HOME » NEWS » State » COVID POSITIVE WOMAN DIES IN BENGALURU SINCE SHE DIDNT GET OXYGEN ON TIME DUE TO LACK OF BU NUMBER SKTV

Coronavirus: BU ನಂಬರ್ ಸಿಗದಿದ್ದಕ್ಕೆ ಜೀವ ಬಲಿ, ಕೋವಿಡ್ ಅವ್ಯವಸ್ಥೆಗೆ ಇದಕ್ಕಿಂತಾ ಉದಾಹರಣೆ ಬೇಕೆ?

61 ವರ್ಷದ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬನಶಂಕರಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಅಸುನೀಗಿದ್ದಾರೆ.

news18-kannada
Updated:April 20, 2021, 7:50 AM IST
Coronavirus: BU ನಂಬರ್ ಸಿಗದಿದ್ದಕ್ಕೆ ಜೀವ ಬಲಿ, ಕೋವಿಡ್ ಅವ್ಯವಸ್ಥೆಗೆ ಇದಕ್ಕಿಂತಾ ಉದಾಹರಣೆ ಬೇಕೆ?
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ಯಮಸ್ವರೂಪಿ ಕೋವಿಡ್ ದಿನೇ ದಿನೇ ಜೀವಗಳನ್ನು ಬಲಿ ಪಡೆಯುತ್ತಲೇ ಇದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ, ಆಕ್ಸಿಜನ್ ದೊರೆಯದೆ, ಆಸ್ಪತ್ರೆಯಲ್ಲಿ ದಾಖಲಾಗದೇ ಜನ ಉಸಿರು ಚೆಲ್ಲುತ್ತಲೇ ಇದ್ದಾರೆ. ಆದ್ರೆ ಸರ್ಕಾರ ಕೋವಿಡ್ ರೋಗಿಗಳಿಗೆ ನೀಡುವ ಬಿಯು ಸಂಖ್ಯೆ ಸಿಗದಿದ್ದಕ್ಕೆ ಸಮಯಕ್ಕೆ ಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

61 ವರ್ಷದ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬನಶಂಕರಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಅಸುನೀಗಿದ್ದಾರೆ.

ಮಹಿಳೆ ಮತ್ತು ಆಕೆಯ ಪತಿ ಇಬ್ಬರೂ 4 ದಿನಗಳ ಹಿಂದೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಇಬ್ಬರಿಗೂ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಇಬ್ಬರೂ ಬನಶಂಕರಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ನಿನ್ನೆ ಸಂಜೆಯ ವೇಳೆಗೆ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅವರು ಇದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದಿದ್ದು ತಿಳಿಯುತ್ತಿದ್ದಂತೆ ದಂಪತಿಯ ಹಿತೈಷಿಗಳು ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಮಹಿಳೆಗೆ ತುರ್ತಾಗಿ ಆಕ್ಸಿಜನ್ ಬೇಕಾಗಿದ್ದರಿಂದ 108 ಆಂಬ್ಯುಲೆನ್ಸ್​​ಗೆ ಕರೆ ಮಾಡಿ ಆಕೆಯನ್ನು ಬೇರೆಡೆಗೆ ಶಿಫ್ಟ್ ಮಾಡಲು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಆದರೆ ಆಸ್ಪತ್ರೆಗೆ ದಾಖಲಾಗಿ 4 ದಿನಗಳು ಕಳೆದರೂ ಸರ್ಕಾರ ನೀಡುವ ಬಿಯು ನಂಬರ್ ಆಕೆಗೆ ಇನ್ನೂ ದೊರೆತಿರಲಿಲ್ಲ. ಬಿಯು ನಂಬರ್ ಇಲ್ಲದೇ ಇದ್ರೆ ಆಸ್ಪತ್ರೆಗೆ ಸೇರಿಸಲು ಆಗಲ್ಲ ಎಂದು 108 ಸಿಬ್ಬಂದಿ ಅಸಡ್ಡೆ ತೋರಿಸಿದ್ದಾರೆ. ಕೋವಿಡ್ ಸೋಂಕು ದೃಢಪಟ್ಟ ಪ್ರತಿಯೊಬ್ಬರಿಗೂ ಒಂದು ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆಯ ಮೂಲಕವೇ ಚಿಕಿತ್ಸೆ, ಔಷಧ ನೀಡುವ ವ್ಯವಸ್ಥೆ ಇದೆ. ಆದರೆ ರೋಗಿಗಳ ಸಂಖ್ಯೆ ವಿಪರೀತ ಹೆಚ್ಚಿದ್ದು ಆ ವ್ಯವಸ್ಥೆ ಸದ್ಯ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಬಿಯು ಸಂಖ್ಯೆ ಇಲ್ಲ ಎಂದು ಆಂಬ್ಯುಲೆನ್ಸ್​ನಲ್ಲಿ ಆಕೆಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಸಾಧ್ಯವೇ ಆಗಲಿಲ್ಲ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಮಹಿಳೆ ಮೃತಪಟ್ಟಿದ್ದಾರೆ. ಸದ್ಯ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 65 ವರ್ಷ ವಯಸ್ಸಿನ ಆಕೆಯ ಪತಿಗೂ ಉಸಿರಾಟದ ಸಮಸ್ಯೆ ಶುರುವಾಗಿದೆ. ಅವರಿಗೂ ಆಕ್ಸಿಜನ್ ವ್ಯವಸ್ಥೆ ಇರುವ ಕಡೆ ಶಿಫ್ಟ್ ಮಾಡಬೇಕಿದೆ. ಆದರೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಇನ್ನೂ ವ್ಯಕ್ತಿಗೆ ಆಕ್ಸಿಜನ್ ಇರುವ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವೇ ಆಗಿಲ್ಲ.

ಒಂದು ಬಿಯು ನಂಬರ್ ಇಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಜೀವವೇ ಹೋಗುತ್ತಿದೆ ಎಂದರೆ ಅದಕ್ಕಿಂತ ದುರಂತ ಬಹುಶಃ ಮತ್ತೊಂದಿಲ್ಲ. ಕೋವಿಡ್ ಬಂದು ವರ್ಷವೇ ಕಳೆದರೂ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅತಿ ದೊಡ್ಡ ವೈಫಲ್ಯ ಕಂಡಿದೆ ಎನ್ನುವುದಕ್ಕೆ ಈ ಪ್ರಕರಣ ಕನ್ನಡಿ ಹಿಡಿದಂತಿದೆ.
Published by: Soumya KN
First published: April 20, 2021, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories