news18-kannada Updated:March 4, 2021, 10:29 PM IST
ಕೆ ನಿಡುಗಣೆ ಗ್ರಾಮ ಪಂ
ಕೊಡಗು (ಮಾ. 4): ಒಂದೇ ಕೆಲಸಕ್ಕೆ ಎರಡು ಮೂರು ಬಾರಿ ಬಿಲ್, ಕೆಲಸ ಆಗದಿದ್ದರೂ ಅನುದಾನ ಬಳಕೆ ಮಾಡುವ ಮೂಲಕ ಪಂಚಾಯಿತಿಯ ಲಕ್ಷಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿರುವ ಪ್ರಕರಣ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೆ ನಿಡುಗಣೆ ಪಂಚಾಯಿತಿಯಲ್ಲಿ ನಡೆದಿದೆ. ಪಂಚಾಯಿತಿಯ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದು, ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಆಯ್ಕೆ ಆಗುವ ಅವಧಿಯಲ್ಲಿ ಇದ್ದ ಆಡಳಿತಕಾರಿಗಳು ಪಂಚಾಯಿತಿಯ ಲಕ್ಷಾಂತರ ರೂಪಾಯಿಯನ್ನು ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ನೂತನ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡು ಕೊಡಗು ಜಿಲ್ಲಾಧಿಕಾರಿ ಮತ್ತು ಪಂಚಾಯಿತ್ ರಾಜ್ ಇಲಾಖೆಗೆ ದೂರು ನೀಡಿದೆ. ಆಡಳಿತಾಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸೇರಿ ಹತ್ತು ಲಕ್ಷಕ್ಕೂ ಹೆಚ್ಚು ಪಂಚಾಯಿತಿ ಅನುದಾನವನ್ನು ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಹಿಂದಿನ ಆಡಳಿತ ಮಂಡಳಿ ಅಧಿಕಾರವಧಿ ಮುಗಿದಾಗ ಜೂನ್ 2020 ರ ಕೊನೆಯ ವೇಳೆಗೆ 2,34,162 ರೂಪಾಯಿ ಹಣವಿತ್ತು. ಆ ಬಳಿಕ ಫೆಬ್ರವರಿ 2021 ರ ಕೊನೆಯ ವೇಳೆವರೆಗೆ ಪಂಚಾಯಿತಿಯ ವಿವಿಧ ಕಂದಾಯಗಳು ಸೇರಿದಂತೆ ಒಟ್ಟು 15,96,511 ರೂಪಾಯಿ ಆದಾಯ ಬಂದಿದೆ. ಹಿಂದಿನ ಉಳಿತಾಯದ ಹಣದ ಜೊತೆಗೆ ಆದಾಯವೂ ಸೇರಿ ಒಟ್ಟು 18,30,673 ರೂಪಾಯಿ ಅನುದಾನ ಸಂಗ್ರಹವಾಗಿದೆ. ಇದರಲ್ಲಿ ಎಲ್ಲಾ ಹಣವನ್ನು ಬಳಸಿ ಕೇವಲ 11,503 ರೂಪಾಯಿಯನ್ನು ಮಾತ್ರವೇ ಉಳಿಸಲಾಗಿದೆ. ಕರ್ಣಂಗೇರಿ ಗ್ರಾಮದ ನಿಸರ್ಗ ಬಡಾವಣೆಯಲ್ಲಿ ಒಂದೆರಡು ಪೈಪುಗಳ ದುರಸ್ಥಿಗೊಳಿಸಿ ಅದಕ್ಕೆ 9930 ರೂಪಾಯಿ ಬಿಲ್ ಮಾಡಲಾಗಿದೆ. ವಿದ್ಯುತ್ ಬೀದಿ ದೀಪ ಖರೀದಿಗೆ ಎಂದು 21,732 ರೂಪಾಯಿ ಬಿಲ್ ಮಾಡಲಾಗಿದೆ. ಆದರೆ ಎಲ್ಲೂ ವಿದ್ಯುತ್ ದೀಪಗಳನ್ನೇ ಅಳವಡಿಸಿಲ್ಲ. ಹಿಂದೆ ಇದ್ದ ಹಳೇ ವಿದ್ಯುತ್ ದೀಪಗಳಿದ್ದು, ಅವುಗಳು ಕೂಡ ಹಾಳಾಗಿವೆ ಎನ್ನೋದು ಪಂಚಾಯಿತಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೆ. ಅಯ್ಯಪ್ಪ ಅವರ ಆರೋಪ.
ಕೆ. ನಿಡುಗಣೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗೆ ಮೋಟಾರ್ ಇಳಿಸಲಾಗಿದ್ದು ಅದಕ್ಕೆ ಹೆಚ್ಚೆಂದರೆ 25 ರಿಂದ 30 ಸಾವಿರ ವೆಚ್ಚವಾಗುತ್ತದೆ. ಅದಕ್ಕೂ 43,018 ರೂಪಾಯಿ ಬಿಲ್ಲು ಮಾಡಲಾಗಿದೆ. ಹೀಗೆ ಒಂದೆರಡಲ್ಲ, ಪ್ರತೀ ಬಿಲ್ಲಿನಲ್ಲೂ ಅಕ್ರಮ ಎಸಗಲಾಗಿದೆ ಎನ್ನೋದು ನೂತನ ಆಡಳಿತ ಮಂಡಳಿಯ ಸದಸ್ಯ ಜಾನ್ಸನ್ ಪಿಂಟೋ ಅವರ ಗಂಭೀರ ಆರೋಪ.
ಇದನ್ನು ಓದಿ: ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ; ರಕ್ಷಣೆಗೆ ಪೊಲೀಸರ ಮೊರೆ ಹೋದ ನವಜೋಡಿಗಳು
2021 ರ ಫೆಬ್ರವರಿಯ 25 ರಂದು ಪಂಚಾಯಿತಿಯ ಸಾಮಾನ್ಯ ಸಭೆ ನಡೆದಾಗ ಸ್ತತಃ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಜಮಾ ಖರ್ಚುಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಅದೇ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವ್ಯವಹಾರ ನಡೆದಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಹೀಗಾಗಿ ಆಡಳಿತಾಧಿಕಾರಿಗಳ ವಿರುದ್ಧ ತನಿಖೆ ಮಾಡುವಂತೆ ನೂತನ ಆಡಳಿತ ಮಂಡಳಿಯು ನಿರ್ಣಯ ಮಾಡಿ ಜಿಲ್ಲಾಧಿಕಾರಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ದೂರು ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ಭನ್ವರ್ ಸಿಂಗ್ ಮೀನಾ ಅಕ್ರಮವಾಗಿದ್ದರೆ ತನಿಖಾ ತಂಡ ನೇಮಿಸಿ ತನಿಖೆ ಮಾಡಲಾಗುದು. ಅಕ್ರಮ ಎಸಗಿರುವುದು ಖಚಿತವಾದಲ್ಲಿ ಆಡಳಿತಾಧಿಕಾರಿಯಾದರೂ ಸರಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
Published by:
Seema R
First published:
March 4, 2021, 10:29 PM IST