಾಯಿ ಮತ್ತು ಶಿಕ್ಷಕಿಯನ್ನು ಜೈಲಿಗೆ ಹಾಕಿದ್ದಾರೆ. ಬೀದರ್ನ ಶಾಲೆಯ ವಿರುದ್ಧ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮಂಗಳೂರಿನ ಗೋಲಿಬಾರ್ ಪ್ರಕರಣದಲ್ಲಿಯೂ ಯಡಿಯೂರಪ್ಪ ಸರ್ಕಾರ ನಾಟಕವಾಡಿದೆ. ಕೂಡಲೇ ವಿದ್ಯಾರ್ಥಿನಿಯ ತಾಯಿ ಮತ್ತು ಶಿಕ್ಷಕಿಯನ್ನು ಬಿಡುಗಡೆ ಮಾಡುವಂತೆ ಬೃಂದಾ ಕಾರಟ್ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ