Covid: ಸೋಂಕು ಕಡಿಮೆಯಾದರೂ ತಗ್ಗದ ಆತಂಕ; ಹಾಸನದಲ್ಲಿ ಶಾಲೆಗೆ ಬರಲು ಮಕ್ಕಳು ಹಿಂದೇಟು

ಶಾಲೆಗೆ ಬಾರದ ಮಕ್ಕಳು ಹಾಗೂ ಪೋಷಕರಿಗೆ ಯಾವುದೇ ರೀತಿಯಲ್ಲೂ ಶಾಲೆಗೆ ಬರುವಂತೆ ಒತ್ತಡ ಹೇರುವಂತಿಲ್ಲ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಹಾಸನ (ಸೆ. 27): ರಾಜ್ಯದಲ್ಲೆಡೆ ಕೋವಿಡ್​ ಪ್ರಕರಣಗಳು (covid cases declining) ಇಳಿಮುಖವಾಗಿದ್ದು, ಪಾಸಿವಿಟಿದರ 1ಕ್ಕಿಂತ ಕಡಿಮೆಯಾಗಿದೆ. ಇದೇ ಹಿನ್ನಲೆ ಸರ್ಕಾರ ಈಗಾಗಲೇ ಪ್ರಾಥಮಿಕ ಶಾಲೆ ಆರಂಭಕ್ಕೂ ಮುಂದಾಗಿದೆ. ಆದರೆ, ಹಾಸನದಲ್ಲಿ ಮಾತ್ರ ಜನರಲ್ಲಿ ಕೋವಿಡ್​ ಭಯ ಮಾಸಿಲ್ಲ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ (covid Positivity Rate) ಗಣನೀಯವಾಗಿ ಇಳಿಯಾಗುತ್ತಿದೆ. ನೂರರ ಆಸುಪಾಸಿನಲ್ಲಿ ಬರುತ್ತಿದ್ದ ಕೊರೊನಾ ಕೇಸ್ ಗಳ ಸಂಖ್ಯೆ ಇಪ್ಪತ್ತರ ಒಳಗೆ ಬರುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಹಿರಿಯ ಪ್ರಾಥಮಿಕ ಅಂತ 6 ರಿಂದ 8 ನೇ ತರಗತಿ ಶಾಲೆಗಳು ಆರಂಭವಾಗಿ ಯಶಸ್ವಿಯಾಗಿ ನಡೆಯಲು ಆರಂಭಿಸಿ ಇಪ್ಪತ್ತು ದಿನ ಕಳೆದಿದೆ. ಆದರೆ, ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಇನ್ನೂ ಕೊರೊನಾ ಆತಂಕ ಹೋಗಿಲ್ಲ. ಇದರ ಪರಿಣಾಮ ಶಾಲೆಗೆ ಎಲ್ಲಾ ಮಕ್ಕಳು ಹಾಜರಾಗುತ್ತಿಲ್ಲ. ಮಕ್ಕಳನ್ನು ಶಾಲೆಗೆ ‌ಕಳುಹಿಸಲು ಪೋಷಕರು ಕೂಡ ಹಿಂದೇಟು ಹಾಕುತ್ತಿದ್ದಾರೆ.  

  ಯಾವುದೇ ವಿದ್ಯಾರ್ಥಿಗೂ ತಗುಲಿಲ್ಲ ಸೋಂಕು

  ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ, ಈವರೆಗೆ ಜಿಲ್ಲಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆ ಸೇರಿ ಶೇ. 82 ರಷ್ಟು ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.2 ಕ್ಕಿಂತ ಕಡಿಮೆಯಾದ ನಂತರ ಸೆ. 6 ರಿಂದ 6-8 ನೇ ತರಗತಿಯ ಸುಮಾರು 64,230 ಮಕ್ಕಳಿಗೆ ಭೌತಿಕ ತರಗತಿ ಆರಂಭಿಸಲಾಗಿದೆ. ಅದೃಷ್ಟವಶಾತ್ ಶಾಲೆ ಆರಂಭವಾದ ದಿನದಿಂದ ಈವರೆಗೆ ಜಿಲ್ಲೆಯ ಯಾವ ಶಾಲೆಯ ವಿದ್ಯಾರ್ಥಿಗೂ ಸೋಂಕು ತಗುಲಿಲ್ಲ. ಇದಕ್ಕೆ ಕಾರಣ ಜಿಲ್ಲಾಡಳಿತ ಕೈಗೊಂಡಿದ್ದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಆಗಿದೆ.

  ಇದನ್ನು ಓದಿ: ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ; ಅ. 11ರವರೆಗೆ ಜಾರಿ

  ಇನ್ನೂ ಭಯ ಮಾಯವಾಗಿಲ್ಲ

  ಆದರೆ, ಇನ್ನು ಪೂರ್ಣ ಪ್ರಮಾಣದ ಮಕ್ಕಳು ಶಾಲೆಗೆ ಆಗಮಿಸುತ್ತಿಲ್ಲ. ಇಷ್ಟು ದಿನ ಕಳೆದರೂ ಮಕ್ಕಳು ಪೂರ್ತಿಯಾಗಿ ಶಾಲೆಗೆ ಬರುತ್ತಿಲ್ಲ. ಇದಕ್ಕೆ ಮಕ್ಕಳು ಹಾಗೂ ಪೋಷಕರಲ್ಲಿ ಇರುವ ಕೊರೊನಾ ಭಯವೇ ಕಾರಣ ಎನ್ನಲಾಗಿದೆ. ಶಾಲೆಗೆ ಬಾರದ ಮಕ್ಕಳು ಹಾಗೂ ಪೋಷಕರಿಗೆ ಯಾವುದೇ ರೀತಿಯಲ್ಲೂ ಒತ್ತಡ ಹೇರುವಂತಿಲ್ಲ ಹಾಗೂ ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರವೇ ಸೂಚನೆ ನೀಡಿರುವುದರಿಂದ ಮನೆಯಲ್ಲೇ ಉಳಿದಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಪದ್ಧತಿಯನ್ನು ಮುಂದುವರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದ್ದಾರೆ.

  ಇದನ್ನು ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ವಂಚನೆ; ಹೆಂಡತಿಯರಿಗೆ ಸಹಾಯ ಮಾಡುತ್ತಿದ್ದ ಇಬ್ಬರು ಪೊಲೀಸರ ಬಂಧನ

  ಇದರ ನಡುವೆ ಹಲವು ತಿಂಗಳ ನಂತರ ಇನ್ನೂ ಆರಂಭವಾಗದೇ ಇರುವ ಒಂದರಿಂದ ಐದನೇ ತರಗತಿ ಆರಂಭಕ್ಕೆ ಇಲಾಖೆ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಸೇರಿ 1305 ಪ್ರಾಥಮಿಕ ಶಾಲೆಗಳಿದ್ದು, ಒಟ್ಟಾರೆ 1,04,253 ವಿದ್ಯಾರ್ಥಿಗಳಿದ್ದಾರೆ. ಈ ತರಗತಿಗಳ ಆರಂಭಕ್ಕೆ ಸರ್ಕಾರವೂ ಚಿಂತನೆ ನಡೆಸಿರುವುದರಿಂದ ಶಿಕ್ಷಣ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಜೊತೆಗೆ ಪೂರಕವಾದ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಎಲ್ಲಾ ಶಿಕ್ಷಕರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಜೊತೆಗೆ ಶಾಲಾ ಕೊಠಡಿ, ಆವರಣದ ಒಳಗೆ ಹೊರಗೆ ಸ್ವಚ್ಚಗೊಳಿಸಲಾಗಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಕ್ಲಾಸ್ ಆರಂಭಿಸಲು ಇಲಾಖೆ ಎಲ್ಲಾ ರೀತಿಯಲ್ಲೂ ಸಿದ್ಧವಿದೆ‌.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  (ವರದಿ: ಶಶಿಧರ್.ಬಿ.ಸಿ)
  Published by:Seema R
  First published: