Cauvery Theerthodbhava: ಕಾವೇರಿ ತೀರ್ಥೋದ್ಭವಕ್ಕೆ ಕೋವಿಡ್​​ ಆತಂಕ; ಪ್ರವಾಸೋದ್ಯಮ ಬಂದ್​ ಮಾಡುವಂತೆ ಒತ್ತಾಯ

ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ನೀಡಿರುವುದರಿಂದ ಸೋಂಕು ಹೆಚ್ಚಳವಾಗುವ ಆತಂಕವಿದ್ದು, ಕಾವೇರಿ ತೀರ್ಥೋದ್ಭವಕ್ಕೆ ಜಿಲ್ಲೆಯ ಭಕ್ತರು ಭಾಗವಹಿಸದ ಸ್ಥಿತಿ ನಿರ್ಮಾಣವಾಗಲಿದೆ

ತಲಕಾವೇರಿಯಲ್ಲಿರುವ ಕಾವೇರಿ ತೀರ್ಥೋದ್ಭವ ಸ್ಥಳ

ತಲಕಾವೇರಿಯಲ್ಲಿರುವ ಕಾವೇರಿ ತೀರ್ಥೋದ್ಭವ ಸ್ಥಳ

  • Share this:
ಕೊಡಗು (ಸೆ. 24):  ತುಲಾ ಸಂಕ್ರಮಣ ಕಾಲದಲ್ಲಿ ಕೊಡಗಿನ ಕುಲದೇವತೆ ಕಾವೇರಿ ಮಾತೆ ತೀರ್ಥ ರೂಪಿಣಿಯಾಗುತ್ತಾಳೆ. ಆ ಕಾಲ ಸಮೀಪಿಸುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಒಂದು ವೇಳೆ ತೀವ್ರಗೊಂಡಲ್ಲಿ ತೀರ್ಥರೂಪಿಣಿಯಾಗುವ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳುವ ಪುಣ್ಯದ ಕ್ಷಣ ಕೈತಪ್ಪಿಹೋಗುವ ಆತಂಕ ಇದ್ದೇ ಇದೆ. ಹೌದು ಕೊಡಗು (Kodagu) ಜಿಲ್ಲೆಯಲ್ಲಿ ಕೋವಿಡ್ ಸೋಂಕು (Covid) ಈಗಲೂ ಏರಿಳಿತ ಕಾಣುತ್ತಿರುವಾಗಲೇ ಅಕ್ಟೋಬರ್ 17 ರಂದು ಕಾವೇರಿ ತೀರ್ಥೋದ್ಭವ (Cauvery Theerthodbhava)ಕ್ಕೂ ಮೂಹೂರ್ತ ಫಿಕ್ಸ್ ಆಗಿದೆ. ಈ ಕುರಿತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೂಡ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಆದರೆ ಇದರ ನಡುವೆ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ನೀಡಿರುವುದರಿಂದ ಸೋಂಕು ಹೆಚ್ಚಳವಾಗುವ ಆತಂಕವಿದ್ದು, ಕಾವೇರಿ ತೀರ್ಥೋದ್ಭವಕ್ಕೆ ಜಿಲ್ಲೆಯ ಭಕ್ತರು ಭಾಗವಹಿಸದ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಅಕ್ಟೋಬರ್ ಮತ್ತು ನವೆಂಬರ್ ಎರಡು ತಿಂಗಳ ಕಾಲ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಂಪೂರ್ಣ ಬಂದ್ ಮಾಡುವಂತೆ 'ಸೇವ್ ಕೊಡಗು ಫ್ರಮ್ ಟೂರಿಸ್ಟ್, ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಜಿಲ್ಲೆಯ ವಿವಿಧೆಡೆಯಿಂದ ಮಡಿಕೇರಿಗೆ ಆಗಮಿಸಿದ್ದ ಹತ್ತಾರು ಕಾರ್ಯಕರ್ತರು ಪ್ರವಾಸೋದ್ಯಮವನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಸಮಯ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿಯಾದ' ಕೊಡಗು ಸೇವ್ ಫ್ರಮ್ ಟೂರಿಸ್ಟ್'  ತಂಡದ ನಿಯೋಗವು ಅಕ್ಟೋಬರ್ ಮತ್ತು ನವೆಂಬರ್ ಎರಡು ತಿಂಗಳು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಂದ್ ಮಾಡುವಂತೆ ಮನವಿ ಮಾಡಿತು.

ಇದನ್ನು ಓದಿ: ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 72ನೇ ಸ್ಥಾನ

ಜೊತೆಗೆ ಜಿಲ್ಲಾಧಿಕಾರಿಯವರ ಮೂಲಕ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೂ ಮನವಿ ಸಲ್ಲಿಸಿತು. ಈ ವೇಳೆ 'ಸೇವ್ ಕೊಡಗು ಫ್ರಮ್ ಟೂರಿಸ್ಟ್' ಸಂಘಟನೆ ಸಂಚಾಲಕ ಪ್ರವೀಣ್ ಉತ್ತಪ್ಪ ಮಾತನಾಡಿ ಜಿಲ್ಲೆಯಲ್ಲಿ ಕಳೆದ ವರ್ಷವೂ ಕೋವಿಡ್ ಸೋಂಕು ಹೆಚ್ಚಿದ್ದರಿಂದ ನಮ್ಮ ಕುಲದೇವತೆ ಕಾವೇರಿ ಮಾತೆಯ ತೀರ್ಥೋದ್ಭವಕ್ಕೂ ಜಿಲ್ಲೆಯ ಭಕ್ತರು ಭಾಗವಹಿಸದಂತೆ ಜಿಲ್ಲಾಡಳಿತ ನಿರ್ಭಂಧ ಹೇರಿತು. ಇದು ಕಾವೇರಿ ಮಾತೆಯ ಭಕ್ತರಿಗೆ ಭಾರೀ ನೋವು ಉಂಟುಮಾಡಿತು. ಈ ವರ್ಷ ಕಳೆದ ಎರಡು ವಾರದಿಂದಷ್ಟೇ ಕೋವಿಡ್ ಸೋಂಕು ಕಡಿಮೆಯಾಗಿ ಶಾಲೆ ಆರಂಭಿಸಲಾಗಿದೆ.

ಇದನ್ನು ಓದಿ: ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

ಮತ್ತೊಂದೆಡೆ ಇನ್ನು 20 ದಿನಗಳಲ್ಲಿ ಕಾವೇರಿ ತೀರ್ಥೋದ್ಭವವೂ ಇರುವುದರಿಂದ ಈ ಎರಡರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಎರಡು ತಿಂಗಳ ಕಾಲ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದೆ. ಈ ವರ್ಷವಾದರೂ ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಲು ಜಿಲ್ಲೆಯ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕು. ಮತ್ತು ಕಾವೇರಿ ತೀರ್ಥೋದ್ಭವಕ್ಕೆ ಹೊರ ಜಿಲ್ಲೆಯಿಂದ ಭಾಗವಹಿಸುವವರಿಗೆ ಮೊದಲೇ ನೋಂದಣಿ ಮಾಡಿಸಿಕೊಂಡು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ತರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ಕೊಡಗು ಸೇವ್ ಫ್ರಮ್ ಟೂರಿಸ್ಟ್ ಸಂಘಟನೆ ಮುಖಂಡರಾದ ಕಾವ್ಯ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಕೂಡ ಜಿಲ್ಲೆಯಲ್ಲಿ ಸೋಂಕು ಹೆಚ್ಚಿದ್ದ ಕಾರಣ ಕಾವೇರಿ ತೀರ್ಥೋದ್ಭವಕ್ಕೆ ನಿರ್ಬಂಧ ಹೇರಲಾಗಿತ್ತು. ಸಾಕೇಂತಿಕವಾಗಿ ನಡೆದ ಆಚರಣೆ ವೇಳೆ ಜಿಲ್ಲಾಡಳಿತ ಅರ್ಚಕರು, ದೇವಾಲಯ ಸಮಿತಿ ಮುಖಂಡರು ಮತ್ತು ಸ್ವಯಂ ಸೇವಕರನ್ನು ಹೊರತುಪಡಿಸಿ ಉಳಿದ ಯಾರಿಗೂ ತೀರ್ಥೋದ್ಭವದ ವೇಳೆಗೆ ಪ್ರವೇಶ ಇರಲಿಲ್ಲ. ಅಲ್ಲದೇ ಇವರಿಗೂ ಕೂಡ 72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ಕೊರೊನಾ ನೆಗಟಿವ್ ವರದಿ ತಂದರೆ ಮಾತ್ರವೇ ತೀರ್ಥೋದ್ಭವದ ವೇಳೆ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿತ್ತು.
Published by:Seema R
First published: