ಕೆಂಪೇಗೌಡ-ಲಕ್ಷ್ಮಿದೇವಿ ಪ್ರಶಸ್ತಿಯ ಘನತೆಗೆ ಕುತ್ತು ತಂದ ಪಾಲಿಕೆ; ಇಲ್ಲಿ ಪ್ರಶಸ್ತಿ ಸ್ವೀಕರಿಸಲು ಭ್ರಷ್ಟತೆಯೇ ಮಾನದಂಡ!

ಯೋಗ್ಯರಿಗೆ ಪ್ರಶಸ್ತಿ ನಿರಾಕರಿಸುವ ಮೂಲಕ ಇಲ್ಲಿ ಅವಮಾನಕ್ಕೆ ಒಳಗಾಗುತ್ತಿರುವುದು ಸಾಧಕನ ಸಾಧನೆ ಹಾಗೂ ಪ್ರತಿಭೆ ಅಷ್ಟೇ ಅಲ್ಲ ಕೆಂಪೇಗೌಡರ ವ್ಯಕ್ತಿತ್ವಕ್ಕೂ ಮಸಿ ಬಳಿಯಲಾಗುತ್ತಿದೆ ಎಂಬ ಕೂಗು ಇದೀಗ ಸಾಮಾಜಿಕ ವಲಯದಿಂದ ಕೇಳಿ ಬರುತ್ತಿದೆ.

MAshok Kumar | news18-kannada
Updated:September 11, 2019, 1:10 PM IST
ಕೆಂಪೇಗೌಡ-ಲಕ್ಷ್ಮಿದೇವಿ ಪ್ರಶಸ್ತಿಯ ಘನತೆಗೆ ಕುತ್ತು ತಂದ ಪಾಲಿಕೆ; ಇಲ್ಲಿ ಪ್ರಶಸ್ತಿ ಸ್ವೀಕರಿಸಲು ಭ್ರಷ್ಟತೆಯೇ ಮಾನದಂಡ!
ಸಾಂದರ್ಭಿಕ ಚಿತ್ರ
  • Share this:
ನಾಡಪ್ರಭು ಕೆಂಪೇಗೌಡ ದಿನಾಚರಣೆಯಂದು ವಿವಿಧ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಗಣ್ಯರಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆಂಪೇಗೌಡ ಹಾಗೂ ಲಕ್ಷ್ಮಿದೇವಿ ಪ್ರಶಸ್ತಿ ನೀಡಿ ಗೌರವಿಸುವ ಸಂಪ್ರದಾಯ ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ, ಇತ್ತೀಚೆಗೆ ವರ್ಷಕಳೆದಂತೆ ಪ್ರಶಸ್ತಿ ಸ್ವೀಕರಿಸುವವರ ಪಟ್ಟಿಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಈ ನಡುವೆ ಪ್ರಶಸ್ತಿಗಾಗಿ ಲಾಭಿ, ಶಿಫಾರಸು ಹೆಗ್ಗಿಲ್ಲದೆ ನಡೆಯುತ್ತಲೇ ಇದೆ.

ಈ ಕುರಿತು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆ ವಿವಾದಗಳಾದ ನಂತರ ಬಿಬಿಎಂಪಿ ಇನ್ನೂ ಕೆಂಪೇಗೌಡ ಪ್ರಶಸ್ತಿ ವಿಚಾರದಲ್ಲಿ ಶಿಫಾರಸಿಗೆ ಮಣೆ ಹಾಕಲ್ಲ, ಯಾವುದೇ ರಾಜಕೀಯ ಮಾಡೊಲ್ಲ, ಲಾಭಿಗೆ ಅವಕಾಶ ಕೊಡೊಲ್ಲ, ಅಯೋಗ್ಯ ಹಾಗೂ ಅಸಮರ್ಥರನ್ನಂತೂ ಹತ್ತಿರಕ್ಕೂ ಸೇರಿಸಲ್ಲ ಎಂದಿತ್ತು. ಆದರೆ, ಇದೇ ಬಿಬಿಎಂಪಿ ಇದೀಗ ಕೊಟ್ಟ ಮಾತಿಗೆ ತಪ್ಪಿದೆ. ಪಾಲಿಕೆ ವಿರುದ್ಧ ಇಂತಹ ಗಂಭೀರ ಆರೋಪ ಮಾಡಲು ನ್ಯೂಸ್-18 ಕನ್ನಡದ ಬಳಿ ಪಕ್ಕಾ ದಾಖಲೆಯೂ ಲಭ್ಯ ಇದೆ.

ಹಿಂದೆ ಕೆಂಪೇಗೌಡ ಪ್ರಶಸ್ತಿಯನ್ನು 500-600 ಜನಕ್ಕೆ ನೀಡುವ ಮೂಲಕ ಪಾಲಿಕೆ ಪ್ರಶಸ್ತಿಯ ಮರ್ಯಾದೆಯನ್ನೇ ತೆಗೆದಿದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಸಾಧಕರನ್ನು ಆಯ್ಕೆ ಮಾಡಲು ಪಾಲಿಕೆ ಮೊದಲ ಬಾರಿಗೆ ಕಳೆದ ವರ್ಷ ಆಯೋಗವೊಂದನ್ನು ನೇಮಿಸಿತ್ತು. ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದ ಸಮಿತಿ 70 ಜನ ಅರ್ಹ ಸಾಧಕರನ್ನು ಆಯ್ಕೆ ಮಾಡುವ ತ್ರಾಸದಾಯಕ ಹಾಗೂ ಅಷ್ಟೇ ಸವಾಲಿನ ಕಾರ್ಯಕ್ಕೆ ಮುಂದಾಗಿತ್ತು.

ಆದರೆ, ಇದೀಗ ಈ ಸಮಿತಿ ನೀಡಿರುವ ಪ್ರಶಸ್ತಿ ಪಟ್ಟಿಯ ಬಗ್ಗೆಯೂ ಸಾಕಷ್ಟು ಆಕ್ಷೇಪ-ಅಪಸ್ವರದ ಮಾತುಗಳು ಕೇಳಿ ಬರ್ತಿವೆ. ಯೋಗ್ಯರ ನಡುವೆ ಯೋಗ್ಯತೆ-ಅರ್ಹತೆ-ಸಾಮರ್ಥ್ಯವೇ ಇಲ್ಲದ ಸಾಕಷ್ಟು ಅಯೋಗ್ಯರಿಗೂ ಪ್ರಶಸ್ತಿ ನೀಡಲಾಗಿದೆ. ಶಿಫಾರಸ್ಸು - ವಶೀಲಿಬಾಜಿ- ಒತ್ತಡಕ್ಕೆ ಮಣಿದಿರೋ ಮಾತು ಕೇಳಿಬರ್ತಿವೆ. ನ್ಯೂಸ್-18 ಕನ್ನಡಕ್ಕೆ ಸಿಕ್ಕಿರುವ ಒಂದಷ್ಟು ಅಯೋಗ್ಯರ ಪಕ್ಕಾ ಮಾಹಿತಿ ಇಲ್ಲಿದೆ.

1-ಪ್ರಾಚಿ ಗೌಡ: ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಬಗ್ಗೆ ಸಾಕಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ನಾಡಿನ ಬಗೆಗಿನ ಕಾಳಜಿ-ಕಳಕಳಿಗಾಗಿ ತನ್ನನ್ನೇ ಕೆರೆಗೆ ಹಾರ ಮಾಡಿಕೊಂಡ ಮಹಾತಾಯಿ ಆಕೆ. ಆಕೆಯ ಹೆಸರಿನಲ್ಲಿ ಲಕ್ಷ್ಮಿದೇವಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಭಾಜನವಾಗಿರುವ ಹೆಸರುಗಳಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿರೋದೆ ಪ್ರಾಚಿಗೌಡ.

ಪ್ರಾಚಿಗೌಡ ಹಿನ್ನೆಲೆ ಗೊತ್ತಿದ್ದವರಿಗೆ ಮಾತ್ರ ಆಕೆಗೆ ಪ್ರಶಸ್ತಿ ನೀಡುವ ಮೂಲಕ ಬಿಬಿಎಂಪಿ ಎಷ್ಟು ದೊಡ್ಡ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದೆನಿಸದೆ ಇರದು. ಯಾವ ರೀತಿಯಲ್ಲೂ ಪ್ರಶಸ್ತಿಗೆ ಯೋಗ್ಯವಾದ ವ್ಯಕ್ತಿತ್ವ ಹಾಗೂ ಸಾಧನೆ ಪ್ರಾಚಿ ಗೌಡ ಅವರಿಗೆ ಇಲ್ಲ. ಅವರನ್ನು ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂಬುದನ್ನು ಸ್ವತಃ ಸ್ಪಷ್ಟಪಡಿಸಿ ಎಂದರೆ ಬಹುಷಃ ಅವರಿಂದಲೂ ಉತ್ತರ ಸಿಗಲಾರದೇನೋ.

ಕೇವಲ ಬಿಜೆಪಿ ಕಾರ್ಯಕರ್ತೆ ಎನ್ನುವ ಏಕೈಕ ಮಾನದಂಡದ ಅಡಿಯಲ್ಲಿ ಇವರಿಗೆ ಪ್ರಶಸ್ತಿ ಕೊಡಿಸಲಾಗಿದೆ ಎನ್ನುವ ಬಹುದೊಡ್ಡ ಆರೋಪ ಇದೀಗ ಕೇಳಿಬರುತ್ತಿದೆ. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದೇನೋ? ಪ್ರಶಸ್ತಿ ಪಡೆಯಲಿಕ್ಕೆ ಪ್ರಾಚಿಗೌಡ ಪಕ್ಷದ ದೊಡ್ಡ ದೊಡ್ಡ ಮುಖಂಡರ ಮೂಲಕ ಶಿಫಾರಸ್ಸು ಮಾಡಿಸಿದ್ದಾರೆ. ಹೀಗಾಗಿಯೇ ಈಕೆಯ ಹೆಸರನ್ನು ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಒತ್ತಡವನ್ನು ಮೇಯರ್​ಗೆ ಹೇರಿ ಪ್ರಶಸ್ತಿ ನೀಡುವ ಮೂಲಕ ವರಿಷ್ಠರು ಜವಾಬ್ದಾರಿಯಿಂದ ಕೈ ತೊಳೆದುಕೊಂಡಿದ್ದಾರೆ.ಇದನ್ನು ಸ್ವತಃ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರೆ ಒಪ್ಪಿಕೊಂಡಿದ್ದಾರೆ.
ಇನ್ನೂ ಪ್ರಾಚಿಗೌಡ ಅವರಿಗೆ ಪ್ರಶಸ್ತಿ ನೀಡಲೇಕು ಎಂದು ಪದ್ಮನಾಭ ರೆಡ್ಡಿ ಸಣ್ಣ ಮಕ್ಕಳಂತೆ ರಚ್ಚೆ ಹಿಡಿದು ನನ್ನ ಬಳಿ ಸಂಘರ್ಷಕ್ಕೆ ಇಳಿದಿದ್ದರು ಎಂದು ಮೇಯರ್ ಗಂಗಾಂಬಿಕೆ ಯವರೇ ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದಾರೆ.

2-ತಮ್ಮಣ್ಣ ಗೌಡ: ಇದು ಪ್ರಾಚಿಗೌಡ ಕಥೆಯಾದ್ರೆ, ಕೆಂಪೇಗೌಡ ಪ್ರಶಸ್ತಿ ಮುಡಿಗೇರಿಸಿಕೊಂಡ ಮತ್ತೋರ್ವ ಅಯೋಗ್ಯ ಸರ್ಕಾರಿ ನೌಕರ ತಮ್ಮಣ್ಣ ಗೌಡನ ಕಥೆಯೇ ಬೇರೆ. ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಯಲ್ಲಿ ನೌಕರನಾಗಿರುವ ಈತನ ವಿರುದ್ಧ ಬಡ ರೋಗಿಗಳನ್ನು ಸುಲಿಗೆ ಮಾಡುತ್ತಿರುವ ಆರೋಪವಿದೆ.

ಸಾಮಾಜಿಕ ಕಳಕಳಿಯ ಹುದ್ದೆ ನೀಡಿದ್ದರೂ ಈತ ಎಂದಿಗೂ ಬಡವರಿಗೆ ಸ್ಪಂದಿಸುವ ಕೆಲಸ ಮಾಡೇ ಇಲ್ಲ. ಇಂತಹ ವ್ಯಕ್ತಿಗೂ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಬಿಬಿಎಂಪಿ ಪ್ರಶಸ್ತಿಯ ಮಾನವನ್ನೇ ಹಾಳು ಮಾಡಿದೆ ಎಂಬ ಆರೋಪ ಬಿಬಿಎಂಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

3-ನಿಸರ್ಗ ಜಗದೀಶ್: ಪ್ರಾಚಿಗೌಡ ಬಿಜೆಪಿ ಕಾರ್ಯಕರ್ತೆಯಾದ್ರೆ ಈತ ಕಾಂಗ್ರೆಸ್ ಪಕ್ಷದ ನಾಯಕ. ಕಳೆದ ಬಾರಿ ಬಿಬಿಎಂಪಿ ಎಲೆಕ್ಷನ್ ನಲ್ಲಿ ಶಕ್ತಿ ಗಣಪತಿ ನಗರ ವಾರ್ಡ್ ನಿಂದ ಈತ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ಇದಿಷ್ಟೇ ಈತನ ಅರ್ಹತೆ ಮತ್ತು ಸಾಧನೆ. ಇದಿಷ್ಟಕ್ಕೆ ಪಕ್ಕದ ಶಂಕರಮಠ ವಾರ್ಡ್ ನ ಸದಸ್ಯ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್ ಪ್ರತಿಷ್ಟಿತ ಕೆಂಪೇಗೌಡ ಪ್ರಶಸ್ತಿ ನೀಡಿಸಿದ್ದಾರೆ. ಹಾಗಾದ್ರೆ, ಬಿಜೆಪಿಯನ್ನು ತೆಗಳೋ ಕೈ ಪಕ್ಷದ ನೈತಿಕತೆಯೇನು? ಎಂದು ಪ್ರಶ್ನಿಸ್ತಿದ್ದಾರೆ ಬೆಂಗಳೂರಿಗರು.

4-ಅರ್ಜುನಪ್ಪ: ಹಾಗೇ ಮುಂದುವರೆದರೆ ಕಬಡ್ಡಿ ಕ್ರೀಡೆಯಲ್ಲಿ ಕೆಲವೇ ಪಂದ್ಯಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಆಟಗಾರ ಅರ್ಜುನಪ್ಪ ಜಿ.ಎನ್ ಅವರಿಗೂ ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.

ಹತ್ತು ಹಲವು ಬಾರಿ ಪ್ರತಿಷ್ಟಿತ ಪಂದ್ಯಗಳಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿರುವ ಗೋವಿಂದರಾಜ್ ಎಲ್ಲಾ ದಾಖಲೆ ಸಮೇತ ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಹಾಕಿದ್ದಾರೆ. ಆದರೆ, ಇದಕ್ಕೆ ಮನ್ನಣೆ ನೀಡದ ಪ್ರಶಸ್ತಿ ಆಯ್ಕೆ ಸಮಿತಿ ಯಾರೋ ರಾಜಕಾರಣಿಗಳು ಶಿಫಾರಸ್ಸು ಮಾಡಿದರು ಎಂಬ ಒಂದೇ ಕಾರಣಕ್ಕೆ ಯೋಗ್ಯರನ್ನು ಮೂಲೆ ಗುಂಪು ಮಾಡಿ ಅಯೋಗ್ಯರಿಗೆ ಪ್ರಶಸ್ತಿ ನೀಡಿದೆ.

ಇದು ಎಷ್ಟು ಸರಿ? ಇಲ್ಲಿ ಅವಮಾನಕ್ಕೆ ಒಳಗಾಗುತ್ತಿರುವುದು ಸಾಧಕನ ಸಾಧನೆ ಹಾಗೂ ಪ್ರತಿಭೆ ಅಷ್ಟೇ ಅಲ್ಲ ಕೆಂಪೇಗೌಡರ ವ್ಯಕ್ತಿತ್ವಕ್ಕೂ ಮಸಿ ಬಳಿಯಲಾಗುತ್ತಿದೆ ಎಂಬ ಕೂಗು ಸಾಮಾಜಿಕ ವಲಯದಿಂದ ಇದೀಗ ಕೇಳಿ ಬರುತ್ತಿದೆ.

ಪ್ರಶಸ್ತಿ ನೀಡುವ ವಿಚಾರದಲ್ಲಿ ನಡೆದಿರುವ ಈ ಪ್ರಮಾದಗಳನ್ನು ನೋಡಿದ್ರೆ, ಲಾಭಿ-ಶಿಫಾರಸ್ಸು-ವಶೀಲಿಬಾಜಿ-ಒತ್ತಡಗಳಿಂದ ಮುಕ್ತವಾಗಿ ಕೆಂಪೇಗೌಡ ಹಾಗೂ ಅವರ ಸೊಸೆ ಲಕ್ಷ್ಮಿದೇವಿ ಪ್ರಶಸ್ತಿ ಕೊಡ್ತೀನೆಂದು ಪ್ರಮಾಣ ಮಾಡಿದ್ದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣ ನೂರಿರಬಹುದು.ಆದ್ರೆ, ಒಂದಷ್ಟು ಅಯೋಗ್ಯರ ಆಯ್ಕೆಯಿಂದಾಗಿ ಪ್ರಶಸ್ತಿಯ ಘನತೆಗೆ ಕಳಂಕ ಅಂಟಿರುವುದಂತೂ ಸತ್ಯ.

(ವರದಿ - ಥಾಮಸ್​ ಪುಷ್ಪರಾಜ್)

ಇದನ್ನೂ ಓದಿ : ಮುಖ್ಯಮಂತ್ರಿ ಚಂದ್ರು, ಚಂಪಾ ಸೇರಿ 70 ಸಾಧಕರಿಗೆ 2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟ

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ