Coronavirus: ಆನೇಕಲ್ ತಾಲ್ಲೂಕಿನ 2 ಖಾಸಗಿ ಶಾಲೆಗಳಲ್ಲಿ ಕೊರೋನಾ ಸ್ಫೋಟ; 46 ಮಂದಿಯಲ್ಲಿ ಸೋಂಕು ಪತ್ತೆ!

ಖಾಸಗಿ ಶಾಲಾ ಕಾಲೇಜು ಅದರಲ್ಲು ಬೋರ್ಡಿಂಗ್ ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದ್ದು, ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ನಿಯಮಿತವಾಗಿ ಕೊರೋನಾ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ.

ಆನೇಕಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮಂಜುನಾಥ್

ಆನೇಕಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮಂಜುನಾಥ್

  • Share this:
ಆನೇಕಲ್ : (Anekal) ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎನ್ನುವ ಗಾದೆ ಮಾತಿನಂತೆ ಇಳಿಕೆಯಾಗಿದ್ದ ಕೊರೋನಾ ಸೋಂಕು (Coronavirus) ಮತ್ತೆ ಉಲ್ಬಣಗೊಂಡಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎರಡು ಖಾಸಗಿ ಶಾಲೆ ಮತ್ತು ಕಾಲೇಜಿನಲ್ಲಿ ಒಟ್ಟು 46 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ (DC Manjunath Visit To Anekal) ಆನೇಕಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಖಾಸಗಿ ಶಾಲೆ ಮತ್ತು ಚಂದಾಪುರ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ಮೂರು ದಿನಗಳ ಹಿಂದೆ ದೊಮ್ಮಸಂದ್ರ ಖಾಸಗಿ ಬೋರ್ಡಿಂಗ್ ಶಾಲೆಯಲ್ಲಿ 34 ಮಂದಿಯಲ್ಲಿ  ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಿನ್ನೆ ಚಂದಾಪುರ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ 12 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮೊದಲು 3 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಪ್ರಾಥಮಿಕ ಸಂಪರ್ಕಿತ 56 ಮಂದಿಯನ್ನು  ಟೆಸ್ಟ್ ಗೆ ಒಳಪಡಿಸಿದಾಗ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ ವಿದ್ಯಾರ್ಥಿಗಳಿಗೂ ಸ್ವಾಬ್ ಟೆಸ್ಟ್ ಮಾಡಿಸಲಾಗುತ್ತಿದೆ.

ಈಗಾಗಲೇ ದೊಮ್ಮಸಂದ್ರ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಶಾಲೆ ಸಹ ಕ್ಲೋಸ್ ಮಾಡಲಾಗಿದೆ. ಸೋಂಕಿತರನ್ನು ಐಸೋಲೆಷನ್ ಗೆ ಒಳಪಡಿಸಲಾಗಿದೆ. ನರ್ಸಿಂಗ್ ಕಾಲೇಜಿನ 9 ವಿಧ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್​ನಲ್ಲಿ ಐಸೋಲೇಷನ್ ಗೆ ಒಳಪಡಿಸಲಾಗಿದೆ. ಉಳಿದ ಮೂರು ಮಂದಿಯಲ್ಲಿ ಇಬ್ಬರು ಕೇರಳ ಮತ್ತು ಓರ್ವ ವಿದ್ಯಾರ್ಥಿ ಮುಂಬಯಿಗೆ ಕಳುಹಿಸಲಾಗಿದೆ. ನರ್ಸಿಂಗ್  ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.

ವಸತಿ ಶಾಲೆಗಳಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆ

ಇನ್ನೂ ಖಾಸಗಿ ಶಾಲಾ ಕಾಲೇಜು ಅದರಲ್ಲು ಬೋರ್ಡಿಂಗ್ ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದ್ದು, ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ನಿಯಮಿತವಾಗಿ ಕೊರೋನಾ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸುವವರಿಗೆ ಕೊರೋನಾ ಟೆಸ್ಟ್ ಸೇರಿದಂತೆ ಆರೋಗ್ಯದ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಅದರಲ್ಲೂ ಖಾಸಗಿ ನರ್ಸಿಂಗ್ ಕಾಲೇಜಿನ 12 ಮಂದಿ ಸೋಂಕಿತರಲ್ಲಿ 9 ಮಂದಿ ಕೇರಳ ಮೂಲದವರಾಗಿದ್ದಾರೆ. ಅದ್ರಲ್ಲು ಆನೇಕಲ್ ತಾಲ್ಲೂಕಿನಲ್ಲಿ ಹೆಚ್ಚು ಬೋರ್ಡಿಂಗ್ ಶಾಲೆಗಳು, ಪ್ರತಿಷ್ಠಿತ ಆಸ್ಪತ್ರೆಗಳ ಇರುವುದರಿಂದ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಲು ತಿಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಎರಡು ತಿಂಗಳಲ್ಲಿ ಆನೇಕಲ್ ತಾಲ್ಲೂಕಿನ ಮೂರನೇ ಬೋರ್ಡಿಂಗ್ ಖಾಸಗಿ ಶಾಲೆ ಮತ್ತು ಕಾಲೇಜಿನಲ್ಲಿ ಕೊರೋನಾ ಸ್ಪೋಟಗೊಂಡಿದೆ. ಹಾಗಾಗಿ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳು ಆರೋಗ್ಯ ದೃಷ್ಟಿಯಿಂದ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ.

ಇದನ್ನು ಓದಿ: ರೂಪಾಂತರಿ Omicron ಇರುವ ದೇಶಗಳ ಪ್ರಜೆಗಳ ಪ್ರವೇಶ ನಿರ್ಬಂಧಕ್ಕೆ ಕೇಂದ್ರಕ್ಕೆ ಮನವಿ: CM Basavaraja Bommai

ಕಟ್ಟುನಿಟ್ಟಿನ ಕ್ರಮ

ದಕ್ಷಿಣ ಆಫ್ರಿಕಾ, ಬೋಟ್ಸಾವಾನ್, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದೇ ವಿಷಯವಾಗಿ ನಿನ್ನೆ ಆರೋಗ್ಯ ಇಲಾಖೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು.



ವರದಿ : ಆದೂರು ಚಂದ್ರು
Published by:HR Ramesh
First published: