HOME » NEWS » State » COVID PATIENTS DEATH IN CHIKMAGALUR WITHOUT OXYGEN AVAILABLE VCTV MAK

CoronaVirus: ಅಂಗಲಾಚಿದ್ರೂ ಸಿಗಲಿಲ್ಲ ಆಕ್ಸಿಜನ್; ಉಸಿರಾಟದ ಸಮಸ್ಯೆಯಿಂದ ನರಳಾಡಿ ಪ್ರಾಣ ಬಿಟ್ಟ ವ್ಯಕ್ತಿ!

ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ವ್ಯಕ್ತಿ ಪತ್ನಿ ಹಾಗೂ ಮಗಳ ಎದುರೇ ಮನೆಯಲ್ಲೇ ವ್ಯಕ್ತಿ ಪ್ರಾಣ ಬಿಟ್ಟಿರುವ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ.

news18-kannada
Updated:April 20, 2021, 7:21 AM IST
CoronaVirus: ಅಂಗಲಾಚಿದ್ರೂ ಸಿಗಲಿಲ್ಲ ಆಕ್ಸಿಜನ್; ಉಸಿರಾಟದ ಸಮಸ್ಯೆಯಿಂದ ನರಳಾಡಿ ಪ್ರಾಣ ಬಿಟ್ಟ ವ್ಯಕ್ತಿ!
ಸಾಂದರ್ಭಿಕ ಚಿತ್ರ.
  • Share this:
ಚಿಕ್ಕಮಗಳೂರು : ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಬೆಂಗಳೂರಿನ ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದೇ, ಚಿಕಿತ್ಸೆ ನೀಡದೆ ಕೊರೋನಾ ರಿಪೋರ್ಟ್ ಕೇಳಿದ್ದಾರೆ. ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ವ್ಯಕ್ತಿ ಪತ್ನಿ ಹಾಗೂ ಮಗಳ ಎದುರೇ ಮನೆಯಲ್ಲೇ ವ್ಯಕ್ತಿ ಪ್ರಾಣ ಬಿಟ್ಟಿರುವ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್ ಮೃತ ದುರ್ಧೈವಿ.  ಜಗನ್ನಾಥ್ ಸಾಲ ತೀರಿಸಬೇಕು, ಮಗಳಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕು ಅಂತಾ ಹಗಲಿರುಳು ಎನ್ನದೇ ಕ್ಯಾಬ್ ಓಡಿಸಿ ಜೀವನ ಸಾಗಿಸಿದ್ರು, ಕಳೆದ ಬಾರಿಯ ಲಾಕ್ ಡೌನ್ನಲ್ಲೇ ಸಂಪಾದನೆಯಿಲ್ಲದೇ ಪೆಟ್ಟು ತಿಂದಿದ್ದ ಜಗನ್ನಾಥ್, ಈ ಬಾರಿ ಲಾಕ್ ಡೌನ್ ಆಗದೇ ಇರಲಿ ಅಂತಾ ಅದೆಷ್ಟೋ ದೇವರಿಗೆ ಕೈ ಮುಗಿದಿದ್ರು, ಯಾಕಂದ್ರೆ ಲಾಕ್ ಡೌನ್ ಆದ್ರೆ ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಸಾಲ ತೀರಿಸೋದು ಕಷ್ಟವಾಗುತ್ತದೆ. ಮಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಅಂತಾ ನೊಂದುಕೊಂಡಿದ್ದ ಜೀವಿ. ದುರಂತ ಅಂದ್ರೆ ಕಾಫಿನಾಡಿನಿಂದ ರಾಜಧಾನಿ ಬೆಂಗಳೂರಿಗೆ ಹೀಗೆ ಅನೇಕ ಕನಸುಗಳನ್ನ ಕಟ್ಕೊಂಡು, ಒಂದೊಳ್ಳೆ ಬದುಕನ್ನ ಕಟ್ಟಿಕೊಳ್ಳಬೇಕು ಅಂತಾ ಬಂದಿದ್ದ ವ್ಯಕ್ತಿ ಕೊನೆಗೆ ಹೆಣವಾಗಿ  ತವರಿಗೆ ಬಂದಿದ್ದಾರೆ.  ತೀವ್ರ ಉಸಿರಾಟದ ಸಮಸ್ಯೆಯಿಂದ ಒಂದು ವಾರದಿಂದ ಬಳಲುತ್ತಿದ್ದ 38 ವರ್ಷದ ಜಗನ್ನಾಥ್ ಗೆ, ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಕ್ಕಿಲ್ಲ.

ಪತ್ನಿ, 12 ವರ್ಷದ ಮಗಳು ಸಿಕ್ಕ ಸಿಕ್ಕ ಆಸ್ಪತ್ರೆಗಳಲ್ಲಿ ಎಷ್ಟೇ ಕಾಡಿ ಬೇಡಿದ್ರೂ ಪ್ರಯೋಜನವಾಗ್ಲಿಲ್ಲ, ಕೋವಿಡ್ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲ್ಲ ಅಂತಾ ಕಡ್ಡಿ ಮುರಿದ ಹಾಗೆ ಹೇಳಿ ಟ್ರಿಟ್ಮೆಂಟ್ ನೀಡಿಲ್ಲ. ಕಾಲಿಗೆ ಬೀಳ್ತೀವಿ, ಕೈ ಮುಗಿತೀವಿ ಅಂದ್ರು ಕೂಡ ತಾಯಿ-ಮಗಳ ದುಃಖ, ನೋವು, ಸಂಕಟ ಯಾರಿಗೂ ಅರ್ಥವಾಗಲೇ ಇಲ್ಲ. ಪ್ಲೀಸ್ ಸರ್, ಅಪ್ಪನಿಗೆ ಉಸಿರಾಡಲು ತುಂಬಾ ಕಷ್ಟ ಆಗ್ತಿದೆ, ಆಕ್ಸಿಜನ್ ಆದ್ರೂ ಹಾಕಿ ಅಂತಾ ಪುಟ್ಟ ಬಾಲಕಿ ಪರಿಪರಿಯಾಗಿ ಗೋಗರೆದ್ರೂ ಯಾರೂ ಕೇರ್ ಮಾಡ್ಲೇ ಇಲ್ಲ. ಪರಿಣಾಮ ಅಪಾರ ಕನಸುಗಳನ್ನ ಹೊತ್ಕೊಂಡು ಹೆಂಡ್ತಿ ಮಗಳೊಂದಿಗೆ ಬೆಂಗಳೂರಿಗೆ ಹೋಗಿದ್ದ ವ್ಯಕ್ತಿ, ತನ್ನ ಉಸಿರು ಚೆಲ್ಲಿದ್ದಾನೆ.

ಆಸ್ಪತ್ರೆ ಸುತ್ತಿ ವಿಧಿಯಿಲ್ಲದೇ ಮನೆಯಲ್ಲಿದ್ದಾಗಲೇ ನಿನ್ನೆ ಉಸಿರಾಡಲು ಸಾಧ್ಯವಾಗದೇ ಉಸಿರು ನಿಲ್ಲಿಸಿದ್ದಾರೆ ಜಗನ್ನಾಥ್. ಪ್ರಜ್ಞೇ ಹೋಗಿದ್ಯೋ ಏನೋ ಅಂತಾ ಆಸ್ಪತ್ರೆಗೆ ತೆಗೆದುಕೊಂಡು ಹೋದ್ರೆ ಹಾರ್ಟ್ ಅಟ್ಯಾಕ್ ಆಗಿದೆ, ಕೊರೊನಾ ಅಲ್ಲ ಅಂತಾ ಹೇಳಿದ್ದಾರಂತೆ. ಹೀಗಾಗಿ ಮೃತದೇಹವನ್ನ ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆಗೆ ತಂದು ಅಂತ್ಯಸಂಸ್ಕಾರ ಮಾಡಲಾಯ್ತು. ಇಷ್ಟಾದ್ರೂ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯನ್ನ ಅಂತ್ಯಸಂಸ್ಕಾರದ ವೇಳೆ ಅನುಸರಿಸಲಾಯ್ತು. ಈ ವೇಳೆ ಮೃತನ ಪತ್ನಿ, ಮಗಳು ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: Remdesivir ಪೂರೈಕೆ ವಿವಾದ; ಕೊರೋನಾ ಸಿಕ್ರೆ ಅದನ್ನ ಫಡ್ನವೀಸ್ ಬಾಯೊಳಗೆ ತುರುಕುತ್ತೇನೆ’ ಎಂದ ಶಿವಸೇನಾ ಶಾಸಕ!

ತಾನು ಕ್ಯಾಬ್ ಚಾಲಕನಾಗಿದ್ರೂ ಮಗಳಿಗೆ ಒಳ್ಳೆ ಶಿಕ್ಷಣ ಕೊಡ್ಬೇಕು ಅಂತಾ ಕಾನ್ವೆಂಟಲ್ಲಿ ಓದಿಸ್ತಿದ್ದ ಮಗಳ ಪ್ರೀತಿಯ ಅಪ್ಪ ಇಲ್ಲವಾಗಿದ್ದಾನೆ. ಹೆದರಬೇಡ ದುಡಿದು ಎಲ್ಲಾ ಸಾಲವನ್ನ ತೀರಿಸಿ, ಊರಲ್ಲಿ ಒಂದೊಳ್ಳೆ ಮನೆ ಕಟ್ಟೋಣ ಅಂತಾ ಹೇಳಿದ ಹೆಂಡ್ತಿಯ ಸ್ವಾಭಿಮಾನಿ ಗಂಡ ಒಬ್ಬಂಟಿ ಮಾಡಿ ಹೊರಟು ಹೋಗಿದ್ದಾನೆ. ಕೋವಿಡ್ ನೆಪದಲ್ಲಿ ಬಡ ರೋಗಿಗೆ ಬೆಂಗಳೂರಿನಂತಹ ಬೆಂಗಳೂರಿನಲ್ಲೇ ಇದ್ರೂ ತನ್ನ ಉಸಿರು ಕಾಪಾಡಿ ಅಂತಾ ಅಂಗಲಾಚಿದ ಸ್ವಾಭಿಮಾನಿಯನ್ನ ಉಳಿಸಿಕೊಳ್ಳಲಾಗದ ದುಸ್ಥಿತಿ ಪತ್ನಿ-ಮಗಳದ್ದು. ಇದೀಗ ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡು, ಮುಂದಿನ ಭವಿಷ್ಯ ಹೇಗೆ ಅಂತಾ ಎರಡು ಹೆಣ್ಣು ಜೀವಗಳು ಕಂಗಲಾಗಿವೆ.

ಒಟ್ಟಾರೆ ನಮ್ಮ ಅಧಿಕಾರಿಗಳು, ಸಚಿವರುಗಳು ಏನೂ ಸಮಸ್ಯೆ ಇಲ್ಲ ಅಂತಾ ಪೋಸ್ ಕೊಟ್ರೂ ಎರಡ್ಮೂರು ದಿನ ಆಸ್ಪತ್ರೆಗೆ ಅಲೆದು ಆಕ್ಸಿಜನ್ ಸಿಗದೇ ಸಾವನ್ನಪ್ಪಿದ್ದ ಜಗನ್ನಾಥ್ ಪ್ರಕರಣ ನಮ್ಮ ವ್ಯವಸ್ಥೆಯನ್ನ ಅಣಕಿಸುತ್ತಿರುವುದಂತೂ ಸತ್ಯ.

(ಸಹಾಯ ಮಾಡುವವರು ಅನಿತಾ, ಬ್ಯಾಂಕ್ ಆಫ್ ಬರೋಡ, ಅಕೌಂಟ್ ನಂಬರ್: 63750100011147, IFSC :BARB0VJMUDI, ಬ್ರಾಂಚ್: ಮೂಡಿಗೆರೆ).
Published by: MAshok Kumar
First published: April 20, 2021, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories