ಹುಬ್ಬಳ್ಳಿ (ಏ. 3): ಅವಳಿ ನಗರ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಮತ್ತೆ ಏರುಮುಖ ಕಂಡಿದೆ. ಒಂದಂಕಿಗೆ ಸೀಮಿತವಾಗಿದ್ದ ಸೋಂಕಿತರ ಸಂಖ್ಯೆ ಎರಡಂಕಿಗೆ ಏರಿದೆ. ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತಿಬ್ಬರು ಬಲಿಯಾಗಿದ್ದು, ಮೃತರ ಸಂಖ್ಯೆ 628 ಕ್ಕೆ ಏರಿದೆ. ಜಿಲ್ಲೆಯಲ್ಲಿ ಮತ್ತೆ 62 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 23098 ಕ್ಕೆ ಏರಿದೆ. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕಾಲೇಜು ಬಂದ್ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಲಾರಂಭಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ 15 ಕೊವಿಡ್ ಕೇಸ್ ಪತ್ತೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಾಲೇಜ್ ಬಂದ್ ಮಾಡಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ಹಿನ್ನೆಲೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಮೊದಲು ಕಾಲೇಜಿನ ವಸತಿ ನಿಲಯದಲ್ಲಿ ಓರ್ವ ವಿದ್ಯಾರ್ಥಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ನಂತರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಿದ್ಯಾನಿಕೇತನ ಕಾಲೇಜಿನ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಮತ್ತಷ್ಟು ವಿದ್ಯಾರ್ಥಿಗಳಿಗೆ ಹರಡೋ ಭೀತಿ ಎದುರಾಗಿದೆ. ಕಾಲೇಜಿನ ಓರ್ವ ವಿದ್ಯಾರ್ಥಿಯಿಂದ ಇತರೆ ವಿದ್ಯಾರ್ಥಿಗಳಿಗೆ ಸೋಂಕು ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಧಾರವಾಡ ಡಿಸಿ ನಿತೇಶ್ ಪಾಟೀಲ್, ಧಾರವಾಡ ಜಿಲ್ಲೆಯ ಶೇ. 70 ರಷ್ಟು ಕೊವಿಡ್ ಕೇಸ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿವೆ. ಶೇ 20 ರಷ್ಟು ಪ್ರಕರಣಗಳು ಧಾರವಾಡದಲ್ಲಿ ಕಂಡುಬಂದಿದೆ. ಉಳಿದ ತಾಲೂಕುಗಳ ಲ್ಲಿ ಶೇ.10 ರಷ್ಟು ಪ್ರಕರಣಗಳು ಕಂಡುಬಂದಿವೆ. ಧಾರವಾಡ ದ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿಯೂ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಸಾಮಾಜಿಕ ಅಂತರ ಕಾಪಾಡದ ಕಡೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. 15 ಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಕೋವಿಡ್ ಎರಡನೆ ಅಲೆ ಹೆಚ್ಚಾಗಲಾರಂಭಿಸಿದೆ. ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಡಿಸಿ ನಿತೇಶ್ ಪಾಟೀಲ ಸೂಚನೆ ನೀಡಿದ್ದಾರೆ.
ಕೋವಿಡ್ ಎರಡನೇ ಅಲೆ ಅಬ್ಬರ ಹಿನ್ನೆಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದೇ ವೇಳೆ ಧಾರವಾಡ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರ ಕೋವಿಡ್ ಹೊಸ ಮಾರ್ಗಸೂಚಿಗಳ ಬಿಡುಗಡೆ ಮಾಡಿದೆ.
ಧಾರವಾಡ ಸೇರಿ ಎಂಟು ಜಿಲ್ಲೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬಾರ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರ ಸಂಖ್ಯೆ ಶೇ. 50 ರಷ್ಟು ಮೀರದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶದಿಂದ ಬಾರ್, ರೆಸ್ಟೋರೆಂಟ್, ಪಬ್ ಗಳ ಮಾಲೀಕರು ಶಾಕ್ ಆಗಿದ್ದಾರೆ. ಹುಬ್ಬಳಿ ಬಾರ್, ರೆಸ್ಟೋರೆಂಟ್ ಮತ್ತು ಪಬ್ ಮಾಲೀಕರು ಶಾಕ್ ಆಗಿದ್ದಾರೆ. ಈಗಾಗಲೇ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಿದೇವೆ. ಕೋವಿಡ್ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಶೇ 40 ರಿಂದ 50 ರಷ್ಟು ಮಾತ್ರವಿದೆ.
ಹೊಸ ಮಾರ್ಗಸೂಚಿಗೆ ಜಿಮ್ ಮಾಲೀಕರ ಅಸಮಾಧಾನ.
ಕೋವಿಡ್ ಎರಡನೇ ಅಲೆ ಅಬ್ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜಿಮ್, ಫಿಟ್ನೆಸ್ ಸೆಂಟರ್, ಸ್ವಿಮಿಂಗ್ ಪೂಲ್ ಗಳಿಗೂ ಬಿಸಿ ತಟ್ಟಿದ. ಧಾರವಾಡ ಜಿಲ್ಲೆಯಲ್ಲಿಯೂ ಜಿಮ್ ಗಳ ಬಂದ್ ಗೆ ಆದೇಶ ನೀಡಲಾಗಿದ್ದು ಜಿಮ್ ಮಾಲೀಕರು, ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾತ್ರಿ ಆದೇಶದಿಂದಾಗಿ ಜಿಮ್ ಮಾಲೀಕರು ಮತ್ತು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಸರ್ಕಾರದ ಆದೇಶ ಗೊತ್ತಿಲ್ಲದೆ ಹುಬ್ಬಳ್ಳಿಯಲ್ಲಿ ಜನ ಜಿಮ್ ಗಳಿಗೆ ಬಂದಿದ್ದಾರೆ. ಹೀಗೆ ದಿಢೀರ್ ಆದೇಶ ಮಾಡಿದರೆ ಹೇಗೆ ಎಂದು ನಾಗರೀಕರು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆ ನಡೀತಿದೆ. ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅಲ್ಲಿ ಅಬ್ಬರದ ಪ್ರಚಾರ ನಡೀತಿದೆ. ಆದರೆ ಅದ್ಯಾವುದಕ್ಕೂ ನಿರ್ಬಂಧಗಳಿಲ್ಲ. ಫಿಟ್ನೆಸ್ ಗೆ ಅವಶ್ಯವಿರೋ ಜಿಮ್ ಬಂದ್ ಮಾಡಿಸೋದು ಸರಿಯಲ್ಲ ಎಂದು ನಾಗರೀಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಿಮ್ ಗೆ ಬರೋರ ಸಂಖ್ಯೆ ಕಡಿಮೆಯಾಗಿದೆ. ಇದೀಗ ಸಂಪೂರ್ಣ ಮುಚ್ಚುವಂತೆ ಹೇಳಿರೋದ್ರಿಂದ ಜಿಮ್ ಗಳು ನೆಲಕಚ್ಚೋದು ಖಚಿತ. ಹೀಗಾಗಿ ಜಿಮ್, ಸ್ವಿಮಿಂಗ್ ಪೂಲ್ ಬಂದ್ ವಿಚಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರು, ಜಿಮ್ ಮಾಲೀಕರು ಆಗ್ರಹಿಸಿದ್ದಾರೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ