ಸಚಿವ ಮುನಿರತ್ನ (Minister Muniratna) ವಿರುದ್ಧ 40% ಕಮಿಷನ್ (40 Percent Commission Allegation) ಆರೋಪದಡಿ ಅರೆಸ್ಟ್ ಆಗಿದ್ದ ನಾಲ್ವರಿಗೂ ಜಾಮೀನು (Bail) ಮಂಜೂರಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna), ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಕೋರ್ಟ್ ಮುಂದೆ ಹಾಜರಾಗಬೇಕಿತ್ತು. ಆದ್ರೆ ಅವರು ಹಾಜರಾಗಿರಲಿಲ್ಲ. NBW ಜಾರಿಯಾಗಿತ್ತು. ಎನ್ಬಿಡಬ್ಲೂ (Non Bailable Warrants) ಸಂಬಂಧ ನಾಲ್ವರನ್ನ ಬಂಧಿಸಿ ಕೋರ್ಟ್ ಗೆ ಸರೆಂಡರ್ ಮಾಡಲಾಗಿತ್ತು. ಬೇಲ್ ಎಬೆಲ್ ಅಫೆನ್ಸ್ (Bailable Offence) ಆಗಿರುವ ಕಾರಣ ನಾಲ್ವರಿಗೆ ಜಾಮೀನು ಸಿಕ್ಕಿದೆ ಎಂದು ಮುನಿರತ್ನ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ಹೇಳಿದ್ದಾರೆ.
40% ಕಮಿಷನ್ ಆರೋಪ ವಿಚಾರದಲ್ಲಿ 19 ಮಂದಿಯ ವಿರುದ್ಧ ಸಚಿವ ಮುನಿರತ್ನ ಕ್ರಿಮಿನಲ್ ಹಾಗೂ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿಂದೆ ಪ್ರಕರಣ ಸಂಬಂಧ ವಾರಂಟ್ ಜಾರಿಯಾಗಿತ್ತು.
ನಿನ್ನೆ ರಾತ್ರಿ ಬಂಧನ
ಡಿಸೆಂಬರ್ 19ರಂದು 8ನೇ ಎಸಿಎಂಎಂ ಕೋರ್ಟ್, ಕೆಂಪಣ್ಣ ಸೇರಿ 19 ಮಂದಿ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ನೀಡಿತ್ತು. ನಿನ್ನೆ ರಾತ್ರಿ ಕೆಂಪಣ್ಣ, ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದರು.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಮಗಳ ಮನೆಯಲ್ಲಿದ್ದ ಕೆಂಪಣ್ಣ, ಕೋಲಾರದಲ್ಲಿದ್ದ ಕೃಷ್ಣಾ ರೆಡ್ಡಿ, ನಾಗರಬಾವಿಯಲ್ಲಿದ್ದ ನಟರಾಜು ಮತ್ತು ರಾಜಾಜಿ ನಗರದಲ್ಲಿದ್ದ ಗುರುಸಿದ್ದಪ್ಪ ಅವರನ್ನು ಬಂಧಿಸಲಾಗಿತ್ತು.
ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂಧನ ಕಾರ್ಯಾಚರಣೆ ಮಾಡಲಾಗಿತ್ತು. ಕೆಂಪಣ್ಣ ಸೇರಿ ಮೂವರನ್ನ ಬಂಧಿಸಿ ಶೇಷಾದ್ರಿಪುರಂ ಎಸಿಪಿ ಅವರು ಮೂವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಏನಿದು ಪ್ರಕರಣ?
ರಾಜ್ಯ ತೋಟಗಾರಿಕೆ ಮತ್ತು ಯೋಜನಾ ಸಚಿವರಾದ ಮುನಿರತ್ನ ಅವರ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೇ.40 ಕಮಿಷನ್ ಆರೋಪ ಮಾಡಿದ್ದರು. ಆರೋಪ ವಿರುದ್ಧ ಸಚಿವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.
ಡಿಸೆಂಬರ್ 19 ರಂದು ಪ್ರಕರಣವನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಅವರು ವಿಚಾರಣೆ ನಡೆಸಿದ್ದರು. ಅಲ್ಲದೇ ಈ ಸಂಬಂಧ ಕೆಂಪಣ್ಣ ಸೇರಿದಂತೆ 18 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರು.
ಇದನ್ನೂ ಓದಿ: 40% Commission: ಬಿಜೆಪಿ ಸರ್ಕಾರದಲ್ಲಿ ಶರವೇಗದ ಕಮಿಷನ್; ಸಿದ್ದರಾಮಯ್ಯ ಆಕ್ರೋಶ, ತನಿಖೆಗೆ ಆಗ್ರಹ
ಮುನಿರತ್ನ ಹೇಳಿಕೆ
ಆರೋಪ ಕೇಳಿ ಬಂದ ಬಳಿಕ ಮಾತನಾಡಿದ್ದ ಸಚಿವ ಮುನಿರತ್ನ ಅವರು, ಗುತ್ತಿಗೆದಾರರ ಸಂಘದವರು ಒಂದು ವರ್ಷಗಳಿಂದ ಸರ್ಕಾರ ಹಾಗೂ ಸಚಿವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿಕೊಂಡು ಬರ್ತಿದ್ದಾರೆ.
ಬಳಿಕ ಮುಖ್ಯಮಂತ್ರಿಗಳೇ ಅವರನ್ನು ಕರೆದು ಮಾತಾಡಿದ್ರು, ಆದ್ರೂ ಅವರು ಆರೋಪ ಮಾಡೋದ್ದನ್ನು ಬಿಟ್ಟಿಲ್ಲ. ಇವಾಗ ವಿಪಕ್ಷ ನಾಯಕರ ಮನೆಗೆ ಹೋಗಿ, ನನ್ನ ಮೇಲೆ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ್ದ ಸಚಿವ ಮುನಿರತ್ನ
ತಮ್ಮ ವಿರುದ್ಧ ಸಾಕ್ಷ್ಯಾಧಾರ, ದಾಖಲೆಗಳಿಲ್ಲದೆ ಶೇಕಡ 40ರಷ್ಟು ಲಂಚ ಪಡೆದ ಅರೋಪ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದಾಖಲೆರಹಿತವಾಗಿ ತಮ್ಮ ವಿರುದ್ಧ ಅರೋಪ ಮಾಡಿ ಹಿಂಬಾಗಿಲಿನಿಂದ ಓಡಿ ಹೋಗುತ್ತಿದ್ದಾರೆ.
ಸಿದ್ದರಾಮಯ್ಯ (Former CM Siddaramaiah) ಮತ್ತು ನನ್ನ ವಿರುದ್ಧ ಅರೋಪಗಳನ್ನು ಮಾಡುತ್ತಿರುವವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿದರೆ ವಿಚಾರಣೆ ಎದುರಿಸುತ್ತೇನೆ. ಅವರು ದಾಖಲೆ ನೀಡದಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇನೆ, ಸೆರೆಮನೆಗೆ ಹೋಗಲು ಅವರು ತಯಾರಾಗಿರಲಿ ಎಂದು ಸವಾಲು ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ