Hubli: ಪಿಎಂ ಮೋದಿ ಬಂದಾಗ ಜನ ಸೇರಿದ್ರೆ ಕೋವಿಡ್ ಹೆಚ್ಚಾಗಲ್ವಾ? ಪ್ರಶ್ನೆಗೆ ಸಿಎಂ ಬೊಮ್ಮಾಯಿ ಸಿಡಿಮಿಡಿ

ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಕೋವಿಡ್ ಹೆಚ್ಚಾಗುತ್ತೆ. ಪ್ರಧಾನಿ ಮೋದಿ ಬಂದಾಗ ಜನ ಸೇರಿದರೆ ಕೋವಿಡ್ ಹೆಚ್ಚಾಗಲ್ವಾ ಎಂದು ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಸಿಎಂ ಉತ್ತರಿಸದೇ ಹೊರಟು ಹೋದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ (PM Modi) ಬಂದಾಗ ಜನ ಸೇರಿಸಿದ್ರೆ ಕೋವಿಡ್ (Covid) ಹೆಚ್ಚಾಗಲ್ವಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಿಡಿಮಿಡಿಗೊಂಡರು. ಉತ್ತರಿಸದೇ ಹೊರಟು ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಕೋವಿಡ್ ಹೆಚ್ಚಾಗುತ್ತೆ. ಪ್ರಧಾನಿ ಮೋದಿ ಬಂದಾಗ ಜನ ಸೇರಿದರೆ ಕೋವಿಡ್ ಹೆಚ್ಚಾಗಲ್ವಾ ಎಂದು ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಸಿಎಂ ಉತ್ತರಿಸದೇ ಹೊರಟು ಹೋದರು.

ಜೂನ್ 21 ರಂದು ಮೈಸೂರಿನಲ್ಲಿ ಯೋಗ ದಿನಾಚರಣೆ

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬರುತ್ತಿರುವ ಕುರಿತಷ್ಟೇ ಬೊಮ್ಮಾಯಿ ಮಾಹಿತಿ ನೀಡಿದರು. ಪ್ರಧಾನಿ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನೆ, ರಾಷ್ಟ್ರೀಯ ಹೆದ್ದಾರಿಗೆ ಚಾಲನೆ ಸೇರಿದಂತೆ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸಾರ್ವಜನಿಕ ಸಭೆಯಲ್ಲಿಗಳಲ್ಲಿಯೂ ಭಾಗಿಯಾಗಲಿದ್ದಾರೆ. ಅದೇ ರೀತಿ ಜೂನ್ 21 ರಂದು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಯುತ್ತೆ. ಅದರಲ್ಲಿಯೂ ಪಿಎಂ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಷ್ಟೇ ಹೇಳಿ ಬೊಮ್ಮಾಯಿ ಹೊರಟು ಹೋದರು.

ಇದನ್ನೂ ಓದಿ: Mysuru: ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದೀರಾ? ವಾಟರ್‌ ಬಾಟಲ್‌, ವ್ಯಾನಿಟಿ ಬ್ಯಾಗ್ ತರಬೇಡಿ; ಬರೋ ಮುನ್ನ ಮೊಬೈಲ್ ಸ್ವಿಚ್ಛ್​ ಆಫ್ ಮಾಡಿ!

ಮೊನ್ನೆಯಷ್ಟೇ ಆರೋಗ್ಯ ಸಚಿವ ಸುಧಾಕರ್ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಜನ ಜಮಾಯಿಸಿದ್ದನ್ನು ಖಂಡಿಸಿದ್ದರು. ರಾಜ್ಯದಲ್ಲಿ ಕೋವಿಡ್ ಹೆಚ್ಚಾದ್ರೆ ಕಾಂಗ್ರೆಸ್ ಪಕ್ಷವೇ ಹೊಣೆ ಅನ್ನೋ ಮಾತುಗಳನ್ನಾಡಿದ್ದರು. ಇದೇ ಪ್ರಶ್ನೆ ಕೇಳಿದಾಗ ಸಿಎಂ ಉತ್ತರಿಸದೇ ಹೊರಟು ಹೋಗಿದ್ದಾರೆ.

ಅಗ್ನಿಪಥ್ ಹಿಂಸಾತ್ಮಕ ಹೋರಾಟ ಪ್ರತಿಪಕ್ಷದ ಪಿತೂರಿ 
ಅಗ್ನಿಪಥ್ ಹಿಂಸಾತ್ಮಕ ಹೋರಾಟದ ಹಿಂದೆ ಪ್ರತಿಪಕ್ಷಗಳ ಪಿತೂರಿ ಇದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೆಲವರು ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅಂಥವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡ್ತೇವೆ. ಕೆಲವರು ಟೂಲ್ ಕಿಟ್ ಇತ್ಯಾದಿ ಪ್ರಚಾರ ಮಾಡಿ ಜಗತ್ತಿನ ವಿವಿಧೆಡೆ ಅಪ ಪ್ರಚಾರ ಮಾಡ್ತಿದಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆಯೂ ಈ ಬಗ್ಗೆ ಅನೇಕ ರೀತಿಯ ಅಧ್ಯಯನ ಮಾಡಲಾಗಿದೆ.

ಇದನ್ನೂ ಓದಿ: Mysuru: ನಾಳೆ ಅರಮನೆ ನಗರಿಗೆ ಮೋದಿ; ಚಾಮುಂಡಿ ಬೆಟ್ಟಕ್ಕೆ ಜನರಿಗಿಲ್ಲ ಎಂಟ್ರಿ; ಮಾಲ್ ಕ್ಲೋಸ್, ಎಲ್ಲೆಲ್ಲೂ ಪೊಲೀಸ್​

ಸೈನ್ಯಾಧಿಕಾರಿಗಳು ಸೇನೆಯ ತಜ್ಞರು ಯೋಜನೆಗೆ ಸಮ್ಮತಿ ನೀಡಿ ಬೆಂಬಲಿಸಿದ್ದಾರೆ. ಪ್ರಯೋಗವನ್ನೇ ಮಾಡಬಾರದು ಎನ್ನುವ ದುರುದ್ದೇಶದಿಂದ ಅರಾಜಕತೆ ಸೃಷ್ಟಿ ಮಾಡಲಾಗ್ತಿದೆ. ಅಗ್ನಿಪಥ್ ಯೋಜನೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಸರಿಪಡಿಸೋಣ. ಅದನ್ನು ಬಿಟ್ಟು ಹೋರಾಟದ ಹಾದಿ ತುಳಿಯೋದು ಸರಿಯಲ್ಲ. ಯಾವುದೇ ಸಾಧಕ - ಬಾಧಕ ಚರ್ಚಿಸದೇ ಇದನ್ನು ಜಾರಿಗೆ ತರೋಕೆ ಮುಂದಾಗಿಲ್ಲ. ಈ ಯೋಜನೆಯಲ್ಲಿ ಸೇವೆಗೆ ಸೇರುವವರಿಗೆ ಮುಂದುವರಿಯಲೂ ಅವಕಾಶ ಇರುತ್ತೆ. ಬೇರೆ ಕಡೆಯೂ ಉದ್ಯೋಗಾವಕಾಶ ಇರುತ್ತದೆ.

ಪ್ರತಿಪಕ್ಷಗಳ ಷಡ್ಯಂತ್ರ ಆರೋಪ 

ಆದರೆ ಇದನ್ನು ವಿರೋಧಿಸಿ ಹಿಂಸಾತ್ಮಕ ಹೋರಾಟದ ಹಾದಿ ಹಿಡಿದಿರುವುದು ಸರಿಯಲ್ಲ. ಇದರ ಹಿಂದೆ ಪ್ರತಿಪಕ್ಷಗಳ ಷಡ್ಯಂತ್ರವಿದೆ. ಕೇಂದ್ರ ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಲೇ ಬರುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಹಲವಾರು ಜನ ಬೀದಿಗೆ ಬಂದಿದ್ದಾರೆ. ಹೋರಾಟ ಮಾಡ್ತಿರೋರ ಪೈಕಿ ಶೇ. 90 ರಷ್ಟು ಜನ ಸೇನೆಗೆ ಸೇರೋ ಅರ್ಹತೆಯನ್ನೇ ಹೊಂದಿಲ್ಲ. ಯಾರು ಸೇನೆಗೆ ಹೋಗಬೇಕು ಅವರು ಹೋರಾಡುತ್ತಿಲ್ಲ. ಬದಲಿಗೆ ಬೇರೆಯವರು ಬೀದಿಗೆ ಇಳಿದು ಹೋರಾಟ ಮಾಡ್ತಿದಾರೆ. ಹಿಂಸಾತ್ಮಕ ಹೋರಾಟಕ್ಕೆ ಹೇಗೆ ಪ್ರಚೋದನೆ ಸಿಕ್ಕಿದೆ ಅನ್ನೋದನ್ನ ಮಾಧ್ಯಮಗಳು ಬಿತ್ತರಿಸಿವೆ.
ಎಲ್ಲಿಯೂ ಕಮ್ಯುನಿಕೇಶನ್ ಗ್ಯಾಪ್ ಆಗಿಲ್ಲ. ಅನೇಕ ವರ್ಷಗಳಿಂದ ಇದು ಚರ್ಚೆಯಲ್ಲಿತ್ತು, ಇದೀಗ ಜಾರಿಗೆ ತರಲಾಗ್ತಿದೆ. ಲೋಪದೋಷಗಳ ತಿದ್ದುಪಡಿಗೆ ನಾವು ಸಿದ್ಧರಿದ್ದೇವೆ. ಹಾಗೆಂದು ಹಿಂಸೆಯನ್ನು ನಾವು ಸಹಿಸುವುದಿಲ್ಲ. ಹಿಂಸಾತ್ಮಕ ಹೋರಾಟದ ವಿರುದ್ಧ ಆಯಾ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
Published by:Kavya V
First published: