news18-kannada Updated:January 11, 2021, 6:44 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಜ. 11): ಜಗತ್ತನ್ನೇ ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ವಿರುದ್ಧ ಲಸಿಕೆ ಕಂಡು ಹಿಡಿಯುವಲ್ಲಿ ಭಾರತ ಯಶಸ್ವಿಯಾಗಿದೆ. ದೇಶಿಯ ನಿರ್ಮಿತವಾದ ಭಾರತ್ ಬಯೋಟೆಕ್ನ ಕೊವಾಕ್ಸಿನ್ ಮತ್ತು ಪುಣೆ ಮೂಲದ-ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ತುರ್ತಾಗಿ ಬಳಸಲು ಅನುಮತಿ ಸಿಕ್ಕಿದೆ. ಈಗಾಗಲೇ ಎರಡನೇ ಹಂತದ ತಾಲೀಮಿನಲ್ಲಿ ಕೂಡ ಈ ಲಸಿಕೆಗಳು ಯಶಸ್ವಿಯಾಗಿದೆ. ಈ ಹಿನ್ನಲೆ ಸರ್ಕಾರ ಈಗ ದೇಶದ ನಿವಾಸಿಗಳಿಗೂ ಈ ಲಸಿಕೆ ವಿತರಣೆಗೆ ಮುಂದಾಗಿದೆ. ಇದೇ ಕಾರಣಕ್ಕೆ ಲಸಿಕೆ ವಿತರಣೆ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಈ ಕುರಿತು ಮಾರ್ಗಸೂಚಿ ನೀಡಿದ್ದಾರೆ.
ಜ. 16ರಂದು ರಾಜ್ಯದಲ್ಲಿ 235 ಕೇಂದ್ರಗಳಲ್ಲಿ ಲಸಿಕೆಈ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆಯಲ್ಲಿ ಈ ಲಸಿಕೆ ನೀಡಲಾಗುವುದು. ರಾಜ್ಯದ 16 ಲಕ್ಷ ಜನರಿಗೆ ಈ ಲಸಿಕೆ ನೀಡಲಾಗುವುದು. ಮೊದಲ ಲಸಿಕೆ ನೀಡಿದ 28ದಿನಗಳ ನಂತರ ಎರಡನೇ ಡೋಸ್ ಲಸಿಕೆ ವ್ಯವಸ್ಥೆ ಮಾಡಲಾಗುವುದು. ರಾಜ್ಯದ 235 ಕೇಂದ್ರಗಳಲ್ಲಿ ಈ ಲಸಿಕೆ ವಿತರಣೆಗೆ ವ್ಯವಸ್ಥೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ಡೋಸ್ನ ಲಸಿಕೆ
ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಪ್ರಧಾನಿಗಳು ಸಂವಾದದಲ್ಲಿ ಹಲವು ವಿಚಾರ ಹೇಳಿದ್ದಾರೆ. ಲಸಿಕೆ ಮೊದಲ ಡೋಸ್ ತೆಗೆದುಕೊಂಡ ಬಳಿಕ ಎರಡನೇ ಡೋಸ್ ಪಡೆಯಲು ಹೇಳಿದ್ದಾರೆ. 45 ದಿನಗಳ ಬಳಿಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಅನೇಕ ಕ್ಲಿನಿಕಲ್ ಪ್ರಯೋಗಗಳಾಗಿವೆ. ರಾಜ್ಯದಲ್ಲಿ ಲಸಿಕೆಗೆ ಎಲ್ಲ ವ್ಯವಸ್ಥೆಗಳೂ ಪೂರ್ಣಗೊಂಡಿದೆ. ರಾಜ್ಯಗಳಿಗೆ ಸದ್ಯದಲ್ಲೇ ಲಸಿಕೆ ಪೂರೈಕೆ ಆಗಲಿದೆ. ಆರೋಗ್ಯ ಮತ್ತು ಕೊರೋನಾ ವಾರಿಯರ್ಸ್ ಬಳಿಕ ವಯಸ್ಸಾದವರಿಗೆ, ಇತರೆ ಕಾಯಿಲೆ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದರು.
ಹಂತ ಹಂತವಾಗಿ ವಿತರಣೆ
ಲಸಿಕೆ ಶೇಖರಣೆಗೆ ಕೋಲ್ಡ್ ಸ್ಟೋರೇಜ್, ಹಂಚಿಕೆ, ವಿತರಣೆ, ನೀಡುವಿಕೆ ಸೇರಿದಂತೆ ಎಲ್ಲ ವ್ಯವಸ್ಥೆ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮೊದಲು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಬಳಿಕ ಐವತ್ತು ವರ್ಷ ಮೆಲ್ಪಟ್ಟವರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುವುದು. ನಂತರ ಹಂತ ಹಂತವಾಗಿ ಸಾಮಾನ್ಯ ಜನರಿಗೆ ಲಸಿಕೆ ವಿತರಣೆ ನಡೆಯಲಿದೆ.
ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಲಸಿಕೆ:
ದೇಶದಾದ್ಯಂತ ಲಸಿಕೆ ವಿತರಣೆ, ಸಿದ್ದತೆ ಕುರಿತು ಇಂದು ಮಾತನಾಡಿದ ಪ್ರಧಾನಿಗಳು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಈ ಲಸಿಕೆ ವಿತರಣೆ ಮಾಡುವುದಾಗಿ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ಆರೋಗ್ಯ ವಲಯದ ಸಿಬ್ಬಂದಿ, ಪೊಲೀಸರು, ಸಫಾಯಿ ಕಾರ್ಮಚಾರಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದರು. ಅವರ ಲಸಿಕೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು
Published by:
Seema R
First published:
January 11, 2021, 6:31 PM IST