ಚಾಮರಾಜನಗರ: ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಾಮಾಜಿಕ ಬಹಿಷ್ಕಾರದಂತಹ (Boycott) ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ದೂರವಾಗಿಲ್ಲ. ಗಡಿನಾಡು ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳು ಈ ಅನಿಷ್ಠ ಪದ್ಧತಿಗೆ ಸಿಲುಕಿ ಪರಿತಪಿಸುತ್ತಿವೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಳಕಿಗೆ ಬಂದಿದ್ದು, ಅಂತರ್ಜಾತಿ ವಿವಾಹವಾದ (Intercaste Marriage) ಕುಟುಂಬವೊಂದಕ್ಕೆ 6 ಲಕ್ಷ ರೂಪಾಯಿ ದಂಡ ವಿಧಿಸಿ, ಕುಟುಂಬವನ್ನು ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ. ಕೇರಳ ಹಾಗೂ ತಮಿಳುನಾಡು (Tamil Nadu) ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತವಾಗಿದ್ದರೂ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಮಾತ್ರ ಕಳಚಿಲ್ಲ. ಮೂಢನಂಬಿಕೆ, ಬಾಲ್ಯ ವಿವಾಹ ಸಾಮಾಜಿಕ ಬಹಿಷ್ಕಾರದಂತಹ ಕೆಲವು ಅನಿಷ್ಠ ಪದ್ಧತಿಗಳಿಂದ ಜನ ಇನ್ನೂ ಹಿಂದುಳಿದಿದ್ದಾರೆ.
ಸಮುದಾಯದಿಂದ ಸಾಮಾಜಿಕ ಬಹಿಷ್ಕಾರ
ಚಾಮರಾಜನಗರದಲ್ಲಿ ಇಂದಿಗೂ ಸಹ ಸಾಮಾಜಿಕ ಬಹಿಷ್ಕಾರದಂತಹ ದರಿದ್ರ ಪದ್ಧತಿಗಳು ಜೀವಂತವಾಗಿ ಇವೆ. ಅದೆಷ್ಟೋ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ಅದರಿಂದ ಹೊರಬರಲಾಗದೆ ಪರಿತಪಿಸುತ್ತಿವೆ.ಇದೀಗ ಕೊಳ್ಳೇಗಾಲ ತಾಲೂಕಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಅಂತರ್ಜಾತಿ ವಿವಾಹವಾಗಿದ್ದಕ್ಕೆ ಉಪ್ಪಾರ ಸಮುದಾಯದ ಕುಟುಂಬವೊಂದಕ್ಕೆ ಅದೇ ಸಮುದಾಯದವರು ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ.
ತಾಲೂಕಿನ ಕುಣಗಳ್ಳಿ ಉಪ್ಪಾರ ಸಮುದಾಯದ ಗೋವಿಂದಶೆಟ್ಟಿ ಎಂಬುವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಯ ಶ್ವೇತ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮಳವಳ್ಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನೋಂದಣಿ ಆಗಿದೆ. ಈ ದಂಪತಿ ಮಳವಳ್ಳಿಯಲ್ಲಿ ವಾಸವಿದ್ದರು.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಡ
ಗೋವಿಂದಶೆಟ್ಟಿ ಅಂತರ್ಜಾತಿ ವಿವಾಹವಾಗಿರುವ ಬಗ್ಗೆ ತಿಳಿದ ಕುಣಗಳ್ಳಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ 2018ರಲ್ಲೇ 1 ಲಕ್ಷ 25 ಸಾವಿರ ರೂಪಾಯಿ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ದಂಡ ಪಾವತಿಸಿದ ಗೋವಿಂದರಾಜು ಮತ್ತೆ ಗ್ರಾಮಕ್ಕೆ ಬರದೆ ಮಳವಳ್ಳಿಯಲ್ಲೇ ವಾಸವಿದ್ದರು.
ಊರಿಗೆ ಮತ್ತೆ ಬಂದಿದ್ದಕ್ಕೆ 3 ಲಕ್ಷ ದಂಡ
ಇತ್ತೀಚೆಗೆ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಗೋವಿಂದರಾಜು ದಂಪತಿ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಈ ಮಾಹಿತಿ ಅರಿತ ಗ್ರಾಮದ ಯಜಮಾನರು, ಊರಿಗೆ ಬಂದು ಜಾತಿ ಕೆಡಿಸುತ್ತಿದ್ದಾರೆ ಎಂದು ಗೋವಿಂದಶೆಟ್ಟಿ ಅವರ ತಂದೆ ವೆಂಕಟಶೆಟ್ಟಿ ತಾಯಿ ಸಂಗಮ್ಮ ಹಾಗೂ ದಂಪತಿಗೆ ಮತ್ತೆ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಮಾರ್ಚ್ 3 ರೊಳಗೆ ದಂಡದ ಹಣ ಪಾವತಿಸುವಂತೆ ಸೂಚಿಸಿದ್ದಾರೆ.
ದೂರು ನೀಡಿದ್ದಕ್ಕೆ ದಂಡದ ಮೊತ್ತ ಡಬಲ್
ಆದರೆ ಗೋವಿಂದರಾಜು ದಂಡ ಪಾವತಿಸಲು ಸಾಧ್ಯವಾಗದೆ ಕೊಳ್ಳೇಗಾಲ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದರು. ತಮ್ಮ ವಿರುದ್ದ ದೂರು ನೀಡಿದ ಕಾರಣ ಸಮುದಾಯದ ಯಜಮಾನರು ದಂಡದ ಮೊತ್ತವನ್ನು 6 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡುವಂತಿಲ್ಲ, ಅಂಗಡಿ ಗಳಲ್ಲಿ ದಿನಸಿ ಹಾಲು, ತರಕಾರಿ ಖರೀದಿಸುವಂತಿಲ್ಲ, ನಲ್ಲಿಯಲ್ಲಿ ನೀರನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಗೋವಿಂದರಾಜು ಆರೋಪಿಸಿದ್ದಾರೆ.
ಸುಳ್ಳು ಆರೋಪ ಎಂದ ಗ್ರಾಮಸ್ಥರು
ಆದರೆ ತಾವು ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ ಗೋವಿಂದರಾಜುವನ್ನು ಅವರ ತಂದೆಯೇ ಮನೆಗೆ ಸೇರಿಸುತ್ತಿಲ್ಲ. ಹಾಗಾಗಿ ತಂದೆಯ ಮೇಲೆ ದೂರು ನೀಡುವ ಬದಲು ತಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಉಪ್ಪಾರ ಸಮುದಾಯದ ಯಜಮಾನರು ಪ್ರತ್ಯಾರೋಪ ಮಾಡುತ್ತಿದ್ದಾರೆ
15 ಮಂದಿ ವಿರುದ್ಧ ದೂರು
ಗೋವಿಂದರಾಜು ತಮಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಗ್ರಾಮದ ಉಪ್ಪಾರ ಸಮುದಾಯದ ಯಜಮಾನರು ಸೇರಿದಂತೆ 15 ಮಂದಿಯ ಮೇಲೆ ಎಫ್ಐಆರ್ ದಾಖಲಿಸಿದ್ದು ಕಾನೂನು ಕ್ರಮ ಜರುಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ