news18-kannada Updated:January 19, 2021, 10:41 PM IST
ಸಚಿವ ಕೆ.ಸುಧಾಕರ್
ಹುಬ್ಬಳ್ಳಿ(ಜ.19): ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತವಾದ ಲಸಿಕೆಯಾಗಿದ್ದು ಯಾವುದೇ ಆತಂಕ ಬೇಡ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ ಹೇಳಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಕೋವ್ಯಾಕ್ಸಿನ್ ಸಾಕಷ್ಟು ಕ್ಲಿನಿಕಲ್ ಟ್ರೈಲ್ ಆದ ಬಳಿಕವೇ ವ್ಯಾಕ್ಸಿನೇಷನ್ಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಮೇಲೆ ಕ್ಲಿನಿಕಲ್ ಟ್ರೈಲ್ ನಡೆಸಿರುವ ಮಾಹಿತಿ ಇದೆ. ನನ್ನ ಮಾಹಿತಿ ಪ್ರಕಾರ ಮೂರನೇ ಹಂತದ ಕ್ಲಿನಿಕಲ್ ಟ್ರೈಲ್ ಆಗಿದೆ. ಕೋವಿಶಿಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದನ್ನು ಬೇಕಾದ್ರು ತೆಗದುಕೊಳ್ಳಬಹುದು. ಇಂತಹದೇ ತೆಗೆದುಕೊಳ್ಳಬೇಕು ಎಂಬ ಯಾವುದೇ ಒತ್ತಡ ಇಲ್ಲ. ಕೋವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುತ್ತಿಲ್ಲ. ಕೊವ್ಯಾಕ್ಸಿನ್ ಬೇಡ ಎನ್ನುವವರು ತೆಗೆದುಕೊಳ್ಳುವುದು ಬೇಡ ಎಂದವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸ್ಸಿ ಅಗಲಿದ್ದಾರೆ ಎಂಬ ಡಿಕೆಶಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು.? ನಿಷ್ಕ್ರಿಯವಾಗಿರುವ ರಾಜಕಾರಣಿಗಳು ಕಾಂಗ್ರೆಸ್ ಸೇರ್ಪಡೆ ಆಗಬಹುದು, ಆದರೆ ನಾವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದದರ್ಜೆಗೆ: 24*7 ಆರೋಗ್ಯ ಸೇವೆ ಲಭ್ಯ
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಪ್ರತಿ ಕೇಂದ್ರಕ್ಕೆ ಒಬ್ಬ ಆಯುಷ್ಯ ವೈದ್ಯಾಧಿಕಾರಿ ಸೇರಿದಂತೆ ಮೂರು ವೈದ್ಯಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಹೇಳಿದರು.
ಶಿಥಿಲಾವಸ್ಥೆಯಲ್ಲಿದ್ದ ಗಡಿ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟ ಯುವ ಬ್ರಿಗೇಡ್
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕಿಮ್ಸ್, ಡಿಮ್ಹಾನ್ಸ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಮೂರು ಸ್ತರದ ಆರೋಗ್ಯ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. 24*7 ಪ್ರಾಥಮಿಕ ಆರೋಗ್ಯ ಕೇಂದ್ರ ಕರ್ತವ್ಯ ನಿರ್ವಹಿಸಲಿವೆ. 2500 ವೈದ್ಯರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಗ್ರೂಪ್ ಡಿ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆಯಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.ಉತ್ಕೃಷ್ಟ ಆರೋಗ್ಯ ಸೇವೆಯ ಜೊತೆಗೆ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ. ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವಿಮಾ ಯೋಜನೆಯಡಿ ಹೆಚ್ಚಿನ ಗುರಿಯನ್ನು ಆರೋಗ್ಯ ಕೇಂದ್ರಗಳಿಗೆ ನಿಗದಿ ಮಾಡಲಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಮಾಹಿತಿಯನ್ನು ಡಿಜಿಟಲೀಕರಣದ ರೂಪದಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂದು ಹೇಳಿದರು.
ಕಿಮ್ಸ್ ನಲ್ಲಿ ಅಂಗಾಂಗ ಕೇಂದ್ರ ಸ್ಥಾಪನೆ
ಉತ್ತರ ಕರ್ನಾಟಕ ಸಂಜೀವಿನಿ ಎನಿಸಿರುವ ಕಿಮ್ಸ್ ನಲ್ಲಿ ಅಂಗಾಂಗ ದಾನ ಮಾಡುವುದರಿಂದ ಉಪಯುಕ್ತ ಅಂಗಗಳನ್ನು ಪಡೆದು, ಇತರರಿಗೆ ಅಳವಡಿಸಲು ಅನುಕೂಲವಾಗುವಂತೆ ಅಂಗಾಂಗ ಕೇಂದ್ರ ಸ್ಥಾಪನೆ ಮಾಡಲಾಗುವದು. ಮರಣದ ನಂತರ ಅಂಗಗಳನ್ನು ದಾನ ಮಾಡುವಂತೆ ಜನರನ್ನು ಓಲೈಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಿಮ್ಸ್ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾಲೂಕು ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು,
ಜಿಲ್ಲೆಯಲ್ಲಿ ಶಿಶು ಹಾಗೂ ತಾಯಿಂದರ ಮರಣ ಪ್ರಮಾಣ ಉಳಿದ ಜಿಲ್ಲೆಗಳಿಗಿಂತ ಜಾಸ್ತಿಯಿದೆ. ಆರೋಗ್ಯ ಮತ್ತು ಕುಟುಂಬಕ್ಕೆ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಹಾಗೂ ಕಬ್ಬಿಣ ಅಂಶದ ಮಾತ್ರೆಗಳನ್ನು ಗರ್ಭಿಣಿಯರಿಗೆ ಸರಿಯಾಗಿ ವಿತರಣೆ ಮಾಡಲು ನಿರ್ದೇಶನ ನೀಡಿದ್ದೇನೆ. ಆಹಾರ ಸಂರಕ್ಷಣೆ ಅಧಿಕಾರಿ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಶುಚಿತ್ವ, ಔಷಧ ವಿತರಣೆ ಬಗ್ಗೆ ನಿಯಂತ್ರಣ ವಹಿಸುವಂತೆ ನಿರ್ದೇಶನ ನೀಡಿದ್ದೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಹೇಳಿದರು.
Published by:
Latha CG
First published:
January 19, 2021, 10:41 PM IST