Coronavirus Guidelines: ಥಿಯೇಟರ್​ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್; ಜಿಮ್, ಈಜುಕೊಳ ಬಂದ್

ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳು, ರಾಜಕೀಯ ಸಭೆ ಅಥವಾ ರ್ಯಾಲಿಗಳು ಸೇರುವುದಾದರೆ ಅತೀ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಸರ್ಕಾರ ಆದೇಶಿಸಿದೆ.

ಸಿನಿಮಾ ಥಿಯೇಟರ್

ಸಿನಿಮಾ ಥಿಯೇಟರ್

  • Share this:
    ಬೆಂಗಳೂರು(ಏ.02): ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ದಿನೇ ದಿನೇ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಅಂದರೆ ಇಂದು, ರಾಜ್ಯದಲ್ಲಿ 5 ಸಾವಿರ ಸನಿಹಕ್ಕೆ ಕೊರೋನಾ ಕೇಸ್ ತಲುಪಿವೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ, ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಯಾವುದೇ ಲಾಕ್​ಡೌನ್​ ಅಥವಾ ನೈಟ್​ ಕರ್ಫ್ಯೂ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಥಿಯೇಟರ್​ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ,  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 6-9ನೇ ತರಗತಿಗಳು ಬಂದ್,  ಜಿಮ್​, ಈಜುಕೊಳ ಬಂದ್ ಮಾಡಲಾಗಿದೆ. ಜೊತೆಗೆ  ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳು, ರಾಜಕೀಯ ಸಭೆ ಅಥವಾ ರ್ಯಾಲಿಗಳು ಸೇರುವುದಾದರೆ ಅತೀ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಸರ್ಕಾರ ಆದೇಶಿಸಿದೆ.

    ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳು

    • ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾಗಮ ಸೇರಿದಂತೆ 6-9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11 ಮತ್ತು 12ನೇ ತರಗತಿಗಳು ಎಂದಿನಂತೆ ಮುಂದುವರೆಯಲಿವೆ. ಹಾಜರಾತಿ ಕಡ್ಡಾಯವಲ್ಲ.

    • ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್​ಗಳ ತರಗತಿಗಳಲ್ಲಿ ವಿಶ್ವವಿದ್ಯಾಲಯಗಳ ಅಥವಾ ಮಂಡಳಿಯ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ತರಗತಿಗಳು ಸ್ಥಗಿತ.

    • ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಮಾತ್ರ ಪ್ರಾರ್ಥನೆ ಮಾಡಲು ಅವಕಾಶ, ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.

    • ಅಪಾರ್ಟ್​ಮೆಂಟ್​ ಕಾಂಪ್ಲೆಕ್ಸ್​​ಗಳಲ್ಲಿ ಜನರು ಸೇರುವ ಸ್ಥಳಗಳಾದ ಜಿಮ್​, ಪಾರ್ಟಿ ಹಾಲ್​​ ಅಥವಾ ಹೌಸ್​ ಕ್ಲಬ್​ಗಳು, ಈಜು ಕೊಳಗಳು ಮುಚ್ಚಲ್ಪಟ್ಟಿರುತ್ತವೆ.

    • ಎಲ್ಲಾ ಜಿಮ್​ಗಳು ಹಾಗೂ ಈಜುಕೊಳಗಳು ಮುಚ್ಚಲ್ಪಟ್ಟಿರುತ್ತವೆ.

    • ಯಾವುದೇ ರೀತಿಯ ರ್ಯಾಲಿಗಳು, ಮುಷ್ಕರ, ಧರಣಿಗಳಿಗೆ ಅವಕಾಶವಿಲ್ಲ.

    • ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ.

    • ಕಚೇರಿಗಳು ಹಾಗೂ ಇತರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಪಾಲಿಸುವುದು.

    • ಬಹಳ ಮುಖ್ಯವಾಗಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬಿಬಿಎಂಪಿ ಸೇರಿದಂತೆ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಹಾಲ್​​​ಗಳಲ್ಲಿ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.



    ರಾಜ್ಯ ಸರ್ಕಾರವು ಏಕಾಏಕಿ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಿನಿಮಾ ಥಿಯೇಟರ್​​ಗಲ್ಲಿ ಶೆ.50 ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ ಮಾಡಿರುವುದಕ್ಕೆ ಸ್ಯಾಂಡಲ್​ವುಡ್​​ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಸ್ಟಾರ್​ ನಟರ ಸಾಲು-ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ನಿನ್ನೆ ತಾನೇ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿದೆ. ಈಗ ಸರ್ಕಾರ ಏಕಾಏಕಿ ಶೇ.50ರಷ್ಟು ಸೀಟಿಂಗ್ ವ್ಯವಸ್ಥೆ ಮಾಡಿರುವುದರಿಂದ ಸಿನಿಮಾ ತಂಡ ಆಕ್ಷೇಪ ವ್ಯಕ್ತಪಡಿಸಿದೆ.
    Published by:Latha CG
    First published: