ಶಾಲಾ ಶಿಕ್ಷಕರಿಗೆ ಕೊರೋನಾ ಸೋಂಕು, ಗಾಬರಿಯಲ್ಲಿ ಮಕ್ಕಳು; ಹೆದರುವ ಅಗತ್ಯವಿಲ್ಲ ಎಂದ ಸಚಿವ ಸುಧಾಕರ್

ಶಾಲೆಗಳು ಸುಸೂತ್ರವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ. ಯಾರಿಗಾದರೂ ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಸುಧಾಕರ್​ ತಿಳಿಸಿದ್ದಾರೆ.

ಸಚಿವ ಡಾ.ಕೆ.ಸುಧಾಕರ್.

ಸಚಿವ ಡಾ.ಕೆ.ಸುಧಾಕರ್.

 • Share this:
  ಬೆಂಗಳೂರು (ಜನವರಿ 05); ಕೊರೋನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ. ಪರಿಣಾಮ 10 ತಿಂಗಳ ನಂತರ ಶಾಲಾ ಕಾಲೇಜುಗಳು ಎಂದಿನಂತೆ ಆರಂಭವಾಗಿವೆ. ಹೀಗಾಗಿ ಮಕ್ಕಳೂ ಸಹ ಉತ್ಸಾಹದಿಂದಲೇ ಶಾಲೆಗೆ ತೆರಳಿದ್ದು, ಶಿಕ್ಷಕರು ಮಕ್ಕಳನ್ನು ಸಂತೋಷದಿಂದಲೇ ಬರಮಾಡಿಕೊಂಡಿದ್ದಾರೆ. ಆದರೆ, ದುರಾದೃಷ್ಟವಶಾತ್​ 25 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿರುವುದು ಇದೀಗ ದೃಢಪಟ್ಟಿದೆ. ಹೀಗಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿ ಕಡಿಮೆಯಾಗುವ ಆತಂಕ ಎದುರಾಗಿದೆ. ಆದರೆ, ಈ ಕುರಿತು ಭರವಸೆ ನೀಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, "ಕೊರೋನಾಗೆ ಯಾರೂ ಹೆದರುವ ಅಗತ್ಯವಿಲ್ಲ. ಪೋಷಕರು ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿ. ರಾಜ್ಯ ಸರ್ಕಾರ ಅಗತ್ಯವಾದ ಎಲ್ಲಾ​ ಕ್ರಮಗಳನ್ನೂ ಜರುಗಿಸಲಿದೆ" ಎಂದು ತಿಳಿಸಿದ್ದಾರೆ.

  "ಶಾಲೆ ಆರಂಭವಾದ ನಂತರ 1 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಮರಳಿದ್ದಾರೆ. ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆ. ಈ ನಡುವೆ 25 ಶಿಕ್ಷಕರಿಗೆ ಸೋಂಕು ಧೃಡಪಟ್ಟಿರುವುದು ಅಧಿಕೃತ ಅಲ್ಲ. ಅಲ್ಲದೆ, ಲಕ್ಷದ ಮುಂದೆ 25 ಪ್ರಕರಣಗಳು ದೊಡ್ಡ ವಿಚಾರವಲ್ಲ. ಹೀಗಾಗಿ ಯಾರೂ ಹೆದರುವ ಅಗತ್ಯ ಇಲ್ಲ.  ಶಾಲೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಎಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಬಂದಿದೆ ಎಂಬ ನಿಖರ ಮಾಹಿತಿ‌ ಇಲ್ಲ.

  ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದು ನಂತರ ಧೃಡಪಡಿಸುತ್ತೇನೆ. ಶಾಲೆಗಳು ಸುಸೂತ್ರವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ. ಯಾರಿಗಾದರೂ ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಲಾಗುವುದು" ಎಂದು ಸಚಿವ ಸುಧಾಕರ್​ ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ರೂಪಾಂತರಿ ಕೊರೋನಾ ವೈರಸ್​ ಪೀಡಿತರ ಪ್ರೈಮರಿ ಕಾಂಟಾಕ್ಟ್​ನಲ್ಲಿರುವವರಿಗೆ ಚಿಕಿತ್ಸೆ ನೀಡುವ ಕುರಿತು ಮಾತನಾಡಿರುವ ಸಚಿವ ಸುಧಾಕರ್, "ಸೋಂಕಿತರ ಜೊತೆಗೆ 17 ಜನ ಪ್ರೈಮರಿ ಕಾಂಟಾಕ್ಟ್‌ ಇದೆ. ಇವರನ್ನು ಐಸೋಲೇಷನ್ ಮಾಡಿ ಇವರ ಕಾಂಟಾಕ್ಟ್ ಗಳನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಅವರ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟಾಕ್ಟ್ ಟ್ರೇಸ್ ಮಾಡಲಾಗಿದೆ. ಇದರಿಂದ ಹೆಚ್ಚು ಸೋಂಕು ಹರಡುವುದು ಎಂದು ಕೊಳ್ಳೋದು ಬೇಡ.

  ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡದಲ್ಲಿ ಕೊರೋನಾ ವ್ಯಾಕ್ಸಿನ್ ಹಂಚಿಕೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸಿದ್ಧತೆ

  ಇಂಗ್ಲೆಂಡ್​ನಿಂದ ಕರ್ನಾಟಕಕ್ಕೆ ಆಗಮಿಸಿರುವ ಕೆಲವು ಪ್ರಯಾಣಿಕರು ಕಾಣೆಯಾಗಿದ್ದಾರೆ. ಈವರೆಗೆ 7 ಜನರ ಮಾಹಿತಿ ಮಾತ್ರ ನಮ್ಮಲ್ಲಿದೆ. ಉಳಿದವರನ್ನು ಹುಡುಕುವ ಕೆಲಸ ನಡೆಯುತ್ತಿದೆ. ಈ ಕುರಿತು ಬಿಬಿಎಂಪಿ ಕಮಿಷನರ್ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರನ್ನು ಐಸೊಲೇಷನ್​ಗೆ ಒಳಪಡಿಸಲಾಗುವುದು.

  ಇನ್ನೂ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ಯಾವ ಪ್ರಕರಣಗಳೂ ಪತ್ತೆಯಾಗಿಲ್ಲ. ಆದರೆ, ಜಿಲ್ಲಾವಾರು ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
  Published by:MAshok Kumar
  First published: