ಕುತೂಹಲ ಮೂಡಿಸಿದ ಯತ್ನಾಳ್​-ಸಿಪಿವೈ ಭೇಟಿ; ಇನ್ನೂ ಮುಗಿದಿಲ್ವಾ ನಾಯಕತ್ವ ಬದಲಾವಣೆ ವಿಚಾರ

ವಿಜಯಪುರದ ಭೂತನಾಳ‌ ಕೆರೆಯ ಬಳಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಸಿಪಿ ಯೋಗೇಶ್ವರ್​ ಅವರು ಯತ್ನಾಳ್​ ಭೇಟಿಯಾಗಿದ್ದಾರೆ.

ಸಿಪಿ ಯೋಗೇಶ್ವರ್​, ಬಸನಗೌಡ ಪಾಟೀಲ ಯತ್ನಾಳ್

ಸಿಪಿ ಯೋಗೇಶ್ವರ್​, ಬಸನಗೌಡ ಪಾಟೀಲ ಯತ್ನಾಳ್

 • Share this:
  ವಿಜಯಪುರ (ಜೂ. 29): ನಾಯಕತ್ವದ ಬದಲಾವಣೆಗೆ ಹೈಕಮಾಂಡ್​ ಕದ ತಟ್ಟಿದ್ದ ಸಿಪಿ ಯೋಗೇಶ್ವರ್​ ದೆಹಲಿ ಭೇಟಿ ಬಳಿಕ  ವಿಜಯಪುರ ‌ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಸಚಿವ ಸಿಪಿ ಯೋಗೇಶ್ವರ ಶಾಸಕ ಯತ್ನಾಳ ಅವರಿಗೆ ನೇರವಾಗಿಯೇ ಬೆಂಬಲ‌ ವ್ಯಕ್ತಪಡಿಸಿದ್ದು,  ಮುಂದಿನ ದಿನಗಳಲ್ಲಿ ಯತ್ನಾಳ ಅವರಿಗೆ ಉತ್ತಮ ಸ್ಥಾನಮಾನ ಸಿಗಲಿದ್ದು, ನಾನು ಅವರಿಗೆ ನೈತಿಕವಾಗಿ ಬೆಂಬಲ ನೀಡುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಮನಸೆಳೆದಿದ್ದಾರೆ.  ಈ ಮ‌ೂಲಕ ಸಿಎಂ‌ ವಿರುದ್ಧದ ಆಂತರಿಕ ಹೋರಾಟ ಮತ್ತಷ್ಟು ಬಲ ಪಡೆದಂತಾಗಿದೆ.

  ಇಂದು ವಿಜಯಪುರದ ಭೂತನಾಳ‌ ಕೆರೆಯ ಬಳಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಸಿಪಿ ಯೋಗೇಶ್ವರ್​ ಅವರು ಯತ್ನಾಳ್​ ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಯತ್ನಾಳ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ‌ಸಿಗಲಿದೆ. ಅದಕ್ಕಾಗಿ ನಾನು ಅವರ ಬೆಂಬಲಕ್ಕೆ ‌ನಿಲುತ್ತೇನೆ ಎಂದು ನೇರವಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದರು. ಈ ಮೂಲಕ ಸಿಎಂ ಬದಲಾವಣೆ ವಿಚಾರ ಇನ್ನು ಮುಗಿದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದರು.

  ಸಚಿವ ಸಿಪಿ ಯೋಗೇಶ್ವರ ಸಿಎಂ ವಿರುದ್ಧದ ಹೋರಾಟದಲ್ಲಿ ಯತ್ನಾಳ ಅವರ‌ ಬೆಂಬಲ ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ವಿಜಯಪುರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವರಾದ ಬಳಿಕ ಒಮ್ಮೆಯೂ ಉತ್ತರ ‌ಕರ್ನಾಟಕದ‌ ಕಡೆ ಪ್ರವಾಸ ಮಾಡದ ಸಿಪಿ ಯೋಗೇಶ್ವರ ‌ಇದೀಗ ಏಕಾಏಕಿ ಪ್ರವಾಸೋದ್ಯಮ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಂಡ ಸಿಎ‌ಂ ವಿರೋಧಿ ಬಣದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಯತ್ನಾಳ್ ಜೊತೆ ಸಿಪಿ ಯೋಗೇಶ್ವರ ಕೈ ಜೋಡಿಸಿರೋದು ಬಿಜೆಪಿಯಲ್ಲಿ ಕುತೂಹಲ ಮೂಡಿದೆ.

  ಇದನ್ನು ಓದಿ: ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಾವಿರ ಚಿಣ್ಣರಿಗೆ ಸೋಂಕು; ಪೋಷಕರಲ್ಲಿ ಹೆಚ್ಚುತ್ತಿದೆ ಆತಂಕ

  ಸಿಎಂ ಯಡಿಯೂರಪ್ಪ ವಿರುದ್ಧ ಸದಾ ವಾಗ್ದಾಳಿ ನಡೆಸುವ ಮೂಲಕ ಯತ್ನಾಳ್, ಮುಖ್ಯಮಂತ್ರಿ ಬದಲಾವಣೆಗೆ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಬಿಜೆಪಿ ಶಿಸ್ತು ಸಮಿತಿ ಅವರಿಗೆ ನೋಟಿಸ್​ ನೀಡಿದೆ ಆದರೂ, ಈ ಬಗ್ಗೆ ಶಾಸಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.  ಇದೀಗ ಅವರ ಜೊತೆ ಸಿಪಿ ಯೋಗೇಶ್ವರ ಕೈ ಜೋಡಿಸಿರುವುದು ಅವರ ಹೋರಾಟಕ್ಕೆ ಬಲ ಸಿಕ್ಕಂತಾಗಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ವಿಜಯಪುರ ವಿಮಾನ ನಿಲ್ದಾಣ ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ಯತ್ನಾಳ ಹೇಳಿಕೆಗೆ ಸಚಿವ ಸಿಪಿ ಯೋಗೇಶ್ವರ ಸಮ್ಮತಿ ಸೂಚಿಸುವ ಮೂಲಕ ಮುಂದೆ ಅಧಿಕಾರ ನಮ್ಮ ಕೈಗೆ ಬರಲಿದೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದರು. ಇದೇ  ವೇಳೆ ಅವರು ಸಚಿವ ಉಮೇಶ ಕತ್ತಿ‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

  ಇನ್ನು ಸಚಿವ ಸಿಪಿ ಯೋಗೇಶ್ವರ ವಿಜಯಪುರ ಜಿಲ್ಲಾ ಪ್ರವಾಸ ಜಿಲ್ಲೆಯ ಬಿಜೆಪಿ ನಾಯಕರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು. ಸಾಮಾನ್ಯವಾಗಿ ವಿಜಯಪುರಕ್ಕೆ ಯಾರೇ ಸಚಿವರು ಬಂದರೂ ಅವರೊಂದಿಗೆ ಬಿಜೆಪಿ ಮುಖಂಡರು ಹಾಜರಿರುತ್ತಿದ್ದರು. ಆದರೆ ಇಂದು ಯೋಗೇಶ್ವರ ಅವರ ಜೊತೆ ಯಾವುದೇ ನಾಯಕರು ಕಾಣಿಸಲಿಲ್ಲ. ಸಿಎಂ ಯಡಿಯೂರಪ್ಪ ಅವರ ಭಯದಿಂದ ಹಲವು ನಾಯಕರು ಸಿಪಿ‌ ಯೋಗೇಶ್ವರ ಅವರಿಂದ ಅಂತರ ಕಾಯ್ದುಕೊಂಡರು. ವಿಜಯಪುರ ‌ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಬಿಜೆಪಿ ‌ಮಹಿಳಾ ನಾಯಕಿಯರನ್ನ ಹೊರತು ಪಡಿಸಿದರೆ, ಉಳಿದ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಯತ್ನಾಳ್ ಬೆಂಬಲಿಗ ಬಿಜೆಪಿ ಸದಸ್ಯರು ಮಾತ್ರ ಉಪಸ್ಥಿತಿದ್ದರು.

  (ವರದಿ: ಗುರುರಾಜ್ ಗದ್ದನಕೇರಿ)
  Published by:Seema R
  First published: