ಬೆಂಗಳೂರು (ನ.28): ಯಾವುದೇ ಕಾಂಟ್ರವರ್ಸಿ ನನಗಿಷ್ಟ ಇಲ್ಲ. ನನ್ನಮಂತ್ರಿ ಮಾಡುವ ವಿಚಾರ ಸಿಎಂಗೆ ಬಿಟ್ಟದ್ದು. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ. ಸಚಿವಸ್ಥಾನಕ್ಕಾಗಿ ಅವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ನಾನು ಸಚಿವ ಸ್ಥಾನ ಬೇಕು ಎಂದು ಎಲ್ಲೂ ಹೇಳಿಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು, ವರಿಷ್ಠರು ಮನಸು ಮಾಡಿ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಎಂದು ಸಚಿವಗಿರಿ ಆಸೆಯನ್ನು ಪರೋಕ್ಷವಾಗಿ ತಿಳಿಸಿದರು. ನಾನು ಸೋತವನು ಅಂತ ಹೇಳುತ್ತಿದ್ದಾರೆ. ನಮ್ಮ ಶಾಸಕರೂ ಕೂಡ ಈ ರೀತಿ ಹೇಳಿಕೆ ನೀಡುತ್ತಾರೆ. ಯಾಕೋ ಗೊತ್ತಿಲ್ಲ, ವಿವಾದ ನನ್ನ ಹಿಂದೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಚನ್ನಪಟ್ಟಣಕ್ಕೆ ನಾನೇ ಸಿಎಂ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆ ಮೂಲಕ ಅವರು, ಚನ್ನಪಟ್ಟಣಕಷ್ಟೇ ಸೀಮಿತರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಹೋದ ಮೇಲೆ ಕುಮಾರಸ್ವಾಮಿಗೆ ತಳಮಳ ಆಗಿದೆ. ಅವರು ಬಹಳ ಹತಾಶರಾಗಿ ಮಾತಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಈಗ ರಾಜಕೀಯವಾಗಿ ಕಷ್ಟ ಇದೆ. ಅವರು ಬಹಳ ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ಮಾಡುತ್ತಲೇ ಇದ್ದಾರೆ. ಡಿಕೆ ಶಿವಕುಮಾರ್ ಕೂಡ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಅವರಿಬ್ಬರೂ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರಿಬ್ರೂ ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.
ಇದನ್ನು ಓದಿ: ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ: ಯೋಗೇಶ್ವರ್ ಗೆ ತಿರುಗೇಟು ನೀಡಿದ ಹೆಚ್ ಡಿ ಕುಮಾರಸ್ವಾಮಿ
ಇದೇ ವೇಳೆ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷವಿಲ್ಲ. ಅವರು ಇವತ್ತು ಊರಿಗೆ ಹೊರಟಿದ್ದರು, ಊಟ ಮಾಡಿದ್ವಿ, ಮಾತಾಡಿದ್ವಿ, ಶಾಸಕರು ತಮ್ಮ ಅಭಿಪ್ರಾಯ ಹೇಳಿ ಕೊಂಡರು ಅಷ್ಟೇ ಎಂದರು.
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಗಾಳಿಯಲ್ಲಿ ಪಟಾಕಿ ಹೊಡೆಯುವ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು, ಅನುಭವಿಗಳು. ಅವರು ನಗೆಪಾಟಲಿನಂಥ ಹೇಳಿಕೆ ಕೊಡೋದು ಯಾಕೆ ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ