news18-kannada Updated:October 20, 2020, 6:06 PM IST
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು(ಅಕ್ಟೋಬರ್. 20): ಕೊರೋನಾದಿಂದ ತತ್ತರಿಸಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಕೊರೋನಾ ವಿಚಾರವಾಗಿ ಸಿಹಿ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಕೊರೋನಾ ಅಕ್ಟೋಬರ್ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಕುರಿತು ಮೈಸೂರು ಜಿಲ್ಲಾಡಳಿತವೇ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲೆಯಲ್ಲಿ ಈಗ ಕೊರೋನಾ ನಿಯಂತ್ರಣದಲ್ಲಿದೆ ಎಂದು ಹೇಳಿದೆ. ದೇಶದಲ್ಲಿ ಕೊರೋನಾ ಅಟ್ಟಹಾಸವನ್ನ ಮೆರೆಯುತ್ತಿರುವಾಗ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗದ ಹಾಗೇ ಪಸರಿಸಿತ್ತು. ದಿನೆ ದಿನೆ ಹೆಚ್ಚಾಗುತ್ತಿದ್ದ ಕೊರೋನಾ ಸೋಂಕಿನ ಪ್ರಕರಣಗಳಿಂದಾಗಿ, ಪಾಸಿಟಿವ್ ಪ್ರಮಾಣ ಹಾಗೂ ಸಾವಿನ ಪ್ರಮಾಣದ ಶೇಕಡಾವಾರು ಸಂಖ್ಯೆಯಲ್ಲಿ ಮೈಸೂರು ರಾಜ್ಯದಲ್ಲೆ ಎರಡನೆ ಸ್ಥಾನದಲ್ಲಿತ್ತು. ಸೆಪ್ಟೆಂಬರ್ ತಿಂಗಳಲ್ಲಂತು ನಿತ್ಯ ಸರಾಸರಿಯಲ್ಲಿ 800 ರಿಂದ 1000 ಪಾಸಿಟಿವ್ ಪ್ರಕರಣಗಳು ಹಾಗೂ ನಿತ್ಯ 8ರಿಂದ 10 ಮಂದಿ ಸಾವನ್ನಪ್ಪುತ್ತಿದ್ದರು.
ಈ ಪ್ರಮಾಣದ ಕೊರೋನಾ ಹರುಡುವಿಕೆಯನ್ನ ಕಂಡ ಸರ್ಕಾರ ಕೊರೋನಾ ಸಂದರ್ಭದಲ್ಲಿ ಅದ್ದೂರಿ ದಸರಾ ಬೇಡ ಎಂದು ನಿರ್ಧರಿಸಿ ಸರಳ ದಸರಾ ಆಚರಿಸಲು ಸೂಚನೆ ನೀಡಿತ್ತು. ದಸರಾದ ಸಂದರ್ಭದಲ್ಲಿ ಕೊರೋನಾ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದ ತಜ್ಞರಿಗೆ ಶಾಕ್ ಆಗುವಂತೆ ವರದಿಯೊಂದು ಇಂದು ಬಿಡುಗಡೆಯಾಗಿದೆ. ಮೈಸೂರಿನಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಗಣನೀಯ ಪ್ರಮಾಣದಲ್ಲಿ ಕೊರೋನಾ ಹರುಡುವಿಕೆ ಹಾಗೂ ಸೋಂಕಿನಿಂದ ಸಾವನ್ನಪ್ಪುವರ ಸಂಖ್ಯೆಯೂ ಕಡಿಮೆಯಾಗಿದೆ.

ಅಂಕಿ ಅಂಶ
ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿ ಇದೆ ಅಂತ ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಕುರಿತು ಇಂದು ಅಂಕಿ ಅಂಶಗಳನ್ನ ಬಿಡುಗಡೆ ಮಾಡಿರುವ ಜಿಲ್ಲಾಡಳಿತ ಕಳೆದ ತಿಂಗಳು ಇದ್ದ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಮತ್ತು ಈ ತಿಂಗಳು ಕಂಡು ಬಂದ ಸೋಂಕಿನ ಹರಡುವಿಕೆ ಹಾಗೂ ಸಾವಿನ ಪ್ರಮಾಣದ ಪಕ್ಕಾ ಲೆಕ್ಕ ನೀಡಿದೆ. ಮೈಸೂರು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಒಂದೇ ತಿಂಗಳಲ್ಲಿ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಅಂಕಿ ಅಂಶ
ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 20.07 ಇದ್ದ ಪಾಸಿಟಿವ್ ಪ್ರಮಾಣ ಅಕ್ಟೋಬರ್ ತಿಂಗಳಿನಲ್ಲಿ ಶೇ. 7.08ಕ್ಕೆ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 2.05ರಷ್ಟು ಇದ್ದ ಸಾವಿನ ಪ್ರಮಾಣ ಅಕ್ಟೋಬರ್ ತಿಂಗಳಿನಲ್ಲಿ ಶೇ. 1.01 ರಷ್ಟು ಇಳಿಕೆ. ಮೈಸೂರಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ನಿತ್ಯ 2500 ಕೊರೋನಾ ಟೆಸ್ಟ್ ನಡೆಯುತ್ತಿತ್ತು.
ಅದು ಅಕ್ಟೋಬರ್ ತಿಂಗಳಿನಲ್ಲಿ 4000 ಏರಿಕೆಯಾಗಿದೆ. ಕೊರೋನಾದಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಜಿಲ್ಲೆ ದಿನೆ ದಿನೆ ತನ್ನ ಸ್ಥಾನವನ್ನ ಕೆಳಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಯಲ್ಲಿ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಅಂಕಿ ಅಂಶ
ದಸರಾ ಆರಂಭಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮೈಸೂರಿನಲ್ಲಿ ಸಭೆ ನಡೆಸಿದ್ದಾಗ ಆಗಷ್ಟೆ ಆಗಮಿಸಿದ್ದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇನ್ನೊಂದು ವಾರದಲ್ಲಿ ಕೊರೋನಾ ನಿಯಂತ್ರಣ ಮಾಡುವುದಾಗಿ ಭರವಸೆ ನೀಡಿದ್ದರು. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಜಿ.ಶಂಕರ್ ಕೊರೋನಾ ಆರಂಭದಲ್ಲಿ 90 ಪಾಸಿಟಿವ್ ಕೇಸ್ಗಳನ್ನ ಯಶಸ್ವಿಯಾಗಿ ನಿಭಾಯಿಸಿ ಒಂದೆ ಒಂದು ಸಾವು ಸಂಭವಿಸದಂತೆ ಎಚ್ಚರ ವಹಿಸಿದ್ದರು.
ಇದನ್ನೂ ಓದಿ :
ಪ್ರತಿಯೊಬ್ಬರಿಗೂ ನಿವೇಶನ, ಸೂರು ಒದಗಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಆ ನಂತರ ಅನ್ಲಾಕ್ ಆರಂಭವಾದಾಗ ದಿನೆ ದಿನೆ ಸೋಂಕಿನ ಜೊತೆ ಸಾವಿನ ಪ್ರಮಾಣವು ಏರಿಕೆಯಾಗಿತ್ತು. ತದ ನಂತರ ಜಿಲ್ಲಾಧಿಕಾರಿ ವರ್ಗಾವಣೆಯಾಗಿ ಬಿ.ಶರತ್ ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿದ್ದರು. ಈ ನಡುವೆ ಕೊರೋನಾ ಸಭೆ ಹಾಗೂ ದಸರಾ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿ ಒಂದೆ ತಿಂಗಳಲ್ಲಿ ಹೊಸ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯವರನ್ನ ನೇಮಕ ಮಾಡಿತ್ತು.
ಇದೀಗ ಅಧಿಕಾರ ಸ್ವೀಕಾರ ಮಾಡಿದ ಒಂದೆ ತಿಂಗಳಲ್ಲಿ ಕೊರೋನಾವನ್ನ ನಿಯಂತ್ರಣ ಮಾಡಿದ ಕೀರ್ತಿ ಹೊಸ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಸಿಗಲಿದೆ.
Published by:
G Hareeshkumar
First published:
October 20, 2020, 5:29 PM IST