ಬೆಂಗಳೂರು: ದಿನದಿಂದ ದಿನಕ್ಕೆ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಜನವರಿಗಿಂತ ಫೆಬ್ರವರಿ.. ಫೆಬ್ರವರಿಗಿಂತ ಮಾರ್ಚ್ ನಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಮೈ ಮರೆತರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ. ಅದ್ಯಾವಾಗ ಸರ್ಕಾರ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಿತೋ, ಅಂದೇ ಜನರು ಬೇಕಾಬಿಟ್ಟಿ ಓಡಾಡೋಕೆ ಶುರುಮಾಡಿದ್ದಾರೆ. ಕೊರೋನಾ ಇದೆ. ಆದರೂ ಓಡಾಡೋಕೆ ಅನುಮತಿ ಕೊಡ್ತಿದ್ದೀವಿ ಅಂತ ಹೇಳಿದರೂ ಜನ ಮಾತ್ರ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಈಗ ಅದರ ಪರಿಣಾಮ ಮತ್ತೊಮ್ಮೆ ಕೊರೋನಾದ ರಣಕೇಕೆಗೆ ಸಾಕ್ಷಿಯಾಗುವಂತೆ ಮಾಡ್ತಿದೆ. ಹೌದು, ಮತ್ತೆ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗ್ತಾನೆ ಇದೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ ಭಯವೇ ಇಲ್ಲದೆ ಬೆಂಗಳೂರಿನ ಜನರು ಮನಬಂದಂತೆ ಅಡ್ಡಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಬಿಎಂಪಿ ಆಯುಕ್ತರು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಲಸಿಕೆ ಮಹಾ ಅಭಿಯಾನ ಚಾಲ್ತಿಯಲ್ಲಿದೆ ಅನ್ನೋದು ನಿಜ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಹಂಚಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ವಿದೇಶಿ ವೈರಸ್ ಗಳೂ ಎಂಟ್ರಿ ಕೊಟ್ಟಿವೆ. ನಿನ್ನೆ ಮೊನ್ನೆಯಷ್ಟೇ ದಕ್ಷಿಣ ಆಫ್ರಿಕಾ ವೈರಸ್ ಕೂಡ ಒಬ್ಬರಲ್ಲಿ ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಇದರ ಜೊತೆಗೆ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳಕ್ಕೂ ಕರ್ನಾಟಕ ಬೆದರಿದೆ. ಮುಖ್ಯವಾಗಿ ಬೆಂಗಳೂರಿಗೆ ಈ ಎರಡು ರಾಜ್ಯಗಳಿಂದ ದೊಡ್ಡ ಮಟ್ಟದಲ್ಲಿ ಆತಂಕ ಇದೆ. ಹೀಗಿದ್ದರೂ ಕೂಡ ಬೆಂಗಳೂರಿಗರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಯಾವ ನೀತಿ- ನಿಯಮಗಳಿಗೂ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ.
ಹೀಗಾಗೇ ಇವತ್ತು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೊರೋನಾ ಕೇಸ್ ನಿತ್ಯ ಏರಿಕೆ ಕಾಣುತ್ತಿದೆ. ಡಿಸೆಂಬರ್, ಜನವರಿ, ಫೆಬ್ರವರಿಗಿಂತ ಮಾರ್ಚ್ ನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಳ ಕಂಡಿದೆ. ಫೆಬ್ರವರಿಯಲ್ಲಿ ಪ್ರತಿದಿನಕ್ಕೆ ಸರಾಸರಿ 238 ಕೇಸ್ ಇರ್ತಾ ಇತ್ತು. ಈಗ ಮಾರ್ಚ್ ನಲ್ಲಿ 330 ಕೇಸ್ ಗಳು ಆಗುತ್ತಿದೆ. ಪಾಸಿಟಿವ್ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಮುಜಾಗೃತ ಕ್ರಮಗಳ ಬಗ್ಗೆ ಇಂದು ವಿಶೇಷ ಸಭೆ ನಡೆಸಲಾಗಿದೆ. ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿ ಅಧಿಕಾರಿಗಳಿಗೆ ಮುಂದಿನ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆರೋಗ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ ಜತೆ ಸಭೆ ನಡೆಯಲಿದ್ದು ಸಾಮಾಜಿಕ ಅಂತರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ ಅಂತ ಕಮಿಷನರ್ ಹೇಳಿದರು.
ನೈಟ್ ಪಾರ್ಟಿ, ಪಬ್, ಈವೆಂಟ್ಗಳಿಗೆ ಬ್ರೇಕ್ ಬೀಳುವ ಸಾಧ್ಯತೆ.!?
ಅನ್ ಲಾಕ್ ಆದ ಬಳಿಕ ಕೊರೋನಾ, ಮಾಸ್ಕ್, ಸ್ಯಾನಿಟೈಸಿಂಗ್ ಎಂಬುದಕ್ಕೆಲ್ಲಾ ಒಲ್ಲೆ ಎನ್ನುತ್ತಿರುವ ಸಿಲಿಕಾನ್ ಸಿಟಿ ಮಂದಿ, ಲೇಟ್ ನೈಟ್ ಪಾರ್ಟಿ ಪಬ್, ಈವೆಂಟ್ ಗಳು ಅಂತ ಮೈಮರೆತು ಎಂಜಾಯ್ ಮಾಡ್ತಿದ್ದಾರೆ. ಇದು ಮತ್ತೊಂದು ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂಥವುಗಳನ್ನೆಲ್ಲಾ ನಿಷೇಧಿಸುವ ಅಥವಾ ಸಂಖ್ಯೆ ಗೊತ್ತು ಮಾಡುವ ನಿರ್ಧಾರವನ್ನು ಬಿಬಿಎಂಪಿ ಶೀಘ್ರವೇ ತೆಗೆದುಕೊಳ್ಳಲಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಬಿಬಿಎಂಪಿ ಕಮಿಷನರ್ ಸೂಚಿಸಿದ್ದಾರೆ.
ಇದನ್ನು ಓದಿ: Corona Vaccination | ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ
ಸ್ಕೂಲ್, ಕಾಲೇಜ್, ಥೀಯೇಟರ್ ಮೇಲೆ ಬಿಬಿಎಂಪಿ ಹದ್ದಿನ ಕಣ್ಣು.!
ಇನ್ನು ಹೇಳಿದರೆ ಕೇಳದ ಜನರಿಗೆ ಬಿಬಿಎಂಪಿ ಖಡಕ್ ಆಗಿ ರೂಲ್ಸ್ ಜಾರಿ ಮಾಡಲು ಮುಂದಾಗಿದೆ. ಮಾಸ್ಕ್ ಇರಲೇ ಬೇಕು, ಸಾಮಾಜಿಕ ಅಂತರ ಕಾಪಾಡಲೇ ಬೇಕು. ಇಲ್ಲದೆ ಹೋದರೆ ನಿರ್ದಾಕ್ಷಿಣ್ಯವಾಗಿ ದಂಡ ಕಟ್ಟಬೇಕು. ಈ ನಿಟ್ಟಿನಲ್ಲಿ ಸ್ಕೂಲ್ ಹಾಗೂ ಕಾಲೇಜುಗಳ ಮೇಲೆ ಮತ್ತು ಜನ ಸಂದಣಿ ಹೆಚ್ಚಿರುವ ಜಾಗ ಮತ್ತು ಥಿಯೇಟರ್ ಗಳ ಮೇಲೆ ಬಿಬಿಎಂಪಿ ಕಣ್ಣಿಟ್ಟು ಕೂತಿದೆ. ಯಾರೆಲ್ಲಾ ಪ್ರೊಟೋಕಾಲ್ ಅನುಸರಿಸಲ್ವೋ ಅಂಥವರಿಗೆ ಡಬಲ್ ಫೈನ್ ಹಾಕಲೂ ಬಿಬಿಎಂಪಿ ಚಿಂತನೆ ನಡೆಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ