ಬೆಂಗಳೂರು: ಚೀನಾದಲ್ಲಿ ಕೊರೊನಾ (Covid 19) ಹೆಮ್ಮಾರಿ ಅಬ್ಬರಿಸ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ (Karnataka Government) ಫುಲ್ ಅಲರ್ಟ್ ಆಗಿದೆ. ವಿಮಾನ ನಿಲ್ದಾಣದಲ್ಲಿ (Airport) ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಿಕರ (International Travelers) ಬಗ್ಗೆ ನಿಗಾವಹಿಸಲಾಗಿದ್ದು, ಕಳೆದ ಆರು ದಿನಗಳಿಂದ ಬಂದ ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಆದರೆ ರಾಜ್ಯದಲ್ಲಿ ಕೇವಲ ಶೇ.20 ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದುಕೊಂಡಿದ್ದು, ಉಳಿದವರು ಶೀಘ್ರವೇ ಬೂಸ್ಟರ್ ಡೋಸ್ (Covid Booster Dose) ಪಡೆದುಕೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Health Minister Dr. K Sudhakar) ಮನವಿ ಮಾಡಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದ್ದು, ಮತ್ತೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ನಡುವೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು, ಕೇಂದ್ರದ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ ಕೋವಿಡ್ ತಾಂತ್ರಿಕ ಸಮಿತಿ ಸಭೆಯನ್ನು ಕರೆದಿದ್ದಾರೆ.
ಕೊರೋನಾ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ
ಬೆಳಗಾವಿಯಲ್ಲಿ ಮಾತನಾಡಿರೋ ಸಿಎ ಬೊಮ್ಮಾಯಿ, ಕೊರೋನಾ ಬಗ್ಗೆ ರಾಜ್ಯ ಗಂಭೀರವಾಗಿ ತೆಗೆದುಕೊಂಡಿದೆ. ವಿಶ್ವಮಟ್ಟದಲ್ಲಿ ಏನ್ ಆಗ್ತಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ. ಯಾವ ರೀತಿ ನಿಯಂತ್ರಣ ಮಾಡಬೇಕು, ಯಾವ ರೀತಿ ಟೆಸ್ಟ್ಗಳನ್ನ ಹೆಚ್ಚಳ ಮಾಡಬೇಕು ಅನ್ನೋದ್ರ ಬಗ್ಗೆ ನಾಳೆ ವಿಶೇಷ ಸಭೆಯನ್ನ ಕರೆದಿದ್ದೇನೆ. ಇಲ್ಲೇ ಸುವರ್ಣ ಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಕೊರೊನಾ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಹೆಚ್ಚಾಗುತ್ತಿರುವುದು ನಮಗೆ ಎಚ್ಚರಿಕೆಯ ಗಂಟೆ.
ರಾಜ್ಯದಲ್ಲಿ ಈವರೆಗೂ ಕೇವಲ 20% ಜನರು ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡಿದ್ದು,ಎಲ್ಲರೂ ತಪ್ಪದೇ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡು ಈ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕಾಗಿ ಮನವಿ ಮಾಡುತ್ತೇನೆ.
1/2
— Dr Sudhakar K (@mla_sudhakar) December 21, 2022
ಮುಂಜಾಗ್ರತಾ ಕ್ರಮವಹಿಸಲು ಕೇಂದ್ರ ಸರ್ಕಾರದ ಮಹತ್ವದ ಸಭೆ
ಇನ್ನು, ಚೀನಾ ಸೇರಿ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ಸೋಂಕು ರಣಕೇಕೆ ಹಾಕ್ತಿದ್ದು, ಭಾರತದಲ್ಲಿ ಟೆನ್ಷನ್ ಶುರುವಾಗಿದೆ. ಭಾರತದಲ್ಲಿ ಕೊರೋನಾ ಏರಿಕೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದ ಮಹತ್ವದ ಸಭೆ ನಡೆಸಿತು. ಕೇಂದ್ರ ಆರೋಗ್ಯ ಸಚಿವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಎಲ್ಲಾ ರಾಜ್ಯ, ಕೇಂದ್ರಾಡಳಿ ರಾಜ್ಯಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಮತ್ತೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಸಭೆಯಲ್ಲಿ ಕರ್ನಾಟಕ ಪರವಾಗಿ ಆರೋಗ್ಯ ಇಲಾಖೆಯ ಅನಿಲ್ ಕುಮಾರ್ ಹಾಜರಾಗಿದ್ದರು.
ದೇಶದಲ್ಲಿ ಕೊರೊನಾ ಓಮೈಕ್ರಾನ್ ತಳಿ ಪತ್ತೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಮಾಹಿತಿ ನೀಡಿದ್ದು, ಕೊರೊನಾದ 10 ರೂಪಾಂತರಿ ತಳಿಗಳು ಪತ್ತೆಯಾಗಿವೆ. ದೇಶದಲ್ಲಿ ಕೋವಿಡ್ ವ್ಯಾಪಿಸದಂತೆ ಚೀನಾದಿಂದ ಬರುವ ಪ್ರಯಾಣಿಕರನ್ನ ಕಟ್ಟು ನಿಟ್ಟಿನ ತಪಾಸಣೆಗೊಳಪಡಿಸಲಾಗುತ್ತಿದೆ. ಸದ್ಯ ದೇಶದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತೇವೆ
ಕೋವಿಡ್ ರೂಪಾಂತರಿ ಕಂಡು ಬರುತ್ತಿರುವುದರಿಂದ ಎಲ್ಲಾ ಸೋಂಕಿತರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಒಳಪಡಿಸಲು ಕ್ರಮ ವಹಿಸಲಾಗಿದೆ. ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳು ಏರಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗದರ್ಶನ ಪಡೆದುಕೊಂಡು ಕ್ರಮ ವಹಿಸಲಾಗುವುದು. ಯಾವುದೇ ಪರಿಸ್ಥಿತಿ ಎದುರಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು, ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ