ಆರೋಗ್ಯ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಖಾಸಗಿ ಸಹಯೋಗ: ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ 2,500 ಪಿಎಚ್ ಸಿಗಳಿದ್ದು, ಇದನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರೂ. ಬೇಕು. ಇದಕ್ಕಾಗಿ ಸಿಎಸ್ ಆರ್ ಅಗತ್ಯ. ಶೇ. 40 ಐಟಿ ರಫ್ತು ಕರ್ನಾಟಕದಿಂದಲೇ ಆಗುತ್ತಿದೆ. ಇದಲ್ಲದೆ, ಬೇರೆ ಕ್ಷೇತ್ರದ ಕಂಪನಿಗಳೂ ಇವೆ. ಈ ಎಲ್ಲ ಕಂಪನಿಗಳೊಂದಿಗೆ ಈ ಸಮಿತಿ ಮಾತುಕತೆ ನಡೆಸಲಿದೆ. ಇದು ಹೆಚ್ಚು ಫಲ ಕೊಡಲಿದೆ ಎಂದರು.

ಸಚಿವ ಕೆ. ಸುಧಾಕರ್.

ಸಚಿವ ಕೆ. ಸುಧಾಕರ್.

 • Share this:
  ಬೆಂಗಳೂರು (ಮಾರ್ಚ್ 17, ಬುಧವಾರ): ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸುವುದು ಸೇರಿದಂತೆ ಸೇವೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಖಾಸಗಿ ಸಹಭಾಗಿತ್ವದ ವ್ಯವಸ್ಥೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್ ಆರ್) ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಿಎಸ್ ಆರ್ ಸಮಿತಿ ರಚಿಸಿದೆ. ವಿಧಾನಸೌಧದಲ್ಲಿ, ಸಮಿತಿಯ ಮುಖ್ಯಸ್ಥೆಯಾಗಿ ನೇಮಕಗೊಂಡ ಗೀತಾಂಜಲಿ ಕಿರ್ಲೋಸ್ಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತ ಕೋರಿದರು.

  ಈ ವೇಳೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು, ಕೋವಿಡ್ ಬಂದ ಹಂತದಲ್ಲೇ ಆಮೂಲಾಗ್ರ ಬದಲಾವಣೆ ತಂದು ಮೂಲಸೌಕರ್ಯ ಹೆಚ್ಚಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಅಭಿವೃದ್ಧಿ ತರಲಾಗುತ್ತಿದೆ. ನಮ್ಮಲ್ಲಿ ಅನೇಕ ಕಂಪನಿಗಳಿದ್ದು, 2014-15 ನೇ ಸಾಲಿನಲ್ಲಿ ಈ ಕಂಪನಿಗಳು ಸಿಎಸ್ ಆರ್ ಗೆ 4-5 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದವು. ಕಳೆದ ವರ್ಷ ಇದು ದುಪ್ಪಟ್ಟಾಗಿದೆ. ಇದರಿಂದಾಗಿ ಸಾಮಾಜಿಕ ಚಟುವಟಿಕೆಗೆ ಒತ್ತು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

  ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಸಿಎಸ್ ಆರ್ ನಿಂದ ಅಭಿವೃದ್ಧಿಯಾಗಬೇಕು. ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಬೇಕು ಎಂಬ ಉದ್ದೇಶವನ್ನು ಕಂಪನಿಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಕೇಳಿದಾಗ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

  ಅನೇಕ ಕಂಪನಿಗಳು ಜನೋಪಕಾರಿ ಕೆಲಸಗಳನ್ನು ಮಾಡುತ್ತಿವೆ. ಆರೋಗ್ಯ ಕ್ಷೇತ್ರಕ್ಕೆ ಶೇ. 25 ರಷ್ಟು ಖರ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದಿದೆ. ಸಮುದಾಯ ಆರೋಗ್ಯ ಕೇಂದ್ರ, ಪಿಎಚ್ ಸಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ಆರೋಗ್ಯ ಮಾತ್ರವಲ್ಲದೆ, ಸ್ವಚ್ಛತೆ ಮೊದಲಾದ ಕೆಲಸಗಳಿಗೆ ಹಣ ಖರ್ಚು ಮಾಡಬಹುದು. ಈ ಹೊಸ ಸಮಿತಿಯು ಒಂದು ತಜ್ಞರ ತಂಡವಾಗಿ ಸರ್ಕಾರೊಂದಿಗೆ ಕಾರ್ಯನಿರ್ವಹಿಸಲಿದೆ. ಈಗಿನ ಸ್ಥಿತಿಯಲ್ಲಿ ಸಿಎಸ್ ಆರ್ ಹಣ ಅಗತ್ಯ ಎಂದರು.

  ಇದನ್ನು ಓದಿ: ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ್ ಕಿಡಿ: ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸವಾಲು!

  ರಾಜ್ಯದಲ್ಲಿ 2,500 ಪಿಎಚ್ ಸಿಗಳಿದ್ದು, ಇದನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರೂ. ಬೇಕು. ಇದಕ್ಕಾಗಿ ಸಿಎಸ್ ಆರ್ ಅಗತ್ಯ. ಶೇ. 40 ಐಟಿ ರಫ್ತು ಕರ್ನಾಟಕದಿಂದಲೇ ಆಗುತ್ತಿದೆ. ಇದಲ್ಲದೆ, ಬೇರೆ ಕ್ಷೇತ್ರದ ಕಂಪನಿಗಳೂ ಇವೆ. ಈ ಎಲ್ಲ ಕಂಪನಿಗಳೊಂದಿಗೆ ಈ ಸಮಿತಿ ಮಾತುಕತೆ ನಡೆಸಲಿದೆ. ಇದು ಹೆಚ್ಚು ಫಲ ಕೊಡಲಿದೆ .ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶಗಳ ಪಿಎಚ್ ಸಿಗಳ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಲಾಗಿದೆ. ಇಂತಹ ಸುಮಾರು 900 ಪಿಎಚ್ ಸಿಗಳಿವೆ ಎಂದರು.

  ಪ್ರಧಾನಿ ಸಭೆಯಲ್ಲಿ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ

  • ರಾಜ್ಯದಲ್ಲಿ ಈವರೆಗೆ 9.61 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ 2020ರ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಕೋವಿಡ್ 19 ಸೋಂಕು ತೀವ್ರಗೊಂಡಿತ್ತು. ನವೆಂಬರ್ ನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿತು. ಡಿಸೆಂಬರ್ ನಲ್ಲಿ ಇನ್ನೂ ಹೆಚ್ಚಿನ ಇಳಿಕೆಯಾಯಿತು.

  • ಆದರೆ ಕಳೆದ 10 ದಿನಗಳಲ್ಲಿ ಕೋವಿಡ್ 19 ಪ್ರಕರಣಗಳು ಮತ್ತೆ ಏರುಗತಿಯಲ್ಲಿವೆ. ಪಾಸಿಟಿವಿಟಿ ರೇಟ್ ಮಾರ್ಚ್ 15 ರಂದು ಶೇ. 1.65ರಷ್ಟು ವರದಿಯಾಗಿದೆ.

  • ಪ್ರಕರಣಗಳ ಸಂಖ್ಯೆಯು ಬೆಂಗಳೂರು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿದೆ.

  • ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ.

  • ಮಾರ್ಚ್ 15 ರಂದು ತಜ್ಞರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ:

  • ಕೋವಿಡ್ 19 ರ ವಿರುದ್ಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದು.

  • ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು.

  • ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯುಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ.

  • ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲು ನಿರ್ಧಾರ.
   ಇದರೊಂದಿಗೆ ರಾಜ್ಯದಲ್ಲಿರುವ 3500 ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗುವುದು.

  • ಪ್ರತಿ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.
   ಭಾರತ ಸರ್ಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ. ವೃದ್ಧಾಶ್ರಮಗಳಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲು ಅನುಮತಿ ಕೋರಲಾಯಿತು.

  • ಇಂತಹ ಸ್ಥಳಗಳಲ್ಲಿ ಲಸಿಕೆ ಕೇಂದ್ರದಲ್ಲಿ ಒದಗಿಸುವ ಎಲ್ಲ ಸೌಲಭ್ಯಗಳು, ಅಂಬ್ಯುಲೆನ್ಸ್ ಹಾಗೂ ಸಾಕಷ್ಟು ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಮಾನ್ಯ ಪ್ರಧಾನಿಯವರ ಗಮನಕ್ಕೆ ತರಲಾಯಿತು.

  • ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಪ್ರಧಾನಿಯವರ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುವದು.

  Published by:HR Ramesh
  First published: