• Home
  • »
  • News
  • »
  • state
  • »
  • ಮೈಸೂರಿನಲ್ಲಿ ಕೊರೋನಾ ಎರಡನೇ ಅಲೆ ಆತಂಕ: ಗಡಿಗಳಲ್ಲಿ ಕಟ್ಟೆಚ್ಚರ, ನಂಜನಗೂಡು ರಥೋತ್ಸವ ರದ್ದು

ಮೈಸೂರಿನಲ್ಲಿ ಕೊರೋನಾ ಎರಡನೇ ಅಲೆ ಆತಂಕ: ಗಡಿಗಳಲ್ಲಿ ಕಟ್ಟೆಚ್ಚರ, ನಂಜನಗೂಡು ರಥೋತ್ಸವ ರದ್ದು

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಪಂಚಮಹಾರಥೋತ್ಸವ ರದ್ದು ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದಾರೆ. ಧಾರ್ಮಿಕ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುವ ಆತಂಕ ವ್ಯಕ್ತಪಡಿಸಿದ್ದಾರೆ

  • Share this:

ಮೈಸೂರು (ಮಾ. 18): ಮತ್ತೆ ಅಬ್ಬರಿಸುತ್ತಿರುವ ಕೊರೋನಾ ಎರಡನೆ ಅಲೆ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿಯೂ ನಿಯಂತ್ರಣಕ್ಕೆ ಬಂದಿದ್ದ ಪ್ರಕರಣಗಳು ಹೆಚ್ಚಿದ್ದು,   ನಿನ್ನೆ 35 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ, ಈ ಬಾರಿಯೂ ನಂಜನಗೂಡು ಗೌತಮ ಪಂಚ ಮಹಾರಥೋತ್ಸವಕ್ಕೆ ತಡೆ  ಹಾಕಲಾಗಿದೆ.  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಲಿಖಿತ ಈ ಕುರಿತು ಆದೇಶ ಹೊರಡಿಸಿದ್ದು, ಈ ಬಾರಿ ನಂಜನಗೂಡು ದೊಡ್ಡ ರಥೋತ್ಸವದಲ್ಲಿ ಕೇವಲ‌ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಾ 19 ರಿಂದ ಮಾ 30 ರವರೆಗೆ ಧಾರ್ಮಿಕ ಪೂಜೆ ಮಾಡಿ,  ಸಾಂಪ್ರದಾಯಿಕವಾಗಿ ಚಿಕ್ಕ ತೇರು ನಡೆಸಲು ಅನುಮತಿ ನೀಡಲಾಗಿದೆ. ಷರತ್ತುಗೊಳಪಡಿಸಿ ಸಾಂಕೇತಿಕ ರಥೋತ್ಸವಕ್ಕೆ ಸಮ್ಮತಿ ನೀಡಿದ ಜಿಲ್ಲಾಡಳಿತ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಹಾಗೂ ಶಿಷ್ಟಾಚಾರದ ಪ್ರಕಾರ ಗಣ್ಯರು ಅಧಿಕಾರಿಗಳು, ಸ್ಥಳೀಯರಿಗೆ  ಮಾತ್ರ ಅವಕಾಶ. ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನ ಭಕ್ತಾದಿಗಳಿಗೆ ನಿರ್ಬಂಧ ಹೇರಿದ್ದಾರೆ. 


ಪಂಚಮಹಾರಥೋತ್ಸವ ರದ್ದು ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದಾರೆ. ಧಾರ್ಮಿಕ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುವ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ನಂಜನಗೂಡಿನ ಜನತೆಗೆ ಸೀಮಿತಗೊಳಿಸಿ ರಥೋತ್ಸವ ಆಚರಿಸಲು ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.  ಅನಾದಿ ಕಾಲದಿಂದಲೂ ನಡೆಯುತ್ತಿರುವ ಧಾರ್ಮಿಕ ಸಂಪ್ರದಾಯಕ್ಕೆ ತಡೆಯೊಡ್ಡುವುದು ಶೋಭೆಯಲ್ಲ‌, ಸರ್ಕಾರ ಕೊರೋನಾ ತಡೆಗೆ ಜಾರಿಮಾಡಿರುವ ನಿಯಮವನ್ನು ನಾವು ಸ್ವಾಗತಿಸಿ ಪಾಲಿಸುತ್ತೇವೆ. ಹೊರ ರಾಜ್ಯ ಹೊರ ತಾಲೂಕುಗಳಿಂದ ಆಗಮಿಸುವ ಭಕ್ತರನ್ನು ತಾತ್ಕಾಲಿಕವಾಗಿ ನಿಷೇಧ ಮಾಡಲಿ ಪಂಚ ಮಹಾರಥೋತ್ಸವ ಎಳೆಯಲು ನಂಜನಗೂಡಿನ ಜನತೆಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳನ್ನು ಕೋರಿದ ನಂಜನಗೂಡು ಪಟ್ಟಣ ನಿವಾಸಿಗಳು ಆದೇಶವನ್ನ ಮರುಪರಿಶೀಲನೆ ಮಾಡಿ ಎಂದು ಮನವಿ ಮಾಡಿದ್ದಾರೆ


ಕೊರೋನಾ ಎರಡನೇ ಅಲೆ ಭೀತಿಯ ಹೆಚ್ಚಾಗಿರುವ ಹಿನ್ನೆಯಲ್ಲಿ, ಮೈಸೂರು ಕೇರಳ ಬಾರ್ಡರ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದ್ದಾರೆ. ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿದ್ದು, ಒಂದು ವೇಳೆ ಟೆಸ್ಟ್ ಮಾಡಿಸದೆ ಬಂದ ಪ್ರಯಾಣಿಕರಿಗೆ, ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತದೆ.


ಇದನ್ನು ಓದಿ: ಆಟ ಶುರು ಅಲ್ಲ, ಅಭಿವೃದ್ಧಿ ಆರಂಭ; ದೀದಿಗೆ ಕುಟುಕಿದ ಪ್ರಧಾನಿ ಮೋದಿ


ಕೊರೋನಾ ತಡೆಗೆ ಕ್ರಮ ಕುರಿತು ವಯನಾಡ್ ಎಸ್.ಪಿ ಅರವಿಂದ್ ಜೊತೆ ಮಾತನಾಡಲಾಗಿದ್ದು, ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗೆ ಹೆಚ್ಚು ಆದ್ಯತೆ ನೀಡುವಂತೆ ಹೇಳಿದ್ದೇವೆ. ಚಾಮರಾಜನಗರ, ಹಾಸನ ಕೊಡಗು, ಮಂಡ್ಯ ಮತ್ತು ಬೆಂಗಳೂರಿನಿಂದ ಬರುವವರಿಗೆ ಯಾವುದೇ ರಿಸ್ಟ್ರಿಕ್ಷನ್ಸ್ ಸದ್ಯಕ್ಕಿಲ್ಲ.  ಮೈಸೂರಿಗೆ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ ಆಯಾ ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 54,584 ಇದ್ದು,  ಇದುವರೆಗೂ 53,295 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 250ಕ್ಕೆ ಏರಿಕೆಯಾಗಿದ್ದು,  ಇದುವರೆಗೆ 1,039 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳು ಮೈಸೂರಿನಲ್ಲಿ ಕೊರೋನಾದ ಎರಡನೇ ಅಲೆ ಭೀತಿ ಸೃಷ್ಟಿಸಿದ್ದು, ಜನರು ಮತ್ತೆ ಲಾಕ್‌ಡೌನ್ ಅಥವ ಸೀಲ್‌ಡೌನ್‌ನಂತರ ಸಂಕಷ್ಟದ ದಿನಗಳನ್ನ ಎದುರಿಸುವ ಸಾಧ್ಯತೆ ನಿರೀಕ್ಷೆ ಮಾಡುತ್ತಿದ್ದಾರೆ.

Published by:Seema R
First published: