ಕೊಡಗಿನ ಪ್ರವಾಸಿ ತಾಣಗಳ ಭೇಟಿಗೆ‌ ಕೋವಿಡ್ ಟೆಸ್ಟ್ ಕಡ್ಡಾಯ..!

ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡುವುದು ಒಳ್ಳೆಯದು. ಸೆಕ್ಷನ್ ಜಾರಿ ಮಾಡುವುದರಿಂದ ಜನರು ಗುಂಪುಗೂಡದಂತೆ ತಡೆಯಲು ಸಾಧ್ಯವಿದೆ. ಅಲ್ಲದೆ ಜನರಿಗೆ ಒಂದಷ್ಟು ಅರಿವು ಮೂಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಡಿಕೇರಿ (ಅ.6): ಲಾಕ್ ಡೌನ್ ಸಂಧರ್ಭದಲ್ಲಿ ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಕೊರೋನಾ ಮಿತಿ ಮೀರಿದೆ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳಾಗಿದ್ದು, ಪ್ರವಾಸಿ ತಾಣಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹೇಳಿದ್ದಾರೆ. ಮಡಿಕೇರಿಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಭಾಗವಹಿಸಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಇರುವ ಪ್ರತೀ ಪ್ರವಾಸಿತಾಣಗಳಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಬೇಕು. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರನ್ನು ತಪ್ಪದೆ ಟೆಂಪ್ರೇಚರ್ ಮತ್ತು ಥ್ರೋಟ್ ಸ್ವಾಬ್ ಸಂಗ್ರಹಿಸಿ ಕೋವಿಡ್ ಟೆಸ್ಟ್ ಮಾಡಬೇಕು ಎಂದು ಸೂಚಿಸಿದ್ದಾರೆ.

ಕಳೆದ ಐದು ದಿನಗಳ ಅವಧಿಯಲ್ಲಿ ಕೊಡಗಿನಲ್ಲಿ ಕೊರೋನಾ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಇನ್ನು ಹೊಟೇಲ್ ಮತ್ತು ಹೋಂಸ್ಟೇಗಳಲ್ಲಿ ಉಳಿಯಲು ಬರುವ ಪ್ರವಾಸಿಗರು 17 ಗಂಟೆಗಳ ಒಳಗೆ ಕೊವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ವರದಿ ಹೊಂದಿರಬೇಕು. ಹಾಗಾದರೆ ಮಾತ್ರವೇ ಹೊಟೇಲ್ ಮತ್ತು ಹೋಂಸ್ಟೇಗಳಲ್ಲಿ ಉಳಿಯಲು ಅವಕಾಶ ನೀಡಬೇಕು. ಇಲ್ಲದೆಲ್ಲದಕ್ಕೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧ ಪಡಿಸಲಿದೆ ಎಂದಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವ ಡಾ ಸುಧಾಕರ್ ಸೂಚನೆ ನೀಡಿದ್ದಾರೆ.

ಇನ್ನು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡುವುದು ಒಳ್ಳೆಯದು. ಸೆಕ್ಷನ್ ಜಾರಿ ಮಾಡುವುದರಿಂದ ಜನರು ಗುಂಪುಗೂಡದಂತೆ ತಡೆಯಲು ಸಾಧ್ಯವಿದೆ. ಅಲ್ಲದೆ ಜನರಿಗೆ ಒಂದಷ್ಟು ಅರಿವು ಮೂಡಲಿದೆ ಎಂದಿದ್ದಾರೆ. ಕೊರೋನಾ ಮಿತಿ ಮೀರುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು. ಹಿಂದೆ ಒಂದು ಕುಟುಂಬಕ್ಕೆ ಹಲವು ಮಕ್ಕಳು ಇರುತಿದ್ದರು. ಆದರೆ ಇಂದು ಒಂದು ಕುಟುಂಬಕ್ಕೆ ಒಂದೇ ಮಗು ಇರುತ್ತದೆ. ಹೀಗಾಗಿ ಶಿಕ್ಷಣಕ್ಕಿಂತ ಜೀವ ಮುಖ್ಯವಾಗಿದ್ದು ಕೊರೊನಾ ನಿಯಂತ್ರಣಕ್ಕೆ ಬರುವವರಿಗೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯದಂತೆ ಶಾಸಕ ಅಪ್ಪಚ್ಚು ರಂಜನ್ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಆಗ್ರಹಿಸಿದರು.

ಒಟ್ಟಿನಲ್ಲಿ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಮಿತಿ ಮೀರುತ್ತಿದ್ದು ಜನರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿಯೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಎಷ್ಟರ ಮಟ್ಟಿಗೆ ನಿಯಮಗಳು ಜಾರಿಯಾಗುತ್ತವೆ ಎನ್ನೋದನ್ನ ಕಾದು ನೋಡಬೇಕಿದೆ.

Published by:zahir
First published: