Covid Effect: ಏ.10 ರಿಂದ 13ರ ತನಕ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೆ ಭಕ್ತರ ಪ್ರವೇಶ ನಿಷೇಧ

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಯುಗಾದಿ ಜಾತ್ರೆಗೆ ನಾಲ್ಕು ದಿನಗಳ ಕಾಲ ಹೊರಗಿನ ಭಕ್ತರ ಪ್ರವೇಶ ನಿಷೇಧಿಸಿದ್ದಾರೆ

ಮಲೆ ಮಹದೇಶ್ವರ ಬೆಟ್ಟ

ಮಲೆ ಮಹದೇಶ್ವರ ಬೆಟ್ಟ

  • Share this:
ಚಾಮರಾಜನಗರ (ಏ.06) ಕೋವಿಡ್-19 ಹಿನ್ನಲೆಯಲ್ಲಿ ಶಿವರಾತ್ರಿ ಜಾತ್ರೆಯಲ್ಲಿ ಮಹದೇಶ್ವರನ ದರ್ಶನದಿಂದ ವಂಚಿತರಾಗಿದ್ದ ಭಕ್ತರಿಗೆ ಯುಗಾದಿ ಜಾತ್ರೆಗು ನಿರ್ಬಂಧ ವಿಧಿಸಲಾಗಿದೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೈ ಮಹದೇಶ್ವರನ ಬೆಟ್ಟದಲ್ಲಿ ಏಪ್ರಿಲ್ 10 ರಿಂದ 13 ರ ತನಕ ನಡೆಯುವ ಯುಗಾದಿ ಜಾತ್ರೆಗೆ ಹೊರಗಿನ ಭಕ್ತರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಪ್ರತಿ ವರ್ಷ ನಡೆಯುವ ಯುಗಾದಿ ಜಾತ್ರೆಗೆ ರಾಜ್ಯದ ನಾನಾ ಮೂಲೆಗಳಿಂದ ಹಾಗು ನೆರೆಯ ತಮಿಳುನಾಡಿನಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಹೊರಗಿನಿಂದ ಬರುವ ಸಾರ್ವಜನಿಕರು ಹಾಗು ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಹಾಗೂ ಕೊರೋನಾ ಹರಡುವುದನ್ನು ತಡೆಗಟ್ಟಲು ಯುಗಾದಿ ಜಾತ್ರೆಗೆ ಭಕ್ತರ ಪ್ರವೇಶ ನಿರ್ಬಂಧಿಸುವುದು ಸೂಕ್ತ ಎಂದು ಮಲೈ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ  ಜಯವಿಭವಸ್ವಾಮಿ ಅವರು ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಯುಗಾದಿ ಜಾತ್ರೆಗೆ ನಾಲ್ಕು ದಿನಗಳ ಕಾಲ ಹೊರಗಿನ ಭಕ್ತರ ಪ್ರವೇಶ ನಿಷೇಧಿಸಿದ್ದಾರೆ

ಆದರೆ ಯುಗಾದಿ ಜಾತ್ರೆಯ ರಥೋತ್ಸವ ಮತ್ತು ಪೂಜಾ ಕೈಂಕರ್ಯಗಳು   ಸರಳ ಹಾಗು ಸಾಂಪ್ರದಾಯಿಕವಾಗಿ  ನೆರವೇರಲಿವೆ. ಸ್ಥಳೀಯ ನಿವಾಸಿಗಳು, ದೇವಾಲಯ ಅರ್ಚಕರು, ಪ್ರಾಧಿಕಾರದ ಸಿಬ್ಬಂದಿ, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.  ಇವರೆಲ್ಲಾ ದೇವಾಲಯದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದನ್ನು ಓದಿ: ನಿರ್ಲಕ್ಷ್ಯಕ್ಕೊಳಗಾಗಿದೆ ತುಳುನಾಡಿನ ವೀರ ಪುರುಷರ ತವರು; ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ

ಕೊರೋನಾ ಹರಡುವ ಭೀತಿಯ ಹಿನ್ನಲೆಯಲ್ಲಿ 2020 ರಲ್ಲಿ ಶಿವರಾತ್ರಿ ಜಾತ್ರೆ, ಯುಗಾದಿ ಜಾತ್ರೆ ಹಾಗು ದೀಪಾವಳಿ ಜಾತ್ರೆಗಳನ್ನು  ರದ್ದುಗೊಳಿಸಲಾಗಿತ್ತು. ಆದರೆ ಕಳೆದ ತಿಂಗಳು ಶಿವರಾತ್ರಿ ಜಾತ್ರೆಯನ್ನು ಸರಳ ಹಾಗು ಸಾಂಪ್ರದಾಯಿಕ ವಾಗಿ ಮಾತ್ರ ಆಚರಿಸಲಾಗಿತ್ತು. ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಯುಗಾದಿ ಜಾತ್ರೆಯನ್ನು ಸಹ ಇದೇ ರೀತಿ ಸರಳ ಹಾಗು ಸಾಂಪ್ರದಾಯಿಕ ವಾಗಿ ಆಚರಿಸಲು ಸಿದ್ದತೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಹಲವಾರು ದಿನಗಳಿಂದ  ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ  ಕೇವಲ ಬೆರಳಿಕೆಯಷ್ಟಿತ್ತು. ಈ ಹಿನ್ನಲೆಯಲ್ಲಿ ಯುಗಾದಿ ಜಾತ್ರೆಗಾದರೂ ಕೊರೋನಾ ಕಡಿಮೆಯಾಗಲಿದ್ದು ಯಾವುದೇ ತೊಂದರೆ ಇಲ್ಲದೆ ಮಹದೇಶ್ವರ ನ ಬೆಟ್ಟಕ್ಕೆ ಹೋಗಬಹುದು,  ರಥೋತ್ಸವದ ಲ್ಲಿ ಪಾಲ್ಗೊಂಡು ಮಹದೇಶ್ವರ ನ ಸೇವೆ ಮಾಡಿ ದರ್ಶನ ಪಡೆಯಬಹುದು ಎಂದುಕೊಂಡಿದ್ದ ಭಕ್ತ ಸಮೂಹಕ್ಕೆ ಈ ಬಾರಿಯು ಕೊರೋನಾ ಮಹಾಮಾರಿ ನಿರಾಶೆ ಉಂಟು ಮಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊರೋನಾ ಪ್ರಕಾರಣಗಳ ಸಂಖ್ಯೆ ಹೆಚ್ಚಾಗತೊಡಗಿದ್ದು ಮಹದೇಶ್ವರನ ಸನ್ನಿಧಿಗೆ ಹೋಗಲು ತಯಾರಿ ನಡೆಸಿದ್ದ ಭಕ್ತರಿಗೆ ಹಿನ್ನಡೆ ಉಂಟಾಗಿದೆ.

(ವರದಿ: ಎಸ್.ಎಂ.ನಂದೀಶ್)
Published by:Seema R
First published: