ಹುಟ್ಟು ಹಬ್ಬದ ದಿನದಂದೇ ದೇಹದಾನ ; ಅರುಣ ಕುಲಕರ್ಣಿ ದಂಪತಿಗಳ ಕಾರ್ಯಕ್ಕೆ ಮೆಚ್ಚುಗೆ

ಇಂದು ಅರುಣ ಕುಲಕರ್ಣಿ ಅವರ ಹುಟ್ಟು ಹಬ್ಬವಾಗಿದ್ದು, 54 ವಸಂತ ಪೂರೈಸಿ, 55 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಡನ ಜೊತೆ ಹೆಂಡತಿಯೂ ದೇಹದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.

ದೇಹದಾನ ದಾಖಲೆ ಹಸ್ತಾಂತರ

ದೇಹದಾನ ದಾಖಲೆ ಹಸ್ತಾಂತರ

  • Share this:
ಕಲಬುರ್ಗಿ (ಡಿಸೆಂಬರ್​. 29): ಯಾರದ್ದಾದರೂ ಹುಟ್ಟು ಹಬ್ಬಕ್ಕೆ ಬೇರೆಯವರು ಶುಭ ಕೋರಿ ನೆನಪಿನ ಕಾಣಿಕೆ ನೀಡುವುದು ವಾಡಿಕೆ. ಆದರೆ ಕಲಬುರ್ಗಿಯಲ್ಲಿ ದಂಪತಿಗಳು ಹುಟ್ಟು ಹಬ್ಬದ ದಿನದಂದು ತಮ್ಮ ದೇಹ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರೆಲ್ಲರನ್ನೂ ಒಪ್ಪಿಸಿ, ಕಲಬುರ್ಗಿಯ ಎಂ.ಆರ್.ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಿದ್ದಾರೆ.  ವೈದ್ಯಕೀಯ ಪ್ರತಿನಿಧಿ (ಮೆಡಿಕಲ್ ರೆಪ್) ಹಾಗೂ ಬಿಜೆಪಿ ಮಾಧ್ಯಮ ವಕ್ತಾರ ಅರುಣ ಕುಲಕರ್ಣಿ ಮತ್ತು ವಿಜಯಲಕ್ಷ್ಮಿ ಅವರು ದೇಹದಾನ ಮಾಡಿದ ದಂಪತಿಗಳಾಗಿದ್ದಾರೆ. ಇಂದು ಅರುಣ ಕುಲಕರ್ಣಿ ಅವರ ಹುಟ್ಟು ಹಬ್ಬವಾಗಿದ್ದು, 54 ವಸಂತ ಪೂರೈಸಿ, 55 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಡನ ಜೊತೆ ಹೆಂಡತಿಯೂ ದೇಹದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಲಬುರ್ಗಿಯ ಎಂ.ಆರ್.ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಲಾಗಿದೆ. ದೇಹದಾನ ದಾಖಲೆಗಳಿಗೆ ಸಹಿ ಹಾಕಿರುವ ದಂಪತಿಗಳು, ಎಂ.ಆರ್.ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ವೀರಭದ್ರ ನಂದ್ಯಾಳ ಅವರಿಗೆ ದಾಖಲೆ ಹಸ್ತಾಂತರ ಮಾಡಿದ್ದಾರೆ.

ಈ ವೇಳೆ ಮಾತನಾಡಿರುವ ಅರುಣ ಕುಲಕರ್ಣಿ, ದೇಹದಾನಕ್ಕೆ ಕುಟುಂಬದ ಎಲ್ಲ ಸದಸ್ಯರ ಒಪ್ಪಿಗೆಯೂ ಸಿಕ್ಕಿದೆ. ಮಗಳು ಎಂ.ಬಿ.ಬಿ.ಎಸ್. ಮಾಡುತ್ತಿದ್ದು, ದೇಹದ ಅಂಗ ರಚನೆಗಳ ಅಧ್ಯಯನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ದೇಹಗಳ ಕುರಿತು ಆಗಾಗ ಹೇಳುತ್ತಿದ್ದಳು. ಇರುವವರೆಗೂ ತಮ್ಮ ದೇಹ ತಮ್ಮದೆಂದು ಬಡಿದಾಡುತ್ತೇವೆ. ಸತ್ತ ನಂತರ ಅದರ ಅಂತ್ಯಕ್ರಿಯೆ ಮಾಡಲಾಗುತ್ತದೆ. ಹೀಗಾಗಿ ಸತ್ತ ಮೇಲೂ ಅದಕ್ಕೆ ಸಾರ್ಥಕತೆ ಸಿಗಬೇಕಾದರೆ ದೇಹದಾನ ಮಾಡುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ತಮ್ಮ ಜೊತೆಗೆ ತಮ್ಮ ಪತ್ನಿಯೂ ದೇಹ ದಾನಕ್ಕೆ ಒಪ್ಪಿಗೆ ನೀಡಿ ಸಹಿಯನ್ನೂ ಹಾಕಿದ್ದಾರೆ.

ವರಕವಿ ದರಾ ಬೇಂದ್ರೆ ಅವರು ಹೇಳಿದಂತೆ ಸಾವಿಗೆ ನಾವು ಹೆದರಲ್ಲ. ಯಾಕಂದ್ರೆ ಸಾವು ಬಂದಾಗ ನಾವಿರುವುದಿಲ್ಲ. ನಮ್ಮ ದೇಹ ಸುಟ್ಟ ಮೇಲೆ ಬೂದಿಯಾಗುತ್ತದೆ. ಬೂದಿಯನ್ನು ತೆಗೆದುಕೊಂಡು ಹೋಗಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ. ಅದರ ಬದಲಿಗೆ ನಶ್ವರ ಆಗಿರುವ ಶರೀರವನ್ನು ಇನ್ನೊಬ್ಬರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ದೇಹದಾನ ಮಾಡಿದ್ದೇವೆ ಎಂದು ಅರುಣ ಕುಲಕರ್ಣಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಡವರನ್ನ ಮತ್ತಷ್ಟು ಬಡವರನ್ನಾಗಿಸುವುದೆ ಬಿಜೆಪಿ ಅಜೆಂಡಾ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ದೇಹ ದಾನದ ದಾಖಲೆಗಳನ್ನು ಪಡೆದ ನಂತರ ಮಾತನಾಡಿರುವ ಎಂ.ಆರ್.ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ.ವೀರಭದ್ರ ನಂದ್ಯಾಳ, ಅರುಣ ಕುಲಕರ್ಣಿ ದಂಪತಿಗಳನ್ನು ಅಭಿನಂದಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಏನಿಲ್ಲವೆಂದರೂ ಅಧ್ಯಯನಕ್ಕಾಗಿ 15 ದೇಹಗಳಾದರೂ ಬೇಕಾಗುತ್ತದೆ. ಮುಂಚೆ ಅಪರಿಚಿತ ವ್ಯಕ್ತಿಗಳ ದೇಹಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಕೊಡಲಾಗುತ್ತಿತ್ತು. ಆದರೆ ಈಗ ಅದನ್ನು ಸರ್ಕಾರ ಸ್ಥಗಿತಗೊಳಿಸಿದೆ. ಹೀಗಾಗಿ ಪರಿಚಿತ ವ್ಯಕ್ತಿಗಳೇ ದೇಹದಾನ ಮಾಡಿದಲ್ಲಿ ಅದರ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಮತ್ತು ಮೃತ ದೇಹಕ್ಕೆ ಗೌರವ ಸಲ್ಲಿಸಲು ನಮಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.

ಒಟ್ಟಾರೆ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅರುಣ ಕುಲಕರ್ಣಿ ದಂಪತಿಗಳು ದೇಹದಾನ ಮಾರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹುಟ್ಟು ಹಬ್ಬದ ಶುಭಾಷಯಗಳ ಜೊತೆಗೆ, ದೇಹ ದಾನ ಮಾಡಿರುವುದಕ್ಕೂ ಕಲಬುರ್ಗಿಯ ಜನತೆ ಅಭಿನಂದನೆ ಸಲ್ಲಿಸುತ್ತಿದ್ದು, ಅರುಣ ಅವರ ಅನುಕರಣೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
Published by:G Hareeshkumar
First published: