ಬೆಂಗಳೂರು: ಮಾಜಿ ಶಾಸಕ ವೈ ಎಸ್ ವಿ ದತ್ತಾ (YSV Datta) ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ (Special Courts for MP/MLA) ಜಾಮೀನು ರಹಿತ ಬಂಧನ ವಾರೆಂಟ್ (Arrest warrant) ಜಾರಿಗೊಳಿಸಿದೆ. ಸಿ.ಎಸ್ ಸೋಮೇಗೌಡ ಎಂಬವರು ದಾಖಲಿಸಿರುವ ಖಾಸಗಿ ದೂರಿನ ಅರ್ಜಿ ಪರಿಶೀಲನೆ ನಡೆಸಿದ ನಗರದ 42ನೇ ಎಸಿಎಂಎಂ ಕೋರ್ಟ್ (ACMM Court) ನ್ಯಾಯಾಧೀಶೆ ಜೆ.ಪ್ರೀತ್ ಅವರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ವೈ ಎಸ್ ವಿ ದತ್ತಾ ಅವರ ವಿರುದ್ಧ ಸೋಮೇಗೌಡ ಅವರು ಚೆಕ್ ಬೌನ್ಸ್ ಪ್ರಕರಣ (Check Bounce Case) ದಾಖಲು ಮಾಡಿದ್ದರು, ಅರ್ಜಿಯ ವಿಚಾರಣೆಗೆ ಮಾಜಿ ಶಾಸಕರು ಕೋರ್ಟಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ವಾರೆಂಟ್ ಹೊರಡಿಸಲಾಗಿದೆ. ಮಾರ್ಚ್ 27ಕ್ಕೆ ವೈ ಎಸ್ ವಿ ದತ್ತಾ ಅವರನ್ನು ಹಾಜರುಪಡಿಸಲು ಬೆಂಗಳೂರು ಉತ್ತರ ಡಿಸಿಪಿ (Bengaluru North DCP) ಅವರಿಗೆ ಕೋರ್ಟ್ ಸೂಚನೆ ನೀಡಿದೆ.
ಕೆಂಪಣ್ಣ ಸೇರಿ 18 ಮಂದಿ ಗುತ್ತಿಗೆದಾರರ ಸಮನ್ಸ್ ರದ್ದು
ಇನ್ನೊಂದು ಪ್ರಕರಣದಲ್ಲಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ದ ಕೆಂಪಣ್ಣ ಸೇರಿ 18 ಮಂದಿ ಗುತ್ತಿಗೆದಾರರ ಸಮನ್ಸ್ ರದ್ದು ಪಡಿಸಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಗುತ್ತಿಗೆದಾರರಿಂದ ಕಮಿಷನ್ ಪಡೆದ ಬಗ್ಗೆ ಆರೋಪ ಮಾಡಿದ್ದ ಪ್ರಕರಣದಲ್ಲ ಮ್ಯಾಜಿಸ್ಟ್ರೇಟ್ ಕೋರ್ಟ್ ಕೆಂಪಣ್ಣ ಸೇರಿ 18 ಮಂದಿ ಗುತ್ತಿಗೆದಾರರ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು. ಇದರ ಅನ್ವಯ ಪೊಲೀಸರು ಬಂಧನ ಪ್ರತಿಕ್ರಿಯೆ ನಡೆಸಿದ್ದರು. ಆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದ ಕೆಂಪಣ್ಣ ಅವರು, ಸಮನ್ಸ್ ರದ್ದು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಸದ್ಯ 59ನೇ ಸೆಷನ್ಸ್ ಕೋರ್ಟಿನ ನ್ಯಾ.ಕೃಷ್ಣಯ್ಯ ಅವರು ಮಹತ್ವದ ಆದೇಶ ನೀಡಿದ್ದು, ಕೆಂಪಣ್ಣ ಸೇರಿ ಎಲ್ಲಾ ಆರೋಪಿಗಳ ಸಮನ್ಸ್ ರದ್ದು ಮಾಡಿದ್ದಾರೆ.
ಏನಿದು ಪ್ರಕರಣ?
ರಾಜ್ಯ ತೋಟಗಾರಿಕೆ ಮತ್ತು ಯೋಜನಾ ಸಚಿವರಾದ ಮುನಿರತ್ನ ಅವರ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೇ.40 ಕಮಿಷನ್ ಆರೋಪ ಮಾಡಿದ್ದರು. ಆರೋಪ ವಿರುದ್ಧ ಸಚಿವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಡಿಸೆಂಬರ್ 19 ರಂದು ಪ್ರಕರಣವನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ ಶೀವಕುಮಾರ್ ಅವರು ವಿಚಾರಣೆ ನಡೆಸಿದ್ದರು. ಅಲ್ಲದೇ ಈ ಸಂಬಂಧ ಕೆಂಪಣ್ಣ ಸೇರಿದಂತೆ 18 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
ಆರೋಪ ಕೇಳಿ ಬಂದ ಬಳಿಕ ಮಾತನಾಡಿದ್ದ ಸಚಿವ ಮುನಿರತ್ನ ಅವರು, ಗುತ್ತಿಗೆದಾರರ ಸಂಘದವರು ಒಂದು ವರ್ಷಗಳಿಂದ ಸರ್ಕಾರ ಹಾಗೂ ಸಚಿವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿಕೊಂಡು ಬರ್ತಿದ್ದಾರೆ. ಬಳಿಕ ಮುಖ್ಯಮಂತ್ರಿಗಳೇ ಅವರನ್ನು ಕರೆದು ಮಾತಾಡಿದರೂ ಅವರು ಆರೋಪ ಮಾಡಿದ್ದನ್ನು ಬಿಟ್ಟಿಲ್ಲ. ವಿಪಕ್ಷ ನಾಯಕರ ಮನೆಗೆ ಹೋಗಿ, ನನ್ನ ಮೇಲೆ ಆರೋಪ ಮಾಡಿದ್ದಾರೆ.
ನಾನು ದೆಹಲಿ ಪ್ರವಾಸ ಸಂದರ್ಭದಲ್ಲಿ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಹೇಳಿದ್ದೆ. ಆ ಮೇಲೆ ಕೆಂಪಣ್ಣ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಿ ಎಂದು ಕೇಳಿದ್ದೆವು. ಆದರೆ 7 ದಿನಗಳ ಕಾಲಾವಕಾಶ ಕೊಟ್ಟರು ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರು ಎಲ್ಲಿಯೂ ದಾಖಲೆ ಕೊಡುವ ಕೆಲಸ ಮಾಡಿಲ್ಲ. ಅವರು ಕ್ಷಮೆನೂ ಕೇಳಿಲ್ಲ, ನಾನು ಕಳೆದ ತಿಂಗಳ 29ಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದೆ. ಆದರೆ ಅವರು ದಾಖಲೆ ಬಿಡುಗಡೆ ಮಾಡದೆ ಇರೋದಕ್ಕೆ 30ಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ಇವಾಗ ಅವರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ